ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಬಹುತೇಕ ಕಡೆಗಳಲ್ಲಿ ರಸ್ತೆಗಿಳಿದಿಲ್ಲ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ತಬ್ಧವಾಗಿದ್ದು, ದಿನನಿತ್ಯದ ಸಂಚಾರಕ್ಕೆ ಬಸ್‌ಗಳನ್ನೆ ಅವಲಂಬಿಸಿದ್ದ ಸಾರ್ವಜನಿಕರಿಗೆ ಪರದಾಡುವಂತೆ ಆಗಿದೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 20 ಸಾವಿರ ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದು, ಸುಮಾರು 1 ಕೋಟಿ ಪ್ರಯಾಣಿಕರು ಅದನ್ನೇ ಪ್ರಯಾಣಕ್ಕಾಗಿ ಅವಲಂಭಿಸಿದ್ದಾರೆ. ಆದರೆ ಇಂದು ಸಾರ್ವಜನಿಕರಿಗೆ ಸಾರಿಗೆ ಬಸ್ಸುಗಳು ಇಲ್ಲದೆ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿ ಪರಿಣಮಿಸಿದ್ದು, ಇದನ್ನೇ ಲಾಭವಾಗಿ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಹಲವು ಕಡೆಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ದರಕ್ಕೆ ಬೇಡಿಕೆ ಇರುತ್ತಿರುವುದು ವರದಿಯಾಗಿದೆ.
ಸಾರ್ವಜನಿಕ ಸರ್ಕಾರಿ ಬಸ್ ಸೇವೆ ಇಲ್ಲದ ಕಾರಣ ಖಾಸಗಿ ಬಸ್ಸುಗಳು ಇಂದು ರಸ್ತೆಗಳಲ್ಲಿ ಹೆಚ್ಚಾಗಿ ಓಡಾಡಿಕೊಂಡಿದ್ದು, ಪರಿಸ್ಥಿತಿಯ ಲಾಭವನ್ನು ಖಾಸಗಿ ಬಸ್ಸುಗಳ ಮಾಲೀಕರು ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುವುದು, ಕೆಲವೆಡೆ ಪ್ರಯಾಣಿಕರಿಂದ ದರ ಸುಲಿಗೆ ಮಾಡುವುದು ಕಂಡುಬರುತ್ತಿದೆ.
ಮುಷ್ಕರ ಏಕೆ:
6ನೆಯ ವೇತನ ಆಯೋಗದ ಶಿಫಾರಸ್ಸಿನಂತೆ ತಮಗೆ ರಾಜ್ಯ ಸರ್ಕಾರ ವೇತನ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ನಿಗಮದ ಸುಮಾರು 1.30 ಲಕ್ಷ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಸಾರ್ವಜನಿಕರ ಪ್ರಯಾಣಕ್ಕೆ ಬದಲಿ ವ್ಯವಸ್ಥೆ:
ಸಾರಿಗೆ ಇಲಾಖೆ ಆಯುಕ್ತ ಎನ್. ಶಿವಕುಮಾರ್ ಮಾತನಾಡಿ, ಸಾರ್ವಜನಿಕರಿಗಾಗಿ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿ ಬಸ್ಸುಗಳು ಮತ್ತು ಮಿನಿ ಬಸ್ಸುಗಳ ಓಡಾಟಕ್ಕೆ ನಿರ್ಧರಿಸಲಾಗಿದೆ. ಮುಷ್ಕರ ಸಂದರ್ಭದಲ್ಲಿ ಖಾಸಗಿ ವಾಹನಗಳು ಓಡಾಡಲಿವೆ. ಮುಷ್ಕರದಿಂದ ಕೆಲಸಕ್ಕೆ ಹೋಗುವವರಿಗೆ ಮತ್ತು ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು. ಸಾಧ್ಯವಾದಷ್ಟು ಮಟ್ಟಿಗೆ ಬದಲಿ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post