ಕಲ್ಪ ಮೀಡಿಯಾ ಹೌಸ್
ಸೊರಬ: ದೈನಂದಿನ ಅವಶ್ಯಕ ದಿನಸಿ ವಸ್ತುಗಳ ಬೆಲೆ ದಿಢೀರ್ ಏರಿಕೆ ಖಂಡಿಸಿ ಯುವ ಹೋರಾಟ ಸಮಿತಿ ವತಿಯಿಂದ ಶನಿವಾರ ಪಟ್ಟಣದ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಲಾಯಿತು.
ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನೈಟ್ ಕಫ್ರ್ಯೂ ಮತ್ತು ವಾರಾಂತ್ಯ ಕಫ್ರ್ಯೂ ಜಾರಿಗೆ ತಂದಿರುವುದನ್ನೇ ನೆಪ ಮಾಡಿಕೊಂಡ ಕೆಲ ಕಿರಾಣಿ ಮತ್ತು ತರಕಾರಿ ವ್ಯಾಪಾರಸ್ಥರು ದೈನಂದಿನ ಅವಶ್ಯಕ ದಿನಸಿ ವಸ್ತುಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿರುವುದು ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದೆ. ಕಳೆದ ವರ್ಷ ಕೊರೋನಾ ಸಂಕಷ್ಟ ಸಿಲುಕಿದ ಜನತೆ ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಂಡಿದೆ. ಸರ್ಕಾರಗಳು ಜನತೆಯ ಬದುಕನ್ನು ಗಮನದಲ್ಲಿಟ್ಟುಕೊಂಡು ದೈನಂದಿನ ಅವಶ್ಯಕ ಬಳಕೆಯ ದಿನಸಿ ವಸ್ತುಗಳ ಮಾರಾಟ ಮತ್ತು ಸಾಗಾಟಕ್ಕೆ ಅವಕಾಶ ನೀಡಿದ್ದರೂ ಸಹ, ಕೆಲವರು ಗೋದಾಮುಗಳಲ್ಲಿ ದಾಸ್ತಾನು ಮಾಡುವ ಮೂಲಕ ದಿಢೀರ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದರು.
ಸಮಿತಿಯ ನಿರ್ದೇಶಕ ಜಿ.ಕೆರಿಯಪ್ಪ ಮಾತನಾಡಿ, ಪಟ್ಟಣದಲ್ಲಿ ನೈಟ್ ಕಫ್ರ್ಯೂ ಮತ್ತು ವಾರಾಂತ್ಯ ಕಫ್ರ್ಯೂ ಜಾರಿಯಾದ ದಿನದಂದಲೇ ಕೆಲ ಈ ಬಗ್ಗೆ ವರ್ತಕರನ್ನು ವಿಚಾರಿಸಿದಾಗ ದಾಸ್ತಾನುಗಳ ಸರಬರಾಜು ಇಲ್ಲ ಎಂಬ ಸಬೂಬು ಹೇಳಿ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಮಾಡಿ ಅನ್ಯಾಯ ಎಸಗುತ್ತಿದ್ದಾರೆ. ಕೆಲವರು ದುರಾಲೋಚನೆಯಿಂದ ತಮ್ಮ ಗೋದಾಮುಗಳಲ್ಲಿ ದೈನಂದಿನ ದಿನಸಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಜನತೆಗೆ ಸಾಮಾನ್ಯ ದರದಲ್ಲಿಯೇ ವಸ್ತುಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಕಿರಾಣಿ ಮತ್ತು ತರಕಾರಿ ಅಂಗಡಿಗಳ ಮುಂಭಾಗ ತಾಲ್ಲೂಕು ಆಡಳಿತ ನಿಗದಿ ಪಡಿಸಿದ ದರ ಪಟ್ಟಿಯನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಹೋರಾಟದ ರೂಪುರೇಷೆಗಳನ್ನು ತೀವ್ರಗೊಳಿಸಲಾಗುವುದು ಎಂದ ಅವರು, ಪಟ್ಟಣದಲ್ಲಿ ಕೆಲ ತರಕಾರಿ ಮಾರಾಟಗಾರರು ಸಹ ಇನ್ನಿಲ್ಲದ ಬೆಲೆಗೆ ಕೇವಲ ಒಂದೇ ದಿನದಲ್ಲಿ ಬೆಲೆ ಏರಿಕೆ ಮಾಡಿದ್ದು, ಕೂಲಿ ಕಾರ್ಮಿಕರ ಮೇಲೆ ಆರ್ಥಿಕ ಹೊರೆ ಬಿದ್ದಿದೆ ಎಂದರು.
ಈ ಸಂದರ್ಭದಲ್ಲಿ ಯುವ ಹೋರಾಟ ಸಮಿತಿಯ ಕಾರ್ಯದರ್ಶಿ ನೆಮ್ಮದಿ ಸುಬ್ಬು, ನಿರ್ದೇಶಕರಾದ ಸಂಜೀವ್ ಆಚಾರಿ, ಕೆ.ಬಿ. ಸಂತೋಷ್, ನಾಗರಾಜ್, ಮಾಧ್ಯಮ ಪ್ರಮುಖ್ ದತ್ತಾ ಸೊರಬ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post