ಕಲ್ಪ ಮೀಡಿಯಾ ಹೌಸ್
ಎರಡು ವರ್ಷಗಳ ಹಿಂದಿನ ಮಾತು, ಅವರ ತಂದೆ ವ್ಯಾಪಾರದ ಸರಕಾಗಿ ತಂದ ಒಂದು ಸ್ಪೀಕರ್ ಹಾಗೆ ಅಂಗಡಿಯ ಮೂಲೆಯಲ್ಲಿ ಇತ್ತು. ಅದೇನೋ ಅವರಿಗೂ ಯಾವಾಗಲೂ ಸಂಗೀತದ ಹುಚ್ಚು. ತಾವು ಹಾಡೋದು, ರೆಕಾರ್ಡ್ ಮಾಡಿಕೊಂಡು ಕೇಳೋದು ಹೀಗೆ ನಡೆದಿತ್ತು. ಅಲ್ಲೇ ಆಡುತ್ತಿದ್ದ ಪುಟ್ಟ ಮಗು ಅವನದು ದಿನ ಒಂದೇ ಹಠ ಅಪ್ಪ ನಾನೂ ಹಾಡಬೇಕು, ರೆಕಾರ್ಡ್ ಮಾಡಿ ಅನ್ನೋದು. ತಂದೆಗೆ ಇದು ಸಾಮಾನ್ಯ ಅಲ್ವಾ? ಚಿಕ್ಕ ಮಕ್ಕಳು ಏನೇ ನೋಡಿದರೂ ನಂಗೂ ಬೇಕು ಅನ್ನೋದು ಇದ್ದಿದ್ದೇ. ಅವನ ಸಮಾಧಾನಕ್ಕೆ ಹಾಡಿಸೋರು. ತೊದಲಾಗಿ, ಬಂದ ಹಾಗೆ ಏನೋ ಒಂದಿಷ್ಟು ಹಾಡಿರುತ್ತಿದ್ದ. ಹೀಗೆ ದಿನಾ ನಡೆಯೋದು.
ಆದರೆ ಒಂದು ವಿಷಯ ಗಮನಿಸಬೇಕು, ಉಳಿದ ಮಕ್ಕಳು ಆದರೆ ದಿನ ದಿನ ಅವರ ಆಸೆಗಳು ಬದಲಾಗುತ್ತವೆ. ಇವತ್ತು ಸ್ಪೀಕರ್, ನಾಳೆ ಬ್ಯಾಟ್, ನಾಳಿದ್ದು ಫುಟ್ಬಾಲ್, ಮತ್ತೆ ಡಾನ್ಸ್ ಹೀಗೆ. ಈ ಪೋರನದು ಹಾಗಲ್ಲ. ದಿನ ಬೆಳಗಾದರೆ ಅದೇ ಪ್ರಯತ್ನ. ಅದೊಂದು ದಿನ ಎಲ್ಲೋ ಹೋಗಿದ್ದ ಅಪ್ಪ ಬಂದು ಕೂತರು. ‘ಅಪ್ಪ ನಾನು ಹಾಡ್ತಿನಿ’ ದಿನದ ಹಾಗೆ ‘ಆಯ್ತು’ ಅಂದರು. ಅದು ಬೊಂಬೆ ಹೇಳುತೈತೆ ಹಾಡು. ಅವನು ಐದರ ಎಳವೆಯಲ್ಲೇ ರಾಶಿ ರಾಶಿ ಪದಗಳ ನೆನಪಿಸಿಕೊಂಡು ಹಾಡುತ್ತಿದ್ದರೆ ತಂದೆಗೋ ರೋಮಾಂಚನ. ಒಂದೇ ಏಟಿಗೆ ಇದ್ದ ಸುಸ್ತು, ಕಷ್ಟ ಎಲ್ಲಾ ಮಾಯವಾದ ಅನುಭವ. ಇನ್ನು ತಡ ಮಾಡಲಿಲ್ಲ. ತಮ್ಮ ಕನಸುಗಳಿಗೆಲ್ಲ ಬಾಗಿಲು ಹಾಕಿ ಮಗನ ಬೆನ್ನಿಗೆ ನಿಂತರು. ಮಗನನ್ನೇ ಕನಸಾಗಿ ಕಂಡರು. ಅಲ್ಲಿ ಕಾಸಿಗೆ ಬಡತನ ಇತ್ತೋ ಏನೋ ಆದರೆ ಕನಸಿಗೆ ಬಡತನ ಇರಲಿಲ್ಲ. ಅವರ ನಂಬಿಕೆಯೂ ಸುಳ್ಳಾಗಲಿಲ್ಲ. ಒಂದು ಕನ್ನಡದ ಜನ ತನ್ನ ಗುರುತಿಸಿ ಆರಾಧಿಸುವ ಮಟ್ಟಿಗೆ ಅವನು ಬೆಳೆದ. ಅವನು ವಯಸ್ಸು ಏಳು. ಹೆಚ್ಚಿನವರಿಗೆ ತಂದೆ ತಾಯಿಯೇ ಹೋಗಿ ಏಳಿಸುವ ವಯಸ್ಸು. ಯಾರವನು? ನಿಮಗೆ ಗೊತ್ತಾಗಿರಬೇಕು, ಬೇರಾರೂ ಅಲ್ಲ ಅರ್ಜುನ್ ಇಟಗಿ.
ಸರಿ ಸುಮಾರು ಒಂದು ವರ್ಷದ ಹಿಂದೆ ಒಂದು ಗಾನ ಯಕ್ಷ ಉದಿಸಿದ. ಯಾವುದೇ ಹಾಡು ಕೊಡಿ ರೆಡಿ ಅನ್ನೋದೆಯ, ಮೈಕ್ ತಗೊಂಡು ಬಂದು ಹಾಡ್ತಾ ಇರೋದೆ. ಚಿಕ್ಕ ಹುಡುಗ ಬಂದು ಸ್ಟೇಜ್ ಮೇಲೆ ನಿಂತಾಗ ಎಷ್ಟು ತಾನೇ ಹಾಡಿಯಾನು? ಒಂದೋ ಎರಡೋ ವಾರ ಅಷ್ಟೆ ಅಂದುಕೊಂಡು ಸುಮ್ಮನಾದವರೆಷ್ಟೋ! ಆದರೆ ಹಾಗೆ ಆಗಲಿಲ್ಲ. ದಿನೆ ದಿನೇ ಹೊಸ ಹಾಡುಗಳೊಂದಿಗೆ ಬಂದು ಬೆಳೆಯುತ್ತಲೇ ಹೋದ. ಎಂಥ ಎಂಥ ಅಭಿಮಾನಿಗಳು! ಅದ್ಭುತ. ಒಳಿತು ಮಾಡು ಮನುಷ, ನಿ ಇರದು ಮೂರು ದಿವಸ ಅಂತ ಅವನು ಹಾಡುತ್ತ ಇದ್ದರೆ, ಅದರ ಅರ್ಥವೇ ಇನ್ನು ಚಂದ ಅನ್ನಿಸುತಿತ್ತು.
ಎಣ್ಣೆ ನಿಮ್ದು ಊಟ ನಮ್ದು ಅಂತ ಒಬ್ಬ ಪುಟ್ಟ ಗಾಯಕ ಕನ್ನಡಿಗರ ಮನ ಗೆದ್ದಿದ್ದ. ಆಗಿನ್ನೂ ಅವನಿಗೆ ಏಳರ ಹರೆಯ. ಸ್ವಲ್ಪ ಹಿಂದಿನ ಪೀಳಿಗೆ ಆಗಿದ್ದರೆ ಗೋಲಿ ಆಡಿಕೊಂಡು ಇರುತ್ತಿದ್ದ, ಈಗಿನ ಕಾಲದಲ್ಲಿ ಅಂದರೆ ಎಲ್ಲೋ ಆನ್ಲೈನ್ ಗೇಮ್ಸ್ ಆಡಿಕೊಂಡು, ಪುಸ್ತಕ, ಟ್ಯೂಷನ್ ಅಂದುಕೊಂಡು ಇರುವ ವಯಸ್ಸು. ಅದರೆ ಇವನು ಹಾಗಲ್ಲ. ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಸೇರಿದಂತೆ ಅದೆಷ್ಟೋ ಸಂಗೀತ ಕ್ಷೇತ್ರದ ದಿಗ್ಗಜರು ಅರ್ಜುನನ ಹಾಡಿಗೆ ಮಾರು ಹೋದರು. ನೋಡ ನೋಡುತ್ತಿದ್ದಂತೆ ಆ ಪುಟ್ಟ ಮಾಂತ್ರಿಕ ಕರುನಾಡನ್ನು ತನ್ನ ಕಡೆ ಸೆಳೆದುಕೊಂಡು ಬಿಟ್ಟ. ಸದಾ ನೆನಪಾಗುವ ಒಂದು ವಿಷಯ ಕ್ಷೇತ್ರ ಯಾವುದೇ ಇರಲಿ ಅಲ್ಲಿ ಒಬ್ಬ ವಿಶಿಷ್ಟ ಸಾಧಕ ಉದಿಸಿದರೆ ಅವನ ಕಂಡು ಮತ್ತಷ್ಟು ಸಾಧಕರು ಪ್ರೇರಣೆ ಪಡೆಯುತ್ತಾರೆ. ಅಂತೆಯೇ ಇಲ್ಲೂ ಅರ್ಜುನನ ಕಂಡು ಅದೆಷ್ಟೋ ಮಕ್ಕಳ ಪೋಷಕರು ಸಂಗೀತ ಕೂಡ ವಿದ್ಯೆಯ ಜೊತೆಗೆ ನಮಗೆ ಒಂದು ಗುರುತು ನೀಡಬಲ್ಲುದು ಎಂದು ಅರಿತರು ಎನ್ನಬಹುದು.
ಇಂದು ಅರ್ಜುನನ ಹುಟ್ಟು ಹಬ್ಬ. ಏಪ್ರಿಲ್ ತಿಂಗಳ 16 ರಂದು ಕೊಪ್ಪಳದ ಗುಂಡಬಾಳದಲ್ಲಿ ಜನನ, ತಂದೆ ಚನ್ನಬಸಪ್ಪ ಇಟಗಿ ಮತ್ತು ತಾಯಿ ಸರಸ್ವತಿ. ತಂದೆಯ ಝೆರಾಕ್ಸ್ ಅಂಗಡಿ ಇದ್ದು, ಅವರಿಗೂ ಸಂಗೀತದ ಒಲವು ಹೆಚ್ಚು. ಹಾಗಾಗಿ ರಕ್ತದಲ್ಲೇ ಸಂಗೀತ ಬಂದು ಬಿಟ್ಟಿದೆ. ಖಾಸಗಿ ಟಿವಿ ಚಾನೆಲ್ ನಲ್ಲಿ ಹಾಡಿನ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆದ, ದಸರೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ, ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ವಿಶ್ವ ಚೇತನ ಪುಟ್ಟರಾಜ ಪ್ರಶಸ್ತಿ, ಕಲಾಶ್ರೀ ಕನ್ನಡ ಕುವರ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಪಂಚಮಸಾಲಿ ಪ್ರತಿಭೆ ಪ್ರಶಸ್ತಿ ಸೇರಿದಂತೆ ಒಟ್ಟು ಒಂದು ರಾಷ್ಟ್ರ ಪ್ರಶಸ್ತಿ ಮತ್ತು ಐದು ರಾಜ್ಯ ಪ್ರಶಸ್ತಿ ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಅಲ್ಲದೆ ದಸರಾ, ಕಿತ್ತೂರು ಉತ್ಸವ, ಇಟಗಿ ಉತ್ಸವ, ಆನೆಗೊಂದಿ ಉತ್ಸವ, ಬೀದರ್ ಕನ್ನಡ ರಾಜ್ಯೋತ್ಸವ, ಇಟಗಿ ಉತ್ಸವದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೌರವ, ಬೆಂಗಳೂರು, ಸಿಂಧಗಿ, ಬೆಳಗಾವಿ ಮತ್ತು ಶಿವಮೊಗ್ಗ ಸೇರಿದಂತೆ ಇನ್ನೂ ಹಲವಾರು ಕಡೆ 300 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾನೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ, ಕೋವಿಡ್ ಸಮಯದಲ್ಲಿ ಜಿಲ್ಲಾಧಿಕಾರಿಗಳ ನೈತಿಕ ಬೆಂಬಲವಾಗಿ ನಿಂತದ್ದು, ತನ್ನ ಪುಟ್ಟ ತಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಅರಿತು ತನ್ನ ಕೈಲಾದ ಸೇವೆ ಮಾಡುತ್ತಲೇ ಇರುವುದು ಅರ್ಜುನನ ವೈಶಿಷ್ಟ್ಯತೆಗೆ ಸಾಕ್ಷಿ. ಎಂಟರ ಹರೆಯದ ಈ ಗೋಲ್ಡನ್ ಟ್ಯಾಗ್ ಸ್ಟಾರ್ ಗವಿ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನೇತ್ರ ದಾನವನ್ನೂ ಮಾಡುವ ಮೂಲಕ ತನ್ನ ಹಿರಿಮೆಯನ್ನು ಮೆರೆದಿದ್ದಾನೆ, ಅವನಿಂದಾಗಿ ಇಡೀ ಕುಟುಂಬವೇ ಇಂದು ನೇತ್ರದಾನ ಮಾಡಿದ್ದಾರೆ. ತನ್ನ ಹೋದ ವರ್ಷದ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಆಚರಿಸಿದ್ದ. ಇದಾಗಲೇ ಏಳು ಚಿತ್ರಗಳಲ್ಲಿ ಗಾಯನ ಮಾಡಿದ್ದು ಜೊತೆಗೆ ಎರಡು ಆಲ್ಬಂ ಸಾಂಗ್ಸ್ ಕೂಡ ಮಾಡಿರುತ್ತಾನೆ. ಇತ್ತೀಚೆಗೆ ಹಿಟ್ಲರ್ ಎಂಬ ಚಿತ್ರದಲ್ಲಿ ನಟನೆಯನ್ನೂ ಮಾಡುವ ಮೂಲಕ ತನ್ನ ಪ್ರತಿಭೆಯನ್ನು ತೋರುತ್ತಿದ್ದಾನೆ, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹೀಗೆ ಅರ್ಜುನ ಒಬ್ಬ ಗಾಯಕನಾಗಿ ಅಷ್ಟೇ ಅಲ್ಲ, ಒಬ್ಬ ಉತ್ತಮ ನಾಗರೀಕನಾಗಿಯೂ ಬೆಳೆಯುತ್ತಿದ್ದಾನೆ. ಹೆಮ್ಮೆ ಅನ್ನಿಸುವುದು ಇಂತಹ ವಿಚಾರಗಳಲ್ಲಿ; ಕನ್ನಡಾಂಬೆ ಇಂತಹ ಇನ್ನೂ ಅನೇಕ ಪುತ್ರರ ಆಶೀರ್ವದಿಸಲಿ. ಇವರ ಸಂತತಿ ನೂರ್ಮಡಿ ಆಗಲಿ. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಅರ್ಜುನ. ತಾಯಿ ಭಾರತಿಯ ಆಶೀರ್ವಾದ ಸದಾ ನಿನ್ನ ಮೇಲಿರಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post