ಕಲ್ಪ ಮೀಡಿಯಾ ಹೌಸ್
ಪುರಂದರದಾಸರು-ವ್ಯಾಸರಾಯರ ಚರಣ ಕಮಲ ದರ್ಶನವೆನಗೇಸು ಜನ್ಮದ ಸುಕೃತ ಫಲದಿ ದೊರಕಿತೊ, ಎನ್ನ ಸಾಸಿರ ಕುಲಕೋಟಿ ಪಾವನವಾಯಿತು ಶ್ರೀಶನ ಭಜಿಸುವುದಕಧಿಕಾರಿ ನಾನಾದೆ ದೋಷರಹಿತವಾದ ಪುರಂದರವಿಠನ ದಾಸರ ಕರುಣವು ಎನ್ನ ಮೇಲೆ ಇರಲಾಗಿ ಎಂದು ಕೊಂಡಾಡುವರು. ಸಂಗ್ರಹಾತ್ಮಕವಾಗಿ ಹೇಳುವುದಾದರೆ ಸಂಗೀತಕ್ಕೊಂದು ಆಯಾಮ ಕಲ್ಪಿಸಿದ ದಾಸಶ್ರೇಷ್ಠರೆಲ್ಲರೂ ವ್ಯಾಸತೀರ್ಥರ ಸನ್ನಿಧಾನ ವಿಶೇಷದಿಂದ ಬಂದವರಲ್ಲದೆ ನಿಜವಾದ ‘ಜಾತ್ಯತೀತರಾಗಿ ಹರಿಪದಗಳನ್ನು ಹಾಡಿ ನಡೆದಾಡಿದವರೆನ್ನಬಹುದು. ಸೋಮನಾಥನೆಂಬ ಕವಿಸಿಂಹನು ಬರದಿರುವ ‘ವ್ಯಾಸಯೋಗಿ ಚರಿತವೆಂಬ ಗ್ರಂಥ ವ್ಯಾಸತೀರ್ಥರ ವಾಕ್ಷಟುತ್ವಕ್ಕೆ, ಔದಾರ್ಯಕ್ಕೆ ರಾಜ್ಯಾಡಳಿತದ ಬಗೆಗಿನ ಅಪಾರವಾದ ವಿದ್ವತ್ತೆಗೆ ಹಿಡಿದ ಕನ್ನಡಿಯಾಗಿದೆ. ತಿರುಪತಿಯ ಶ್ರೀನಿವಾಸನನ್ನು 12 ವರುಷಗಳ ತನಕ ನಿರಂತರ ಪೂಜಿಸಿ ತರುವಾಯ ವಿಜಯನಗರ ಸಿಂಹಾನಾಧೀಶನಾದ ಕೃಷ್ಣದೇವರಾಯನಿಗೆ ರಾಜಗುರುವೆನಿಸಿದವರು ವ್ಯಾಸತೀರ್ಥರು. ಸಂದರ್ಭದಲ್ಲಿ ಸ್ವಯಂಸಿಂಹಾನವನ್ನಲಂಕರಿಸಿ ರಾಜ್ಯಾಡಳಿತವನ್ನು ಮಾಡಿ ಸಂನ್ಯಾಸಿಯಾದ ಸಮಾಜಮುಖಿಯಾಗಿಯೂ ಇರಬೇಕೆಂನ ‘ನಾನಾಜನಸ್ಯ ಶುಶ್ರೂಷ ಕರ್ತವ್ಯಾಕರವನ್ವಿತೇ ಎಂಬ ಮಾತನ್ನು ಪಾಲಿಸಿ ತಿಳಿಸಿಕೊಟ್ಟರು.
ವೈಷ್ಣವ ವೇದಾಂತದ ಮಹಾ ವಿಭೂತಿಗಳಲ್ಲಿ ಶ್ರೀ ವ್ಯಾಸರಾಜರೂ ಒಬ್ಬರು. ದ್ವೈತ ವೇದಾಂತದ ಮುನಿತ್ರಯರಲ್ಲಿ ಒಬ್ಬರೆನ್ನಿಸಿರುವುದು ಇವರ ವೈಶಿಷ್ಟ್ಯ ಶ್ರೀಕೃಷ್ಣದೇವರಾಯ ಮೊದಲಾದ ಚಕ್ರವರ್ತಿಗಳಿಂದ ವಂದ್ಯವಾದ ಉನ್ನತ ತಪಃಶಕ್ತಿ, ಎಂತಹ ಪ್ರತಿವಾದಿಯನ್ನೂ ಮಣಿಸುವ ಅಪ್ರತಿಮವಾದ ಕೌಶಲ. ವಿವಿಧ ಶಾಸ್ತ್ರಗಳಲ್ಲಿನ ತಲಸ್ಪರ್ಶಿಯಾದ ಪಾಂಡಿತ್ಯ, ಶ್ರೀ ವಾದಿರಾಜ ವಿಜಯೀಂದ್ರಂತಹ ಅಪೂರ್ವಶಿಷ್ಯ , ಕುಹಯೋಗದಂತಹ ಅನಿಷ್ಠವನ್ನು ಜಯಿಸಿದ ಆಧ್ಯಾತ್ಮಿಕ ಶ್ರೀಮಂತಿಕೆ, ಮಧ್ಯ ಸಿದ್ಧಾಂತ ನರಸಿಂಹನ ನೇತ್ರತ್ರಯಗಳೆಂದು ಖ್ಯಾತವಾಗಿರುವ ವ್ಯಾಸತ್ರಯಗಳಂತಹ ಉದ್ಗ್ರಂಥಗಳ ರಚನೆ, ಶ್ರೀ ಕನಕದಾಸರಂತಹ ವರ್ಣೇತರರಲ್ಲಿಯ ಗುಣಗಳನ್ನು ಗುರುತಿಸಿ ಮನ್ನಿಸುವ ವಿಶಾಲ ಮನೋಭಾವ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಇಂದೂ ಧಾರ್ಮಿಕ ಸ್ಫೂರ್ತಿ ಕೇಂದ್ರಗಳೆನ್ನಿಸಿರುವ ಪ್ರಾಣಪ್ರತೀಕಗಳ ಪ್ರತಿಷ್ಠಾಪನೆ, ಜನಸಾಮಾನ್ಯರಲ್ಲಿಯೂ ಸಿದ್ಧಾಂತ ತತ್ತ್ತ್ವಗಳನ್ನು ಪ್ರಚುರಪಡಿಸಲೆಂದು ಕನ್ನಡದಲ್ಲಿ ನೂರಾರು ಕೀರ್ತನೆ, ಸುಳಾದಿ ಉಗಾಭೋಗಗಳ ರಚನೆ, ಶ್ರೀ ಪುರಂದರದಾಸರಂತಹ ಮಹನೀಯರನ್ನು ಹರಿದಾಸಕೂಟದ ಪ್ರಥಮಾಧ್ಯಕ್ಷರನ್ನಾಗಿ ಪ್ರತಿಷ್ಠಾಪಿಸಿದ ಔಚಿತ್ಯಪ್ರಜ್ಞೆ, ಮೊದಲಾದ ಅನೇಕ ಕಾರಣಗಳಿಂದಾಗಿ ಶ್ರೀ ವ್ಯಾಸರಾಜರ ಸ್ಥಾನ ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಶ್ರೀ ಮಧ್ವ, ಜಯತೀರ್ಥರ ಅನಂತರ ಬಹುಮುಖ ಸಾಧನಗೈದ ಮಹಾಪುರುಷರು ಎಂಬುದು ಇವರ ಹಿರಿಮೆ. ಇದರಿಂದ ಬಹಳವಾಗಿ ಪ್ರಭಾವಿತನಾದ ಸೋಮನಾಥನೆಂಬ ಮಾಧ್ಯೇತರ ಕವಿಯ ‘ವ್ಯಾಸಯೋಗಿ ಚರಿತವೆಂಬ ಪ್ರೌಢ ಚಂಪೂ ಕಾವ್ಯವು ಇವರ ಜೀವನ ಸಾಧನೆಗಳನ್ನು ತುಂಬಾ ಪರಿಣಾಮಕಾರಿಯಾಗಿ ವಿವರಿಸುತ್ತದೆ. ಶ್ರೀಕೃಷ್ಣದೇವರಾಯನ ಕಾಲವು ವಿಜಯನಗರ ಸಾಮ್ರಾಜ್ಯದ ‘ಸುವರ್ಣಯುಗ ವೆನ್ನಿಸುವಲ್ಲಿ ಆತನ ರಾಜಗುರುಗಳಾಗಿದ್ದ ಇವರ ಪಾತ್ರ ತುಂಬಾ ಪ್ರಮುಖವಾದುದು ಎಂಬ ಅಂಶ ವ್ಯಾಸಯೋಗಿ ಚರಿತೆಯಿಂದ ಸ್ಫೂರ್ತಿ ಪಡುತ್ತದೆ.
ಆನಂತರ ಕಾಲದ ಶ್ರೀ ರಘೋತ್ತತೀರ್ಥರು, ಶ್ರೀ ವಿದ್ಯಾಧೀಶರು, ಶ್ರೀ ಯಾದವಾರ್ಯರು ಶ್ರೀ ರಾಘವೇಂದ್ರ ಸ್ವಾಮಿಗಳು, ಶ್ರೀ ಸತ್ಯನಾಥರು ಮೊದಲಾದ ಎಲ್ಲ ವಿದೃಚ್ಛಿಖಾಮಣಿಗಳು ಇವರನ್ನು ಗೌರವಿಸಿದ್ದಾರೆ; ಇವರ ಗ್ರಂಥಗಳನ್ನು ಆದರದಿಂದ ಉಲ್ಲೇಖಿಸಿದ್ದಾರೆ. ಇವರ ಗ್ರಂಥಗಳನ್ನು ಉದ್ಧರಿಸಿದ ಅನಂತರದ ಒಂದು ಉದ್ಗ್ರಂಥದಲ್ಲಿ ಇಲ್ಲಿ, ಗೌರವಿಸಿದ ಶ್ರೇಷ್ಠಕಾರರಿಲ್ಲ. ಅಧ್ಯಯನ ಮಾಡದ ಶ್ರೇಷ್ಠ ಪಂಡಿತರಿಲ್ಲ, ಕೊಂಡಾಡದ ಪ್ರಮುಖ ಹರಿದಾಸರಿಲ್ಲ.
ತಮ್ಮ ಪ್ರೀತಿಯ ಶಿಷ್ಯ ವಿಜಯೀಂದ್ರ ವಿಷ್ಣುತೀರ್ಥರನ್ನು ಸುರೇಂದ್ರರಿಗೆ ಕಾಣಿಕೆಯಾಗಿತ್ತು ಇವರ ತ್ಯಾಗ ತುಂಬಾ ಅಪೂರ್ವವಾದುದು. ಇದರಿಂದಾಗಿ ಶ್ರೀ ರಾಘವೇಂದ್ರ ಮಠದ ಮೇಲೂ ಇವರ ಪ್ರಭಾವ ನಿಚ್ಚಳವಾಗಿ ಕಾಣುತ್ತದೆ. ಶ್ರೀ ವಿಜಯೀಂದ್ರತೀರ್ಥರು, ಶ್ರೀ ಸುಧೀಂದ್ರತೀರ್ಥರು, ಶ್ರೀ ರಾಘವೇಂದ್ರ ಸ್ವಾಮಿಗಳು, ಕೇಶವಾಚಾರ್ಯ ಪಾಂಡುರಂಗಿ, ಯಾದರೇಂದ್ರರು, ಶ್ರೀ ಲಕ್ಷ್ಮೀನಾಥತೀರ್ಥರು, ಬಿದರಹಳ್ಳಿ ಶ್ರೀನಿವಾಸತೀರ್ಥರು, ಕುಂಡಲಗಿರಿ ಆಚಾರ್ಯರು. ಶ್ರೀ ತರಂಗಿಣಿ ರಾಮಾಚಾರ್ಯರು, ಶ್ರೀಮನ್ನಾರಿ ಕೃಷ್ಣಾಚಾರ್ಯರು ಮೊದಲಾದ ಅನೇಕ ಮಹನೀಯರು ವ್ಯಾಸರಾಜರ ಗ್ರಂಥಗಳ ಮೇಲೆ ವ್ಯಾಖ್ಯಾನ ರಚಿಸಿರುವರು ಪರಮತದವರೆಲ್ಲ ಅವರ ಗ್ರಂಥಗಳ ಮೇಲೆಯೇ ಅಧರ್ಮದ ಖಂಡನೆ ಬರೆಯುವ ಪ್ರಯತ್ನ ನಡೆಸಿದ್ದಾರೆ. ವ್ಯಾಖ್ಯಾನದ ದೃಷ್ಟಿಯಿಂದಲೇ ಆಗಲಿ, ಮಂಡನದ ದೃಷ್ಟಿಯಿಂದಲೇ ಆಗಲಿ, ಶ್ರೀಮಧ್ವಜಯತೀರ್ಥರ ಅನಂತರದ ಕೃತಿಕಾರರಲ್ಲಿ ಶ್ರೀ ವ್ಯಾಸರಾಜರದೇ ಅಗ್ರಸ್ಥಾನ ಶ್ರೀರಾಘವೇಂದ್ರತೀರ್ಥರು, ಶ್ರೀ ಸತ್ಯನಾಥತೀರ್ಥರು ಮೊದಲಾದ ಮಹಾನುಭಾವರು ಇವರನ್ನು ಬಹು ವಿಧವಾಗಿ ಕೊಂಡಾಡಿದ್ದಾರೆ ಇವರ ‘ನ್ಯಾಯಾಮೃತದ ಅಧ್ಯಯನ, ವಾದಪ್ರಸ್ಥಾನದ ಪ್ರಾವೀಣ್ಯಕ್ಕೂ, ‘ಚಂದ್ರಿಕೆಯ ಅಧ್ಯಯನವು ಸೂತ್ರ ಪ್ರಸ್ಥಾನದ ಪ್ರಾವೀಣ್ಯಕ್ಕೂ, ತರ್ಕತಾಂಡವದ ಅಧ್ಯಯನವು ಪ್ರಮಾಣ ಪ್ರಸ್ಥಾನದ ಪ್ರಾವೀಣ್ಯಕ್ಕೂ ಮುಖ್ಯ ಆಕರಗಳನ್ನೇನಿಸಿವೆ.
ಪ್ರತಿವಾದಿಗಳ ಗ್ರಂಥವನ್ನು ಕ್ಷಣಮಾತ್ರದಲ್ಲೇ ಶತಶಃ ಖಂಡಿಸಿದ ಇವರ ಅಪಾರ ವೈದಾಷ್ಯಕ್ಕೆ ಪರಮಾಶ್ಚರ್ಯಪಟ್ಟ ಶ್ರೀ ಕೃಷ್ಣದೇವರಾಯನು ಸರ್ವ ಸಮರ್ಪಣಭಾವವನ್ನು ತಳೆದು ‘ರತ್ನಾಭಿಷೇಕವನ್ನೇ ಉಲ್ಲೇಖ ‘ವ್ಯಾಸಯೋಗಿ ಚರಿತೆಯಲ್ಲಿ ಬಂದಿದೆ. ಬಹು ಸಂಸ್ಕೃತಿಯುಳ್ಳ ನಮ್ಮ ದೇಶದಲ್ಲಿ ಬಹಳಷ್ಟು ಭಕ್ತಿಯ ಮಾರ್ಗಗಳನ್ನು ತಿಳಿಸಿದ ಪಂಥಗಳಿವೆ. ಜನರು ತಮ್ಮ ಪಂಥದ ಗುರುಗಳು ನೀಡಿದ ಮುಕ್ತಿಯ ಮಾರ್ಗಗಳನ್ನನುಸರಿಸಿ ಅನುಯಾಯಿಗಳಾಗಿದ್ದಾರೆ.
ವ್ಯಾಸಸಾಹಿತ್ಯದ ಅಭಿಷಿಕ್ತ ದೊರೆ ವ್ಯಾಸತೀರ್ಥರು
ಒಂದು ನಿರ್ದಿಷ್ಟವಾದ ಸಾಹಿತ್ಯಪ್ರಕಾರ ಪ್ರಚುರತೆ ಪಡೆಯಬೇಕಿದ್ದಲ್ಲಿ ಅದರ ಹರವು ಅಗಾಧತೆ ಹಾಗೂ ತೀಕ್ಷ್ಣತೆಗಳೆಲ್ಲವೂ ಕಾರಣವಾಗುವುವು. ಮುಖ್ಯವಾಗಿ ಆ ಬಗೆಯ ಸಾಹಿತ್ಯ ಪ್ರಕಾರವು ಜನಮಾನಸವನ್ನು ಸೇರಿ ಸಾಮಾಜಿಕವಾಗಿ ಕ್ರಾಂತಿಕಾರವಾಗಿ ಸನ್ಮಾರ್ಗದಲ್ಲಿ ಪ್ರೇರೇಪಿಸಬೇಕು. ಅದನ್ನೇ ಜ್ಞಾನಿಗಳು ಶಾಸ್ತ್ರವೆನ್ನುವರು. ಇಂತಹ ಶಾಸ್ತ್ರದ ಒಳಪಟ್ಟುಗಳನ್ನು ತಿಳಿಸಿಕೊಟ್ಟ ಮಹನೀಯರು ವ್ಯಾಸರ ಹೃದಯವೆಂದೇ ಪೂಜಿಸಲ್ಪಡುವ ಶ್ರೀಮದಾನಂತತೀರ್ಥ ಭಗವತ್ಪಾದಚಾರ್ಯರು. ಅವರ ಮಾರ್ಗದರ್ಶನದಲ್ಲಿ ಚಿಮ್ಮಿದ ತೇಜೋಪುಂಜಗಳು ಎಂದಿಗೂ ಮರೆಯಲಾಗದ ಮಹಿಮಾನ್ವಿತರು ಹಲವು ನೂರುಗಳನ್ನು ದಾಟುವರು. ಅದರಲ್ಲಿ ಅಧಿಕೃತವಾಗಿ ವ್ಯಾಸಸಾಹಿತ್ಯಕ್ಕೆ ರಾಜನ ಮೊಹರನ್ನು ಪಡೆದ ಪ್ರಾತಃಸ್ಮರಣೀಯರು ‘ಶ್ರೀವ್ಯಾಸರಾಜರು.
ದಾಸಸಾಹಿತ್ಯವೆಂಬ ಪ್ರಕಾರವನ್ನು ಸರಳೀಕರಿಸಿದ, 1447ರಲ್ಲಿ ಮೈಸೂರಿನ ಬಳಿಯಿರುವ ಬನ್ನೂರಿನಲ್ಲಿ ರಾಮಾಚಾರ್ಯ- ಲಕ್ಷ್ಮೀದೇವಿ ದಂಪತಿಯಲ್ಲಿ ಅವತರಿಸಿದ ‘ಯತಿರಾಜನು ತರುವಾಯ ಚೆನ್ನಪಟ್ಟಣದ ಬಳಿಯಲ್ಲಿರುವ ಅಬ್ಬೂರಿನಲ್ಲಿ ಇಂದಿಗೂ ಬಳಿಬರುವ ಭಕ್ತರನ್ನು ಹರಸುವ ಪ್ರಾತಃಸ್ಮರಣೆ ಬ್ರಹ್ಮಣ್ಯತೀರ್ಥರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದರು. ಸಾಮಾನ್ಯವಾಗಿ ಜ್ಞಾನಿಗಳನ್ನು ಎರಡು ಬಗೆಯಲ್ಲಿ ಸ್ಮರಿಸುವುದು ವಾಡಿಕೆ. ಹಿನ್ನೆಲೆ-ಬಾಲ್ಯ-ಜೀವನದ ಪ್ರಮುಖ ಘಟ್ಟಗಳು-ಕಾಲಿಕ ಮಹಾಪುರುಷರು ಇತ್ಯಾದಿಗಳನ್ನು ಕೂಲಂಕುಷವಾಗಿ ವಿಚಾರಮಾಡಿ ಆರಾಧಿಸುವುದು ಒಂದು ಬಗೆಯಾದರೆ, ಮತ್ತೊಂದು ಅವರ ಜೀವನಪದ್ಧತಿ-ವೈಚಾರಿಕ ನಿಲುವುಗಳು-ಪ್ರಾಚೀನರ ಪಾರಂಪರಿಕ ಚಿಂತನಾದೃಷ್ಟಿ ಮುಂತಾದವುಗಳು ಎನ್ನಬಹುದು. ಎರಡನೆಯ ಬಗೆಯೊಂದಿಗೆ ಶ್ರೀವ್ಯಾಸತೀರ್ಥರ ವಿಚಾರಗಳತ್ತ ಮನಮಾಡೋಣ.
ಪ್ರಹ್ಲಾದಾವತಾರಿಗಳು ವ್ಯಾಸರಾಜರು: ಶಂಕುಕರ್ಣನೆಂಬ ದೇವನೇ ಮುಂದೆ ಕಯಾದು ಪುತ್ರನಾಗಿ ಬಳಿಕ ವ್ಯಾಸರಾಜರಾಗಿ ತರುವಾಯ ರಾಘವೇಂದ್ರಸ್ವಾಮಿಗಳಾಗಿ ಭೂಭಾರಕ್ಕೆ ಮೂಲವೆನಿಸಿದ ಅಸುರೀವಿದ್ಯೆಯನ್ನು ತೊಲಗಿಸುವರೆಂಬ ಉಲ್ಲೇಖವು ನೃಸಿಂಹಪುರಾಣದಲ್ಲಿ ಸ್ವಷ್ಟವಾಗಿರುವ ಕಾರಣ ವ್ಯಾಸರಾಜರು ಮಹಿಮಾಶಿಯರೆಂಬ ಮಾತು ಅತಿಶಯೋಕ್ತಿಯಲ್ಲ. ಅಲ್ಲದೆ, ಚತುಃಷಷ್ಠಿ ಕಲಾನಿಪುಣರೆನಿಸಿದ ವಿಜಯೀಂದ್ರತೀರ್ಥರು ವ್ಯಾಸರಾಜರನ್ನು ಸ್ತುತಿಸುವ ಸಂದರ್ಭದಲ್ಲಿ ‘ಪ್ರಹ್ಲಾದಸ್ಯಾವತಾರೋಸೌ ಎಂದು ಗುರುಗಳ ಸ್ವರೂಪ ನಿರ್ದೇಶಿಸಿ ಅವರ ವಾಗ್ಝರಿಕುರಿತಂತೆ ‘ಪಾಠಾಯಂತಂ ಮಧ್ವನಯಂ ಮೇಘ ಗಂಭೀರಯಾಗಿರಾ ಧ್ಯಾಯನ್ನವರ್ತಯೇದ್ಯಸ್ತು ಭಕ್ತಯ ಮೇಧಾಂ ಸ ವಿಂದತಿ ಎಂದು ಆಚಾರ್ಯ ಮಧ್ವರು ಉಲ್ಲೇಖಿಸಿರುವ ಶೃತ್ಯಾದಿಗಳನ್ನು ನಯಕ್ಕೆ ಚ್ಯುತಿಬಾರದಂತೆ ಅಮೋಘವಾಗಿ ವ್ಯಾಖ್ಯಾನಿಸುವುದರೊಂದಿಗೆ ಪಂಡಿತ ಮಂಡಲಿಗೆ ಮಹದುಪಕಾರವನ್ನು ಮಾಡಿದ್ದಾರೆಂದು ಸಂಸ್ಮರಿಸುವರು. ವಿಜಯದಾಸರೂ ತಮ್ಮ ಸುಳಾದಿಯಲ್ಲಿ ‘ಪ್ರಹ್ಲಾದನೆ ವ್ಯಾಸಮುನಿಯೇ ರಾಘವೇಂದ್ರ ಅಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾಎಂದು ಪ್ರಾರ್ಥಿಸಿದ್ದಾರೆ.
ಭಗವಾನ್ ವ್ಯಾಸರ ನಿಲುವುಗಳೆಲ್ಲವೂ ಸತ್ಯಕ್ಕೆ ಪರವಾದಂಥವು ಹಾಗೂ ಅನುಭವಕ್ಕೆ ಒರೆಹಚ್ಚುವಂತವು ವಿಪರೀತವಾಗಿ ಅನುಭವವನ್ನೇ ಸುಳ್ಳೆಂದು ಪ್ರತಿಪಾದಿಸಿದ ವೇದಾಂತದ ಸೊಗಡಲ್ಲಿ ಹೊರಳಿದ ಇಸಂಗಳು ಕಾಲಘಟ್ಟದಲ್ಲಿ ಬಂದುಹೋದವು. ನೆನಪಲ್ಲಿ ಉಳಿದ ಮತಗಳು ಕೆಲವಾದರೂ ತಾತ್ತ್ವಿಕವಾಗಿ ಎತ್ತರಕ್ಕೇರಿದ್ದು ತತ್ತ್ವವಾದವೊಂದೇ ಎನ್ನಬಹುದು. ಅದಕ್ಕೆ ಕಾರಣವಿಷ್ಟೇ ಕಾಣುವ ಜಗತ್ತು. ಅದರ ಹಿಂದಿನ ವ್ಯಾಪಾರಗಳು. ಅದರಲ್ಲಿ ಭಾಗವಹಿಸುವ ಜೀವಗಳು, ಅವುಗಳ ಬಯಕೆಗೆ ವಸ್ತುವಾದ ಪದಾರ್ಥಗಳು ಹೀಗೆ ಎಲ್ಲವೂ ಪರಸ್ಪರ ಒಂದಕ್ಕಿಂತ ಒಂದು ಭಿನ್ನಭಿನ್ನವಾಗಿರುವುದು ಬುದ್ಧಿಬಲಿತ ವ್ಯಕ್ತಿಗೆ ಅನುಭವವಾಗುವುದಷ್ಟೇ. ಅದನ್ನೇ ಪ್ರಶ್ನಿಸಿದ ಮನುಷ್ಯ ಉತ್ತರಕ್ಕೆ ಮನಮಾಡದೆ ತಾನೇ ದೇವರೆಂದು ಕರೆದುಕೊಂಡು ಮೆರೆದಿದ್ದು ಸಣ್ಣತನವಲ್ಲವೇ? ಆಚಾರ್ಯ ಮಧ್ವರು ಸಾದರಪಡಿಸಿದ ಪಂಚಭೇದ ಸಿದ್ಧಾಂತವನ್ನು ಇನ್ನಷ್ಟು ವಿಸ್ತರಿಸಿದ ಶ್ರೇಯಸ್ಸು ವ್ಯಾಸತೀರ್ಥರಿಗೆ ಸಲ್ಲುವುದು. ವ್ಯಾಸರಾಜರ ‘ಶ್ರೀಮನ್ಮದ್ವಮತೇ.. ಅಖಿಲಾಮ್ಮಯೈಕವೇದ್ಯೋ ಹರಿಃ ಎಂಬ ಪ್ರಮೇಯ ನವಮಾಲಿಕಾಸ್ತೋತ್ರದಲ್ಲಿ ತತ್ತ್ವವಾದದ ಸಾರವೆನಿಸಿದ ಒಂಭತ್ತು ಪ್ರಮೇಯಗಳನ್ನು ಸಂಗ್ರಹ ಮಾಡಿ ಇದನ್ನು ಅನುಸರಿಸಿದರೆ ಜನುಮ ಸಾರ್ಥಕವೆಂದು ಉದ್ಧಾರದ ಹೆದ್ದಾರಿ ತೋರಿದ್ದಾರೆ. ವ್ಯಾಸತ್ರಯಗಳೆಂದೇ ಪ್ರಥಿತವಾದ ಚಂದ್ರಿಕಾ, ತರ್ಕತಾಂಡವ, ನ್ಯಾಯಾಮೃತವು ಕೇವಲ ದುರ್ವಾದಿಗಳ ಹುಟ್ಟಡಗಿಸುವ ಗ್ರಂಥಗಳಾಗಿರದೆ ತತ್ತ್ವವಾದ ತೀಕ್ಷ್ಣತೆಯನ್ನೂ ಬಿಂಬಿಸುವ ವಿಚಾರಸರಣಿಗಳಾಗಿವೆ. ಇದನ್ನೇ ಗುರುಗುಣಸ್ತವನದಲ್ಲಿ ವಾದೀಂದ್ರತೀರ್ಥರು- ‘ನೇತ್ರಾಣೀವ ತ್ರಯೋಪಿ ತ್ರಿಭುವನಮಿಂಧತೇ ಯತ್ಪ್ರಬಂಧಾಃ ಎಂದು ಧನ್ಯತೆಯೊಂದಿಗೆ ಕೊಂಡಾಡಿದ್ದಾರೆ. ಇಂದಿಗೂ ಪಂಡಿತಮಂಡಲಿಗೆ ಈ ಗ್ರಂಥಗಳ ಆಂತರ್ಯವರಿವ ಹಸಿವು ತಣಿಯದಿರುವುದು ಇದರ ಹರವಿಗೆ ಸಾಕ್ಷಿಯಾಗಿದೆ. ತಾತ್ಪರ್ಯಚಂದ್ರಿಕಾ, ಭೇದೋಜ್ಜೀವನ ಮುಂತಾದ 21 ಕೃತಿರತ್ನಗಳನ್ನು ಅನುಗ್ರಹಿಸುವ ಮೂಲಕ ತತ್ತ್ವವಾದದ ವಿಚಾರಸರಣಿಯನ್ನು ಯೋಗ್ಯತಾನುಸಾರವರಿಯಲು ಅನುಗ್ರಹಿಸಿದ್ದಾರೆ.
ದಾಸಸಾಹಿತ್ಯದ ಬೆರಗಿಗೆ ಆಸರೆಯಾದವರು : ವ್ಯಾಸತೀರ್ಥರು ತಾವು ಸಂನ್ಯಾಸ ಪಡೆದಾಗಲೇ ಅವರ ಮೇಲೆ ಹರಿದಾಸಯತಿಯೆಂದೇ ಪ್ರಥಿತರಾದ ಶ್ರೀಪಾದರಾಜರ ಪ್ರಭಾವ ಅಗಾಧವಾಗಿ ಬೀರಿತ್ತು. ವ್ಯಾಸತ್ರಯಗಳಲ್ಲಿನ ಭಾಷೆ ಜಟಿಲವಾದುದು. ಕಾರಣ ಅಲ್ಲಿ ಚರ್ಚಿಸಲ್ಪಟ್ಟ ವಿಚಾರಗಳು ಕತೆಗಳಾಗಿರದೆ ವೇದಾಂತದ ಅಂತಃಸತ್ತ್ವವೆನಿಸಿದ ಪೂರ್ವೋತ್ತರಮೀಮಾಂಸಾ ವಿಚಾರಗಳು. ಮಾಯಾವಾದಿಗಳ ಹುಟ್ಟಡಗಿಸುವ ವಾದಸರಣಿಯನ್ನು ಶಾಸ್ತ್ರನಿಷ್ಠರಿಗೆ ರಸವತ್ತಾಗಿ ಉಣಬಡಿಸಿದ ವ್ಯಾಸತೀರ್ಥರು ತರುವಾಯ ಸಾಮಾನ್ಯರಿಗೂ ಅರ್ಥವಾಗುವಂತೆ ತಮ್ಮ ಭಾಷೆಯನ್ನು ಸರಳೀಕರಿಸಿ ‘ಸಿರಿಕೃಷ್ಣವೆಂಬ ಅಂಕಿತದಲ್ಲಿ ಅನೇಕ ಕೃತಿರಸಾಯನವನ್ನು ಕನ್ನಡದಲ್ಲಿ ಉಣಬಡಿಸಿದ್ದಾರೆ. ವ್ಯಾಸತೀರ್ಥರಿಗೆ ತಮ್ಮ ಬಳಿ ಶಿಷ್ಯವೃತ್ತಿಯನ್ನು ಬಯಸಿ ಬಂದ ಪುರಂದರರು ಹಾಗೂ ಕನಕದಾಸರ ಪ್ರಭಾವವಿತ್ತೆನ್ನಬಹುದು. ಗುರುವಾದವನು ಶಿಷ್ಯನಿಂದ ಸೋಲುಣಲು ಹವಣಿಸುತ್ತಾನೆಂಬ ಮಾತು ಇಲ್ಲಿ ಅಕ್ಷರಶಃ ಸಾಬೀತಾಗಿದೆ. ಇಲ್ಲಿ ಸೋಲೆಂದರೆ ಮನಸೋತರೆಂದಷ್ಟೇ ಗ್ರಹಿಸಬೇಕು. ಪುರಂದರರಿಗಿಂತಲೂ ಮೊದಲು ಅಂತೇವಾಸಿಯೆನಿಸಿದ್ದ ಕನಕದಾಸರು ವ್ಯಾಸತೀರ್ಥರ ವಿದ್ವತ್ತಿಗೆ ಕಣ್ಣಾಲಿಗಳನ್ನು ತುಂಬಿಕೊಂಡು ಎಲ್ಲೆಡೆ ಅವರ ಮಹಿಮೆಯನ್ನು ಸಾರುತ್ತಿದ್ದರೆಂದು ಅವರ ಅನೇಕ ಕೀರ್ತನೆಗಳಲ್ಲಿ ಕಾಣಬಹುದಾಗಿದೆ.
ಹರಿವಾಯುಗಳ ಅಂತರಂಗ ಭಕ್ತರಾದ ವ್ಯಾಸರಾಜರು 732 ಮುಖ್ಯಪ್ರಾಣದೇವರುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಸ್ಥಾಪಿಸಿ ಹರಿಸರ್ವೋತ್ತಮತ್ವವನ್ನು ಹಾಗೂ ವಾಯುಜೀವೋತ್ತಮತ್ವವನ್ನು ಸಾದರಪಡಿಸಿದ್ದಾರೆ. ಸಂಸ್ಮರಣೆ ತರುವ ಬದಲಾವಣೆ: ಚಂದ್ರಿಕಾಚಾರ್ಯರೆಂದೇ ಪ್ರಸಿದ್ಧರಾದ ವ್ಯಾಸರಾಜರು ಕ್ರಿ.ಶ. 1539ರಲ್ಲಿ ಹಂಪೆಯ ತುಂಗಭದ್ರಾತೀರದಲ್ಲಿ ಆನೆಗೊಂದಿಯೆಂಬ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿ ವ್ಯಾಸತೀರ್ಥರ ಗುರುಗಳಾದ ಶ್ರೀಪಾದರಾಜರು ‘ಇದಿರದಾವನು ನಿನಗೀ ಧರೆಯೊಳು ಪದುಮನಾಭವ ದಾಸ ಪರಮೋಲ್ಲಾಸಾ ಎಂಬ ಪದ್ಯದಲ್ಲಿ ತುಂಬು ಅಭಿಮಾನದಿಂದ ಹೊಗಳುತ್ತ ನಿಮ್ಮ ಸ್ಮರಣೆಯಿಂದ ಸಿಗಲಾರದ ಸಂಪತ್ತಾವುದಿಹುದೆಂದು ಪ್ರಶ್ನಿಸಿ ಉತ್ತರಕ್ಕೆ ತಡೆಮಾಡದೆ ನಿಮ್ಮ ಕಡೆ ಬೊಟ್ಟುಮಾಡಿಹರು. ಇಂದು ನಡೆಯುತ್ತಿರುವ ವ್ಯಾಸರಾಜರ ಆರಾಧನಾಂಗವಾಗಿ ಅವರ ಸ್ಮರಣೆ, ಕಾರ್ಯಚಿಂತನೆಗಳನ್ನೆಲ್ಲ ಅವರ ಕುರಿತಂತೆ ಮಾಡಲಾದ ಈ ಸ್ತೋತ್ರದೊಂದಿಗೆ ನೆನೆದು ಧನ್ಯರಾಗೋಣ.
ಆರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿ ಗಜಕೇಸರೀ
ವ್ಯಾಸತೀರ್ಥ ಗುರುರ್ಭೂಯಾತ್ ಆಸ್ಮದಿಷ್ಠಾರ್ಥ ಸಿದ್ಧಯೇ
ತುಂಗಭದ್ರೆಯ ಮಡಿಲಿನಲ್ಲಿ ನವಬೃಂದಾವನ
ನಮ್ಮ ದೇಶದ ಸಂಸ್ಕೃತಿ ಪುರಾತನವಾದುದು. ಹಾಗೆಯೇ ದೇಶದ ಭೂಮಿಯ ಬಹು ಭಾಗವು ಹಲವಾರು ಐತಿಹ್ಯ ಹಾಗೂ ಪಾವಿತ್ರ್ಯತೆಗೆ ಹೆಸರಾಗಿದೆ. ಋಷಿ-ಮುನಿಗಳ, ಸಾಧು-ಸಂತರ, ಸತ್ಪುರುಷರ, ದಾಸರ, ಯತಿಗಳ, ಅವಧೂತರ, ಸೂಫಿಸಂತರ ಸಾಧನೆ ಹಾಗೂ ಮಾನವನ ಜೀವನದ ಮೋಕ್ಷ ಪಡೆಯುವ ಮಾರ್ಗಗಳನ್ನು ತಿಳಿಸಿದ ಕಾರಣ, ಕೆಲವೊಂದು ಪ್ರದೇಶಗಳು ಪಾವಿತ್ರ್ಯತೆ ಪಡೆದಿವೆ. ಇಂತಹ ಕ್ಷೇತ್ರಗಳು ಹೆಚ್ಚಾಗಿ ನದಿ ತೀರ, ನಡುಗೆಡ್ಡೆ, ಗಿರಿಕಂದರ, ಗುಹೆಗಳಲ್ಲಿರುವುದೇ ಸಾಮಾನ್ಯ.
ಪವಿತ್ರ ಕ್ಷೇತ್ರವಾಗಿದ್ದು, ಮಾಧ್ವ ಸಂಪ್ರದಾಯದ ವಿವಿಧ ಮಠಗಳಿಗೆ ಸೇರಿದ ಒಂಬತ್ತು ಯತಿಗಳ ಬೃಂದಾವನಗಳಿರುವ ಪವಿತ್ರ ಸ್ಥಳ ಹಂಪಿ ಹಾಗೂ ಆನೆಗುಂದಿ ಹತ್ತಿರ ಪ್ರಶಾಂತವಾಗಿ ಹರಿಯುತ್ತಿರುವ ತುಂಗಭದ್ರೆಯ ಮಡಿಲ ‘ನಡುಗೆಡ್ಡೆಯಲ್ಲಿದೆ. ಆಯಾ ಕಾಲಘಟ್ಟಗಳಲ್ಲಿ ಒಂಬತ್ತು ಯತಿಗಳು ಜೀವ ಸಮಾಧಿಯಾದ ಸ್ಥಳವಿದು. ಹಾಗಾಗಿ ಈ ಕ್ಷೇತ್ರ ‘ನವಬೃಂದಾವನವೆಂದು ಕರೆಯಲ್ಪಡುತ್ತದೆ. ಮಾಧ್ವ ಸಂಪ್ರದಾಯದ ವಿವಿಧ ಮಠಗಳಿಗೆ ಸಂಬಂಧಿಸಿದ ಉತ್ತರಾಧಿಮಠ, ವ್ಯಾಸರಾಜ ಮಠ, ಶ್ರೀರಾಘವೇಂದ್ರ ಮಠಗಳ ಅನುಯಾಯಿ ಯತಿಗಳ ಬೃಂದಾವನಗಳಿವೆ.
1) ಶ್ರೀ ಪದ್ಮನಾಭ ತೀರ್ಥರು: ನವಬೃಂದಾವನವನ್ನು ಪ್ರವೇಶ ಮಾಡಿದ ಮಾಧ್ವ ಸಂಪ್ರದಾಯದ ಮೊದಲ ಯತಿಗಳು, ಮಧ್ವಾಚಾರ್ಯರ ನಿಕಟ ಅನುಯಾಯಿಗಳಾಗಿದ್ದವರು. ಧ್ವಚಾರ್ಯರ ತರುವಾಯ ‘ದ್ವೈತ ಸಿದ್ಧಾಂತದ ಪೀಠವನ್ನಲಂಕರಿಸಿದವರು. ಶ್ರೀ ಪದ್ಮನಾಭ ತೀರ್ಥರ ಮೂಲ ಹೆಸರು ಶೋಭನ ಭಟ್ಟ. ಆ ಸಮಯದ ‘ತರ್ಕ ಶಾಸ್ತ್ರದ ಉದ್ಭಾಮ ಪಂಡಿತರಾಗಿದ್ದರು.
2) ಶ್ರೀ ಕವೀಂದ್ರ ತೀರ್ಥರು: ಪೂರ್ವಾಶ್ರಮದ ಹೆಸರು ಶ್ರೀ ವಾಸುದೇವ ಶಾಸ್ತ್ರಿ. 2ನೇ ಬೃಂದಾವನವು ಶ್ರೀ ಕವೀಂದ್ರ ತೀರ್ಥ ಯತಿಗಳದ್ದು. ಇವರು 1398ರ ಸುಮಾರಿ ಬೃಂದಾವನ ಪ್ರವೇಶ ಮಾಡಿದರೆಂದು ನಂಬಲಾಗುತ್ತದೆ.
3) ಶ್ರೀ ವಾಗೀಶ ತೀರ್ಥರು: ಮೂಲ ಹೆಸರು ರಘುನಾಥಾಚಾರ್ಯ. ಸಮಕಾಲೀನರಲ್ಲಿ ಮೇರು ವಿದ್ವಾಂಸರಾಗಿದ್ದವರು. ನವಬೃಂದಾವನ ಪ್ರವೇಶಿಸಿದ ಮೂರನೇ ಯತಿಗಳಾಗಿದ್ದಾರೆ. ಸುಮಾರು 1406ರಲ್ಲಿ ಬೃಂದಾವನ ಪ್ರವೇಶ ಮಾಡಿದರೆಂದು ಹೇಳಲಾಗುತ್ತದೆ. ಆರಾಧನೆಯ ತಿಥಿ: ಚೈತ್ರ ಕೃಷ್ಣ ತೃತೀಯಾ.
4) ಶ್ರೀ ರಘುವರ ತೀರ್ಥರು: ತಿರುಕೊಯಿಲೂರ ಶ್ರೀ ರಘೋತ್ತಮ ತೀರ್ಥರ ಗುರುಗಳಾಗಿದ್ದವರು. ದೇಶದ ಉದ್ದಗಲಕ್ಕೂ ಸಂಚರಿಸಿ ಮಧ್ವ ಸಂಪ್ರದಾಯದ ಸಂದೇಶ ತಲುಪಿಸಿದವರು.
5) ಶ್ರೀ ವ್ಯಾಸತೀರ್ಥರು: ಮೇರು ವಿದ್ವಾಂಸರು. ಇವರನ್ನು ವ್ಯಾಸ ತೀರ್ಥರು ಅಥವಾ ವ್ಯಾಸರಾಜರು ಎನ್ನುತ್ತಾರೆ. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀ ಕೃಷ್ಣದೇವರಾಯರನ್ನೊಳಗೊಂಡು ಆರು ರಾಜರುಗಳಿಗೆ ‘ರಾಜ ಗುರುಗಳಾಗಿದ್ದವರು. ವಾದಿರಾಜ ತೀರ್ಥರು ಇವರ ಅನುಯಾಯಿಗಳಾಗಿದ್ದವರು.
ಪುರಂದರದಾಸರು ಹಾಗೂ ಕನಕದಾಸರಿಗೆ ಸ್ಪೂರ್ತಿ ನೀಡಿ ‘ದಾಸ ಸಾಹಿತ್ಯ ರಚನೆಗೆ ಕಾರಣೀಕರ್ತರು. ವಿಜಯನಗರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿದ್ದವರು. ಆಗಿನ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ವಿದ್ಯಾರ್ಥಿಗಳಿದ್ದರೆಂದು ಹೇಳಲಾಗುತ್ತದೆ. ವಿಜಯನಗರದ ಅರಸ ಅಚ್ಯುತದೇವರಾಯ ರಾಜನಾಗಿದ್ದಾಗ ಅಂದರೆ ಸುಮಾರು 1539ರ ಅವಧಿಯಲ್ಲಿ ಬೃಂದಾವನ ಪ್ರವೇಶ ಮಾಡಿದರೆಂದು ಹೇಳಲಾಗುತ್ತದೆ.
6) ಶ್ರೀ ಶ್ರೀನಿವಾಸ ತೀರ್ಥರು: ವಿಜಯನಗರ ಸಾಮ್ರಾಜ್ಯದ ರಾಜನಾದ ಶ್ರೀ ಅಚ್ಯುತದೇವರಾಯನ ರಾಜಗುರುಗಳಾಗಿದ್ದವರು. ವ್ಯಾಸತೀರ್ಥರ ಪೀಠಾಧಿಪತಿಗಳು.
7) ಶ್ರೀರಾಮ ತೀರ್ಥರು: ಶ್ರೀ ಶ್ರೀನಿವಾಸತೀರ್ಥರ ತರುವಾಯ ವ್ಯಾಸರಾಜ ಮಠದ ಪೀಠಾಧಿಪತಿಗಳಾದವರು. ಈ ಸಮಯದಲ್ಲಿ ವ್ಯಾಸರಾಜ ಮಠ ಎರಡು ಭಾಗವಾಯಿತು ಒಂದು; ಅಬ್ಬೂರ ಮಠ (ಕುಂದಾಪುರ ಮಠ) ಇನ್ನೊಂದು: ಸೋಸಲೆ ಮಠ ಅಸ್ತಿತ್ವಕ್ಕೆ ಬಂದವು. ಶ್ರೀಲಕ್ಷ್ಮೀಕಾಂತ ತೀರ್ಥ ಮತ್ತು ಶ್ರೀ ಶ್ರೀಧರ ತೀರ್ಥರು ಶ್ರೀರಾಮ ತೀರ್ಥರಿಂದ ಸನ್ಯಾಸವನ್ನು ಪಡೆದರು.
8) ಶ್ರೀ ಸುಧೀಂದ್ರ ತೀರ್ಥರು: ಶ್ರೀ ರಾಘವೇಂದ್ರ ಸ್ವಾಮಿಗಳ ಗುರುಗಳು. ಆ ಕಾಲದಲ್ಲಿ ಮೇರು ಪಾಂಡಿತ್ಯ ಹೊಂದಿದ ವಿದ್ವಾಂಸರು. ತಂಜಾವೂರಿನ ರಾಜನಾದ ರಘುನಾಥ ಭೂಪಾಲನ ರಾಜಗುರುಗಳಾಗಿದ್ದವರು. ಶ್ರೀ ರಾಘವೇಂದ್ರರು ತಮ್ಮ ಗುರುಗಳ ಬೃಂದಾವನ ಪ್ರವೇಶದ ಸಕಲ ಸಿದ್ಧತೆಯನ್ನು ಮಾಡಿದವರು. ಆರಾಧನೆಯ ತಿಥಿ: ಫಾಲ್ಗುಣ ದ್ವಿತೀಯಾ.
9) ಶ್ರೀ ಗೋವಿಂದ ಒಡೆಯರ್: ಇವರು ವಿದ್ವಾಂಸರಾದರೂ ವ್ಯಾಸ ತೀರ್ಥರ ಜೊತೆ ಚರ್ಚೆಯಲ್ಲಿ ಸೋತು ‘ದ್ವೈತ ಸಿದ್ಧಾಂತವನ್ನೊಪ್ಪಿಕೊಂಡು ಶ್ರೀ ವ್ಯಾಸತೀರ್ಥರ ಅನುಯಾಯಿಗಳಾಗಿ ಬಹಳಷ್ಟು ಶಿಷ್ಯ ಬಳಗ ಹೊಂದುತ್ತಾರೆ.
ಹೀಗೆ ಒಂಭತ್ತು ಯತಿಗಳನ್ನೊಳಗೊಂಡ ನವಬೃಂದಾವನವು ಪವಿತ್ರ ಕ್ಷೇತ್ರವಾಗಿದೆ. ಈ ನವಬೃಂದಾವನದಲ್ಲಿ ಶ್ರೀ ವ್ಯಾಸರಾಜರು ಸ್ಥಾಪಿಸಿದ ವಿಶಿಷ್ಟವಾದ ‘ಅವತಾರತ್ರಯ (ಹನುಮ, ಭೀಮ, ಮಧ್ವ) ಪ್ರಾಣದೇವರ ಮೂರ್ತಿ ಇದೆ. ಮುಖವು ಹನುಮ, ತೋಳೂ-ಭುಜ ಹಾಗೂ ಗದೆಯು ಭೀಮನನ್ನು ಹೋಲುತ್ತದೆ. ಕೈಯಲ್ಲಿ ಹಿಡಿದ ಗ್ರಂಥವು ಮಧ್ವರನ್ನು ಹೋಲುತ್ತದೆ.
ಪ್ರಲ್ಹಾದನ ತಂದೆ ಹಿರಣ್ಯಕಷ್ಯಪನು ಶ್ರೀ ನರಸಿಂಹ ದೇವರಿಂದ ಹತನಾದ ನಂತರ ಭಕ್ತ ಪ್ರಲ್ಹಾದನು ದೋಷ ಪರಿಹಾರಕ್ಕಾಗಿ ಧ್ಯಾನ ಮಾಡಿದನು. ಭಕ್ತ ಪ್ರಹ್ಲಾದನ ಅವತಾರವೇ ಶ್ರೀ ವ್ಯಾಸರಾಜರು.
ಈ ನವಬೃಂದಾವನಕ್ಕೆ ಪ್ರಸಿದ್ಧ ಯತಿಗಳಾದ ಶ್ರೀ ರಾಘವೇಂದ್ರಸ್ವಾಮಿಗಳು ಹಾಗೂ ಶ್ರೀ ರಘೋತ್ತಮ ತೀರ್ಥರು ಹಾಗೂ ಪುರಂದರದಾಸರು ಮತ್ತು ಕನಕ ದಾಸರು ಭೇಟಿ ನೀಡಿದ್ದಾರೆಂದು ಇತಿಹಾಸದಿಂದ ತಿಳಿಯಬಹುದು.
ಸ್ಥಳದ ಪಾವಿತ್ರ್ಯತೆ, ಶಾಂತಿ ಮತ್ತು ನಮ್ರತೆ ಪಾಲಿಸಲು ಈ ಒಂಭತ್ತು ಬೃಂದಾವನದ ಸುತ್ತಲೂ ಹಳದಿ ಬಣ್ಣದ ಗೆರೆ ಎಳೆಯಲಾಗಿದೆ. ಇದನ್ನು ದಾಟಿ ಒಳಗೆ ಹೋಗಬಾರದು. ಧ್ಯಾನದಲ್ಲಿರುವ ಪವಿತ್ರ ಯತಿಗಳಿಗೆ ನಾವು ನೀಡುವ ಗೌರವವೆಂದು ಭಾವಿಸಲಾಗುತ್ತದೆ. ಈ ಹಳದಿ ಗೆರೆಯಗುಂಟ ಹನ್ನೆರಡು ಪ್ರದಕ್ಷಿಣೆಗಳನ್ನು ಹಾಕಿ, ಆಕಳ ತುಪ್ಪದಿಂದ ದೀಪ ಬೆಳಗಿಸಿ ಪ್ರಾರ್ಥನೆ ಮಾಡಿದರೆ ಪರಿಹಾರ ಪ್ರಾಪ್ತಿಯಾಗುತ್ತದೆಂದು ದೃಢ ವಿಶ್ವಾಸವಿದೆ. ಕೆಲವೊಂದು ಸಂದರ್ಭಗಳಲ್ಲಿ ದೀಪೋತ್ಸವ ಹಮ್ಮಿಕೊಂಡು ಸಹಸ್ರಾರು ದೀಪಗಳನ್ನು ಹಚ್ಚುತ್ತಾರೆ.
ಪಕ್ಕದ ವೆಂಕಟಾಪೂರ ಹಳ್ಳಿಯ ವೈದ್ಧೆ ರಮಜಾನಮ್ಮ ಸುಮಾರು 35 ವರ್ಷಗಳಿಂದ ಈ ಕ್ಷೇತ್ರದ ಸ್ವಚ್ಛತೆಯನ್ನು ಕಾಪಾಡುತ್ತಾ ಬಂದಿದ್ದು, ಅವಳ ಭಾವಿಕ ಮನಸ್ಸು ಹಾಗೂ ಭಾವೈಕ್ಯತೆಗೆ ಸಾಕ್ಷಿ. ಇಲ್ಲಿಗೆ ತಲುಪಲು ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಆನೆಗುಂದಿ ಮತ್ತು ಹಂಪಿ ಹಾಗೂ ಹೊಸಪೇಟೆಯಲ್ಲಿಯೂ ವಾಸ್ಯವ್ಯ ಮಾಡಬಹುದು. ಆನೆಗುಂದಿಯಿಂದ ನದಿಯಲ್ಲಿ ಎಂಜಿನ್ ಬೋಟ್ ಮೂಲಕ ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದರೆ ಈ ಕ್ಷೇತ್ರವನ್ನು ತಲುಪಬಹುದು. (ವಿವಿಧ ಮೂಲಗಳಿಂದ)
ಏಪ್ರಿಲ್ 02 ವರೆಗೆ: ಆನೆಗುಂದಿ ನವಬೃಂದಾವನ ಕ್ಷೇತ್ರದಲ್ಲಿ ಶ್ರೀ ವ್ಯಾಸರಾಜರ 482ನೇ ಆರಾಧನಾ ಮಹೋತ್ಸವ ಆಯೋಜನೆ : ಶ್ರೀ ವ್ಯಾಸರಾಜ ಮಠ, ಸೋಸಲೆ
ಶ್ರೀಹಂಸನಾಮಕ ಪರಮಾತ್ಮನಿಂದ ಆರಂಭಗೊಂಡು ಜಗದ್ಗುರು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರಿಂದ ಪ್ರವರ್ತಿತವಾದ ಶ್ರೀಮಜ್ಜಯತೀರ್ಥರು ಹಾಗೂ ಶ್ರೀ ರಾಜೇಂದ್ರತೀರ್ಥರು ಮೊದಲಾದ ಮಹಾಮಹಿಮಶಾಲಿಗಳಿಂದ ಅನುಷ್ಠಿತ ಶುಭಸಂಪ್ರದಾಯ ಪ್ರವರ್ತಕರಾದ, ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಜ ಗುರುಸಾರ್ವಭೌಮರ 482ನೇ ಆರಾಧನಾ ಮಹೋತ್ಸವವನ್ನು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಶಾರ್ವರಿನಾಮ ಸಂವತ್ಸರ ಫಾಲ್ಗುಣ ಬಹುಳ ತೃತೀಯಾ, ಚತುರ್ಥಿ ಮತ್ತು ಪಂಚಮಿಯಂದು ಶ್ರೀಕ್ಷೇತ್ರ ನವವೃಂದಾವನ ಶ್ರೀ ವ್ಯಾಸರಾಜರ ಮೂಲವೃಂದಾವನ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಪ್ರತಿದಿನ ಶ್ರೀವ್ಯಾಸರಾಜರ ಕೃತಿಗಳ ಪರಿಚಯಾತ್ಮಕವಾದ ಪ್ರವಚನ, ವಿದ್ವದ್ಗೋಷ್ಠಿ. ದಾಸವಾಣಿ ಮೊದಲಾದ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಹಾಗೂ ಶ್ರೀವ್ಯಾಸರಾಜರ ಮಧ್ಯಾರಾಧನೆಯಂದು (1.4.2021)ರಂದು ವ್ಯಾಸ ಸಾಹಿತ್ಯದಲ್ಲಿ ವಿಶಿಷ್ಟ ಸಾರಸ್ವತಸೇವೆಯನ್ನು ಸಲ್ಲಿಸಿದ ಅಗ್ರಮಾನ್ಯ ವಿದ್ವಾಂಸರಿಗೆ ‘ಶ್ರೀ ವ್ಯಾಸರಾಜಾನುಗ್ರಹ ಪ್ರಶಸ್ತಿಯನ್ನು, ಡಾ. ಸಿ.ಎಚ್.ಶ್ರೀನಿವಾಸಮೂರ್ತಿ ಆಚಾರ್ಯ ರವರಿಗೆ; ದಾಸ ಸಾಹಿತ್ಯದಲ್ಲಿ ವಿಶಿಷ್ಟ ಸಾರಸ್ವತಸೇವೆಯನ್ನು ಸಲ್ಲಿಸಿದ ಅಗ್ರಮಾನ್ಯ ವಿದ್ವಾಂಸರಿಗೆ ಶ್ರೀ ಪುರಂದರಾನುಗ್ರಹ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ದಾಸ ಸಾಹಿತ್ಯ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ರವರಿಗೆ ನಿರಂತರ ಶ್ರೀಮಧ್ವಶಾಸ್ತ್ರ ಪಾಠ-ಪ್ರವಚನಗಳಲ್ಲಿ ನಿರತರಾದ ವಿದ್ವಾಂಸರಿಗೆ ಸನ್ಮಾನವನ್ನು ಹಾಗೂ ಸಮಾಜದಲ್ಲಿ ವಿಶೇಷವಾಗಿ ಸಾಧನಗೈದ ಸಾಧಕರಿಗೆ ‘ಶ್ರೀವ್ಯಾಸರಾಜ ಸೇವಾಧುರಂಧರ ಎಂಬ ಪ್ರಶಸ್ತಿಯನ್ನು ಪೂಜ್ಯ ಶ್ರೀಪಾದಂಗಳವರು ಅನುಗ್ರಹಿಸಲಿದ್ದಾರೆ.
ಈ ಮೂರೂ ದಿನಗಳಲ್ಲಿ ಪಂಡಿತರಿಂದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ, ಶ್ರೀಮದ್ಭಾಗವತ, ಸರ್ವಮೂಲಗ್ರಂಥಗಳು ಹಾಗೂ ವ್ಯಾಸತ್ರಯಗ್ರಂಥಗಳ ಸಮಗ್ರ ಪಾರಾಯಣ, ಋಕ್ಸಂಹಿತಾ ಯಾಗ, ಶ್ರೀಕೃಷ್ಣಷಡಕ್ರ ಮಂತ್ರ ಹೋಮ, ಪವಮಾನ ಹೋಮ, ವಾಯುಸ್ತುತಿ ಪುರಶ್ಚರಣ ಹೋಮಗಳು ಜರುಗಲಿವೆ. ಉತ್ತರಾಧನೆಯ ದಿನದಂದು ವಾಯುಸ್ತುತಿ ಪಾರಾಯಣವೂ ನಡೆಯುವುದು. ಇದಲ್ಲದೆ ಶ್ರೀವ್ಯಾಸರಾಜರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಅಷ್ಟೋತ್ತರಶತ ಶ್ರೀವ್ಯಾಸರಾಜಸ್ತೋತ್ರ ಪಾರಾಯಣ, ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ, ಗ್ರಂಥಬಿಡುಗಡೆ, ಶ್ರೀಪಾದಂಗಳವರಿಂದ ಆಶೀರ್ವಚನ, ಅಷ್ಟಾವಧಾನ, ಪಲ್ಲಕ್ಕಿ ಉತ್ಸವ, ದೀಪೋತ್ಸವ ಮುಂತಾದ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅನೇಕ ಪೀಠಾಧಿಪತಿಗಳು ಹಾಗೂ ನಾಡಿನ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀವ್ಯಾಸರಾಜ ಮಠದ ದಿವಾನರಾದ ವಿದ್ವಾನ್ ಎಲ್. ಎಸ್. ಬ್ರಹ್ಮಣ್ಯಚಾರ್ಯರು ತಿಳಿಸಿದ್ದಾರೆ.
ಪೂರ್ವಾರಾಧನೆ – ಫಾಲ್ಗುಣ ಬಹುಳ ತೃತೀಯಾ ಬುಧವಾರ 31.3.2021
ದಿವ್ಯ ಉಪಸ್ಥಿತಿ : ಶ್ರೀ ಶ್ರೀ ವಿಶ್ವಭೂಷಣತೀರ್ಥ ಶ್ರೀಪಾದಂಗಳವರು, ಶ್ರೀ ಮಧ್ವನಾರಾಯಣಾಶ್ರಮ , ರಾಮೋಹಳ್ಳಿ , ಬೆಂಗಳೂರು
9.30ಕ್ಕೆ ದಾಸವಾಣಿ ಶ್ರೀ ವಿದ್ವಾನ್ ಸುಮುಖ ಮೌದ್ಗಲ್ಯ ಮತ್ತು ವೃಂದ
ಮಧ್ಯಾಹ್ನ 3.30ಕ್ಕೆ ಶ್ರೀಮದ್ದಶಪ್ರಮತಿದರ್ಶನ ಪ್ರಕಾಶಿನೀ ವಿದ್ವತ್ಸಭಾ
7.30ಕ್ಕೆ ದಾಸವಾಣಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ವಿದ್ವಾನ್ ಅನಂತ ಮಿಸ್ತ್ರಿ
ಮಧ್ಯಾರಾಧನೆ – ಫಾಲ್ಗುಣ ಬಹುಳ ಚತುರ್ಥಿ ಗುರುವಾರ 1.4.2021
ದಿವ್ಯ ಉಪಸ್ಥಿತಿ : ಶ್ರೀ ಕೇಶವನಿಧಿ ತೀರ‌್ಥಶ್ರೀಪಾದರು , ಶ್ರೀಪಾದರಾಜ ಮಠ, ಮುಳಬಾಗಿಲು ಮತ್ತು ಶ್ರೀ ಸುವಿದ್ಯೇಂದ್ರ ತೀರ‌್ಥ ಶ್ರೀಪಾದರು
9.30ಕ್ಕೆ ದಾಸವಾಣಿ-ವಿದ್ವಾನ್ ಅನಂತ ಕುಲಕರ್ಣಿ ಮತ್ತು ತಂಡ
ಮಧ್ಯಾಹ್ನ 3.30ಕ್ಕೆ ಶ್ರೀಮದ್ದಶಪ್ರಮತಿದರ್ಶನ ಪ್ರಕಾಶಿನೀ ವಿದ್ವತ್ಸಭಾ
7.30ಕ್ಕೆ ದಾಸವಾಣಿ- ವಿದ್ವಾನ್ ಮೈಸೂರು ರಾಮಚಂದ್ರಾಚಾರ್ಯ
ಉತ್ತರಾಧನೆ – ಫಾಲ್ಗುಣ ಬಹುಳ ಪಂಚಮಿ ಶುಕ್ರವಾರ 2.4.201
7.00ಕ್ಕೆ ಲಕ್ಷಾವರ್ತಿ ಶ್ರೀಹರಿವಾಯುಸ್ತುತಿ ಮಂತ್ರ ಪಾರಾಯಣ ಸಮಿತಿ ವತಿಯಿಂದ ವಾಯುಸ್ತುತಿ ಪಾರಾಯಣ, ಅಪರಾಹ್ನ 3.00ಕ್ಕೆ ಶ್ರೀ ಶ್ರೀಪಾದಂಗಳವರಿಂದ ವಿಶಿಷ್ಟದಾನಿಗಳಿಗೆ ಸ್ಮರಣಿಕೆ ಪ್ರದಾನ ಹಾಗೂ ಸ್ವಯಂ ಸೇವಕರಿಗೆ ಅನುಗ್ರಹ ಮಂತ್ರಾಕ್ಷತೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
94495 52333/ 94488 69204/ 99451 08393/ 80505 87179/ 99006 61124
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post