ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ಎರಡನೆಯ ಅಲೆಯ ಹೊಡೆತಕ್ಕೆ ಜಿಲ್ಲೆಯಲ್ಲಿಯೇ ಭದ್ರಾವತಿ ತಾಲೂಕು ತತ್ತರಿಸುತ್ತಿದ್ದು, ಇಂದು ಒಂದೇ ದಿನ 93 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ತಾಲೂಕಿನಲ್ಲಿ 93 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ನಗರ ಪ್ರದೇಶದಲ್ಲಿ 58 ಹಾಗೂ ಉಳಿದ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದೆ.
ಎಲ್ಲೆಲ್ಲಿ ಪತ್ತೆ?
ನಗರ ಪ್ರದೇಶದಲ್ಲಿ ಉಜ್ಜಿನೀಪುರ, ಅಶ್ವತ್ಥ್ ನಗರ, ನೆಹರೂ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ತಳ್ಳಿಕಟ್ಟೆ, ಅಂತರಗಂಗೆ, ಮೈದೊಳಲು, ಎಡೇಹಳ್ಳಿ ಹಾಗೂ ಹೊಸಹಳ್ಳಿಗಳಲ್ಲಿ ಪ್ರಕರಣ ಪತ್ತೆಯಾಗಿದೆ.
ಹೊಸಹಳ್ಳಿ ಗ್ರಾಮ ಸೀಲ್ ಡೌನ್
ತಾಲೂಕಿನ ಕೂಡ್ಲಿಗೆರೆ ಹೋಬಳಿ ಹೊಸಹಳ್ಳಿ ಗ್ರಾಮವೊಂದರಲ್ಲೇ 55 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.
ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೊಸಹಳ್ಳಿ ಗ್ರಾಮದಲ್ಲಿ ಒಟ್ಟು 195 ಮನೆಗಳಿದ್ದು, 812 ಜನಸಂಖ್ಯೆ ಹೊಂದಿದೆ. ಏ.14ರಂದು ಗ್ರಾಮದ 186 ಮಂದಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 55 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್ ಕುಮಾರ್, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post