ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವವರ ಮೇಲೆ ಡೆಡ್ಲಿ ಬ್ಲಾಕ್ ಫಂಗಸ್ – ಮ್ಯುಕೋರ್‌ಮಯೋಸಿಸ್ ಅಟ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಹೆಚ್ಚಾಗಿ ಕಂಡುಬಂದಿದ್ದ ಈ ಫಂಗಸ್ ಸೋಂಕು ಈಗ ಬೆಂಗಳೂರಿನಲ್ಲೂ ಕೊರೋನಾ ಮಹಾಮಾರಿಯಿಂದ ಚೇತರಿಸಿಕೊಂಡಿರುವವರ ಮೇಲೆ ತನ್ನ ಪ್ರಭಾವ ತೋರಿಸುತ್ತಿದೆ.
ಬೆಂಗಳೂರಿನಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಕಳೆದ 2 ವಾರಗಳಲ್ಲಿ 38 ಜನರಿಗೆ ಈ ಬ್ಲಾಕ್ ಫಂಗಸ್ ನ ಸೋಂಕಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ ಒಂದೇ ಆಸ್ಪತ್ರೆಯಲ್ಲಿ ಇಷ್ಟು ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಬಹುಶಃ ಇದು ಒಂದೇ ಆಸ್ಪತ್ರೆಯಲ್ಲಿ ಎಂದರೆ ತಪ್ಪಾಗಲಾರದು.
ಸೋಂಕಿತರಿಗೆ ವಿಶೇಷ ಕಾಳಜಿಯನ್ನು ಹಾಗೂ ಆರೈಕೆಯನ್ನು ನೀಡುವ ಉದ್ದೇಶದಿಂದ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿದೆ. ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಸಂಧರ್ಭದಲ್ಲಿ ಸ್ಟಿರಾಯ್ಡ್‌ನ ಬಳಕೆ ಮಾಡಲಾಗುತ್ತಿದೆ. ಇದು ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದರೆ, ಹೆಚ್ಚು ಮಧುಮೇಹ ಹೊಂದಿರುವ ರೋಗಿಗಳಲ್ಲಿ ಸ್ಟಿರಾಯ್ಡ್ ಬಳಕೆಯಿಂದ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಫಂಗಲ್ ಬೆಳವಣಿಗೆ ಹೆಚ್ಚಾಗುತ್ತದೆ. ಅಲ್ಲದೆ, ಕೆಲವು ಸಂಧರ್ಭಗಳಲ್ಲಿ ಸ್ಟಿರಾಯ್ಡ್ ಹಾಗೂ ಹೆಚ್ಚು ಶಕ್ತಿಯ ಆಂಟಿಬಯಾಟಿಕ್‌ಗಳನ್ನು ನೀಡಲಾಗುತ್ತಿದೆ. ಇದರ ದುಷ್ಪರಿಣಾಮದಿಂದಾಗಿ ಕೆಲವು ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆಗ, ಈ ಬ್ಲಾಕ್ ಫಂಗಸ್ ಅಥವಾ ಮ್ಯುಕೋರ್‌ಮಯೋಸಿಸ್ ಆಕ್ರಮಣ ಮಾಡಿ ಹಲವಾರು ತೊಂದರೆಗಳಿಗೆ ರೋಗಿಗಳನ್ನು ಸಿಲುಕಿಸುತ್ತದೆ.
ಟ್ರಸ್ಟ್ ವೆಲ್ ಆಸ್ಪತ್ರೆಯ ಮ್ಯುಕೋರ್‌ಮಯೋಸಿಸ್ ವಿಶೇಷ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ದೀಪಕ್ ಹಲ್ದೀಪುರ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗ ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಕೊರೋನಾ ಪ್ರಕರಣಗಳಲ್ಲಿ ಪ್ರಾಣ ಉಳಿಸುವ ಸ್ಟಿರಾಯ್ಡ್‌ಗಳನ್ನು ವೈದ್ಯರ ಸಲಹೆ ಇಲ್ಲದೆ ತಪ್ಪು ಬಳಕೆಯಿಂದ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿದ ಸಂಧರ್ಭದಲ್ಲಿ ಈ ಫಂಗಸ್ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆಕ್ಸಿಜನ್ ಹ್ಯೂಮಿಡಿಫೈರ್ ನಲ್ಲಿ ಬಳಸುವ ನೀರನ್ನು ಸ್ಟೆರಲೈಸ್ ಮಾಡದೇ ಇದ್ದ ಸಂಧರ್ಭದಲ್ಲೂ ಈ ಫಂಗಸ್ ರೋಗಿಗೆ ಬರುವ ಸಾಧ್ಯತೆ ಇರುತ್ತದೆ.
ಕೋವಿಡ್ ಸೋಂಕಿನಿಂದ ಗುಣುಮುಖರಾದ ಮೇಲೂ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
1. ಮುಖದ ಒಂದೇ ಭಾಗದಲ್ಲಿ ನೋವು ಕಂಡುಬಂದರೆ
2. ಕಣ್ಣುಗಳಲ್ಲಿ ಊತ/ನೋವು ಕಂಡುಬಂದರೆ
3. ಮೂಗಿನಲ್ಲಿ ಗಾಳಿಯಾಡದಿರುವಿಕೆ
4. ಮೂಗಿನಲ್ಲಿ ರಕ್ತ ಸೋರಿಕೆ
5. ಹಲ್ಲುಗಳು ಸಡಿಲಗೊಳ್ಳುವುದು
6. ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಅಥವಾ ಕಂದುಬಣ್ಣದ ಕಂಡುಬಂದರೆ
7. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಕಂಡುಬಂದರೆ
ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗೂ ಬ್ಯಾಕ್ ಫಂಗಸ್ ಅಥವಾ ಮ್ಯುಕೋರ್‌ಮಯೋಸಿಸ್ ನ ಸೋಂಕು ಇಲ್ಲದೇ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯರಾದ ದೀಫಕ್ ಹಲ್ದೀಪುರ್ ತಿಳಿಸಿದರು.
ಡಾ.ಎಚ್.ವಿ. ಮಧುಸೂಧನ್ ಮಾತನಾಡಿ, ಕಳೆದ ಎರಡು ವಾರದಲ್ಲಿ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಬ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದೊಂದು ಸೈಲೆಂಟ್ ಕಿಲ್ಲರ್ ಸೋಂಕು ಆಗಿದ್ದು, ಕೊರೋನಾ ಮೊದಲ ಅಲೆಯಲ್ಲಿ ಕೇವಲ 33 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೆವು. ಆದರೆ, ಈ ಬಾರಿ ಕೇವಲ 2 ವಾರದಲ್ಲಿ 38 ಜನರಿಗೆ ಸೋಂಕು ತಗುಲಿರುವುದು ಬಹಳ ಆತಂಕಕಾರಿ ವಿಷಯವಾಗಿದೆ. ಕೊರೋನಾ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ಅದರಲ್ಲೂ ಮಧುಮೇಹ ರೋಗದಿಂದ ಬಳುತ್ತಿರುವವರು ಬಹಳ ಹುಷಾರಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು.
ವಿಶೇಷ ಚಿಕಿತ್ಸಾ ವಿಭಾಗ:
ಈ ಫಂಗಸ್ ಸೋಂಕು ಬಹು ಬೇಗ ಬೇರೆಯವರಿಗೆ ಹರಡುತ್ತದೆ. ಅದರಲ್ಲೂ ಇದಕ್ಕೆ ಚಿಕಿತ್ಸೆ ನೀಡುವ ವೈದ್ಯರಿಗೂ ಸೋಂಕಿನ ಭೀತಿ ತಪ್ಪಿದ್ದಲ್ಲ. ಆದ್ದರಿಂದ ಇದರ ಚಿಕಿತ್ಸೆಗಾಗಿ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ರಚಿಸಲಾಗಿದೆ. ಈ ತಂಡದಲ್ಲಿ ಇಎನ್‌ಟಿ ವಿಭಾಗದ ನಿರ್ದೇಶಕರಾದ ಡಾ ದೀಪಕ್ ಹಲ್ದೀಪುರ್, ನ್ಯೂರಸೈನ್ಸಸ್ ವಿಭಾಗದ ನಿರ್ದೇಶಕರಾದ ಡಾ. ಎಚ್.ವಿ. ಮಧುಸೂಧನ್, ಮ್ಯಾಕ್ಸಿಲಲೋಫೇಶಿಯಲ್ ತಜ್ಞರಾದ ಡಾ ಆದಿತ್ಯ ಮೂರ್ತಿ, ಕಣ್ಣಿನ ತಜ್ಞರಾದ ಡಾ ಪ್ರೀತಿ ಕಾಳೆ ಇದ್ದಾರೆ. ಇದುವರೆಗೂ 24 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.
ಈ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯತೆ ಹೆಚ್ಚಾಗಿದೆ. ಮೇಲ್ಕಂಡ ಲಕ್ಷಣಗಳು ಕಂಡು ಬಂದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post