ಕಲ್ಪ ಮೀಡಿಯಾ ಹೌಸ್
ಸಾಗರ: ಸಿಬ್ಬಂದಿಗಳ ಹಾಜರಾತಿ ಪುಸ್ತಕ ಕೊಡಲು ವಿಳಂಬ ಧೋರಣೆ ಅನುಸರಿಸಿ, ಅನುಚಿತ ವರ್ತನೆ ಮಾಡಿದ ಹಿನ್ನೆಲೆಯಲ್ಲಿ ಸಾಗರ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಶಾಸಕ ಎಚ್. ಹಾಲಪ್ಪ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು 10:30 ಕ್ಕೆ ನಿಗದಿಯಾಗಿದ್ದ ಸಾಗರ ನಗರಸಭೆಯ ಆಶ್ರಯ ಸಮಿತಿ ಸಭೆಗೆ ಆಗಮಿಸಿದಾಗ ಯಾವುದೇ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಇರುವುದನ್ನು ಗಮನಿಸಿ, ಕಚೇರಿ ವ್ಯವಸ್ಥಾಪಕರಿಗೆ ಸಿಬ್ಬಂದಿಗಳ ಹಾಜರಾತಿ ಪುಸ್ತಕ ನೀಡಲು ಕೇಳಿದರು. ಆದರೆ, ಹಾಜರಾತಿ ಪುಸ್ತಕ ಪುಸ್ತಕ ನೀಡಲು ಸಿಬ್ಬಂದಿಗಳು ವಿಳಂಬ ಮಾಡಿದರು. ಇದರಿಂದ ಕೆರಳಿದ ಶಾಸಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಕಾಲದಲ್ಲಿ ನೀಡದೆ ವಿಳಂಬ ಮಾಡಿ ಅನುಚಿತ ವರ್ತನೆ ತೋರಿದ ನೌಕರರಿಗೆ ನೋಟಿಸ್ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಹಾಜರಾತಿ ಪುಸ್ತಕ ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ನೌಕರರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.
ಆಶ್ರಯ ಸಮಿತಿ ಸಭೆ
ಇನ್ನು, ಶಾಸಕ ಹಾಲಪ್ಪನವರು ಇಂದು ನಗರಸಭೆ ಆಶ್ರಯ ಸಮಿತಿ ಸಭೆ ನಡೆಸಿ, ನಿವೇಶನ ಮಂಜೂರು ಮಾಡುವಂತೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ, ನಿವೇಶನ ವಿತರಿಸಲು ಭೂಮಿ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಸಮಿತಿ ಸದಸ್ಯರು, ಆಯುಕ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post