ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: 1965 ಏಪ್ರಿಲ್ 2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೇ, ಈ ದಿನವನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಕೂಡಾ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನಸಿ ಅವರ ಕಲ್ಯಾಣ ಕಾರ್ಯಕ್ರಮವನ್ನು ಚಿಂತಿಸಲಾಗುತ್ತದೆ ಎಂದು ಜಿಲ್ಲೆಯ ನಿವೃತ್ತ ಸಿಪಿಐ ಜಿ.ವಿ. ಗಣೇಶಪ್ಪ ಹೇಳಿದರು.
ಇಂದು ನಗರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಾದ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜೀವನದಲ್ಲಿ ಅತ್ಯಂತ ಸುಂದರವಾದ ಘನತೆ ಹೊಂದಿರುವ ಇಲಾಖೆ ಪೊಲೀಸ್ ಇಲಾಖೆ. ಈ ಇಲಾಖೆಯ ಘನತೆ ಗೌರವಗಳನ್ನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ದೇಶದಲ್ಲೆ ಅತ್ಯಂತ ಹೆಮ್ಮೆ ಪಡುವ ನಮ್ಮ ರಾಜ್ಯ ಪೊಲೀಸ್ ಇಲಾಖೆಯನ್ನು ಇದೇ ರೀತಿಯಾಗಿ ಮುಂದುವರೆಸಿಕೊಂಡು ಹೋಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಣತೂಟ್ಟು ಕಾರ್ಯ ನಿರ್ವಹಿಸಬೇಕು. ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದೇ ಆದರೆ ಜೀವನದಲ್ಲಿ ಒಂದು ಉನ್ನತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಇವರು ಹೇಳಿದರು.
ಇಲಾಖೆಯಿಂದ ನಿವೃತ್ತಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ಗುರುತಿನ ಚೀಟಿ, ಕಟ್ಟಡಗಳು, ಗ್ರಂಥಾಲಯ, ನಿವೃತ್ತ ಪೋಲಿಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಭವನ ಹಾಗೂ ಇನ್ನೂ ಹಲವು ಬೇಡಿಕೆಯನ್ನ ಅಧಿಕಾರಿಗಳ ಮುಂದಿಟ್ಟರು. ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಅವರಿಗಾಗಿ ಹಲವಾರು ಯೋಜನೆಯನ್ನು ಮಾಡಲಾಗಿದೆ. ಇವರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪೋಲಿಸ್ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗಿದೆ ಎಂದರು.
ಈ ದಿನದಂದು ಪೋಲಿಸ್ ಸಾಂಕೇತಿಕ ಧ್ವಜಗಳನ್ನು ಪೋಲಿಸ್ ಅಧಿಕಾರಿಗಳಿಗೆ ಆಹ್ವಾನಿತ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹವಾದ ಹಣದಲ್ಲಿ ಶೇ.50ರಷ್ಟು ಮೊತ್ತವನ್ನು ನಿವೃತ್ತ ಪೋಲಿಸ್ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಶೇ.೨೫ರಷ್ಟನ್ನು ಘಟಕದ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ಹಾಗೂ ಶೇ.25ರಷ್ಟು ಮೊತ್ತವನ್ನು ಕೇಂದ್ರ ಕಲ್ಯಾಣ ನಿಧಿಗೆ ಬಳಸಲಾಗುತ್ತದೆ. ಹಾಗೂ ನಿವೃತ್ತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದರೆ ಅವರ ಔಷದೋಪಚಾರ ಖರ್ಚಿಗಾಗಿ ಧನ ಸಹಾಯ ಮಾಡಲಾಗುತ್ತದೆ. ನಿವೃತ್ತಿ ಹೊಂದಿದ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮರಣ ಹೂಂದಿದವರ ಶವ ಸಂಸ್ಕಾರಕ್ಕಾಗಿ ಧನ ಸಹಾಯ ನೀಡಲಾಗುವುದು ಎಂದರು.
೨೦೨೦ನೆಯ ಸಾಲಿನಲ್ಲಿ ಸಾರ್ವಜನಿಕರು ಪೋಲಿಸ್ ಕಲ್ಯಾಣ ನಿಧಿಗೆ ಧನ ಸಹಾಯ ಮಾಡಿದ್ದು, ಇದರ ಮೊತ್ತವು 11,06,361 ರೂ.ಗಳು ಸಂಗ್ರಹವಾಗಿತ್ತು. ಎಲ್ಲಾ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಹಾಗೂ ಜಿಲ್ಲೆಯ ನಿವೃತ್ತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಜಾರಿ ಮಾಡಲಾಗಿರುವ ಹಲವಾರು ಯೋಜನೆಗಳನ್ನ ಕುರಿತಂತೆ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹೆಚ್.ಟಿ. ಶೇಕರ್ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಂಟು ತುಕಡಿಗಳು ಪತಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಸಕಲ ಗೌರವಗಳೂಂದಿಗೆ ಜಿ.ವಿ ಗಣೇಶಪ್ಪರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೋಲೀಸ್ ಅಧೀಕ್ಷಕ ಕೆ.ಎಂ ಶಾಂತರಾಜು, ಮಹಾನಗರ ಪಾಲಿಕೆ ಮೇಯರ್ ಸುನಿತ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಮತ್ತು ನಿವೃತ್ತ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು, ಮತ್ತಿತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post