ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ಜನರ ರಕ್ಷಣೆ ನಮ್ಮ ಕರ್ತವ್ಯ. ಹೀಗಾಗಿ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೂ, ಸಹಾಯವಾಣಿ, ಆಂಬ್ಯುಲೆನ್ಸ್ ಸೇವೆ, ಆಕ್ಸಿಜನ್ ಪೂರೈಕೆ, ಮೆಡಿಕಲ್ ಕಿಟ್, ಆಹಾರ ಕಿಟ್ ವಿತರಣೆಯಿಂದ ಉಚಿತ ಲಸಿಕೆ ನೀಡಲು 100 ಕೋಟಿ ರೂ. ಯೋಜನೆವರೆಗೂ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು:
‘ಯವ ಕಾಂಗ್ರೆಸ್ ಸದಸ್ಯರು ರಾಜ್ಯದ ಉದ್ದಗಲಕ್ಕೂ ಜನರ ಪ್ರಾಣ ಉಳಿಸಲು ಅಗತ್ಯ ಸೇವೆ ಒದಗಿಸುತ್ತಿದ್ದಾರೆ. ವಿದೇಶಗಳಿಗೆ ಲಸಿಕೆ ರಫ್ತು ಸ್ಥಗಿತಗೊಳಿಸಿ, ನಮ್ಮ ದೇಶದ ಜನರಿಗೆ ಮೊದಲು ನೀಡಬೇಕು.
ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಮಾಡಿಸಬೇಕೆಂದು ಹೇಳಿದ್ದಾರೆ. ಹಳ್ಳಿ ಜನರಿಗೆ ಆನ್ಲೈನ್ ಬಗ್ಗೆ ಏನು ಗೊತ್ತಿರುತ್ತದೆ? ಹೀಗಾಗಿ ನಮ್ಮ ಯೂತ್ ಕಾಂಗ್ರೆಸ್ ಸದಸ್ಯರು ಪಕ್ಷ, ಜಾತಿ, ಧರ್ಮ ಬೇಧವಿಲ್ಲದೆ, ಹಳ್ಳಿಯಿಂದ ನಗರದವರೆಗೆ ಆನ್ಲೈನ್ ನೋಂದಣಿ ಅಭಿಯಾನ ಆರಂಭಿಸುತ್ತಿದ್ದಾರೆ.
ನಮ್ಮ ವಿದ್ಯಾರ್ಥಿ ಘಟಕದವರು ಕಳೆದ ವರ್ಷ ರಕ್ತ ದಾನ ಮಾಡಿದ್ದರು. ಈ ವರ್ಷವೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ಮಹಿಳಾ ಕಾಂಗ್ರೆಸ್ ಸದಸ್ಯೆಯರು ವಿಶೇಷ ಆರೋಗ್ಯ ಕಿಟ್ ಗಳನ್ನು ಅಗತ್ಯವಿರುವವರಿಗೆ ನೀಡುತ್ತಿದ್ದಾರೆ.
160 ಕ್ಷೇತ್ರಗಳಲ್ಲಿ ಕೇರ್ ಸೆಂಟರ್, ಸಹಾಯವಾಣಿ ಆರಂಭಿಸಲಾಗಿದ್ದು ಉಳಿದ ಕಡೆಗಳಲ್ಲೂ ಮಾಡಲಾಗುವುದು. ರಾಜ್ಯದಲ್ಲಿ 150 ಆಂಬ್ಯುಲೆನ್ಸ್ ಗಳು ಸೇವೆ ಸಲ್ಲಿಸುತ್ತಿವೆ.
ಸರ್ಕಾರ ಘೋಷಿಸಿರುವ ಪ್ಯಾಕೇಜ್ ಬಡವರಿಗೆ ಸಾಲುವುದಿಲ್ಲ. ಹೀಗಾಗಿ ನಮ್ಮ ನಾಯಕರು ಸ್ಥಳೀಯವಾಗಿ ಆಹಾರ ಕಿಟ್ ಹಂಚುತ್ತಿದ್ದಾರೆ. ಉಚಿತ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲಾಗುತ್ತಿದೆ.
ಹೀಗೆ ಕಾಂಗ್ರೆಸ್ ಪಕ್ಷ ಈ ಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಲು ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಸರ್ಕಾರದ ವೈಫಲ್ಯ ಪ್ರಶ್ನಿಸುವುದು ನಮ್ಮ ಕರ್ತವ್ಯ.
ಇನ್ನು ಪ್ರದೇಶಾಭಿವೃದ್ಧಿ ನಿಧಿಯಿಂದ 100 ಕೋಟಿ ರೂ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಲವರು ಸ್ವಂತ ಹಣವೇ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದ್ರೆ ಅವರು ತಮ್ಮ ಸ್ವಂತ ಹಣದಲ್ಲಿ ಕೆಲಸ ಮಾಡುತ್ತಿದ್ದಾರೆಯೇ? ನಮಗೆ ಅಭಿವೃದ್ಧಿಗಿಂತ ಜನರ ಪ್ರಾಣ ಉಳಿಸೋದು ಮುಖ್ಯ. ನಾವು ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದೇವೆ.
ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಲು ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಅವಕಾಶ ನಿರಾಕರಿಸಿದೆ. ಆದರೂ ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಾರಿಗೆ ತರಲಾಗಿದ್ದ ಇಂದಿರಾ ಕ್ಯಾಂಟೀನ್ ಕುರಿತು ಬಿಜೆಪಿಯವರು ಮಾತನಾಡಿದ್ದರು. ಈಗ ಅಲ್ಲಿ ಉಚಿತವಾಗಿ ಊಟ ಕೊಡಲು ನಿರ್ಧರಿಸಿದ್ದಾರೆ. ಆದರೆ ಊಟ ಪಡೆಯುವವರು, ಫೋಟೋ, ಗುರುತಿನ ಚೀಟಿ ತನ್ನಿ ಎಂದು ಆದೇಶಿಸಿರುವುದು ನೀಚ ಕೆಲಸ. ನಾನು ಇದನ್ನು ಪ್ರಶ್ನಿಸಿದಾಗ ಈ ನಿರ್ಧಾರ ಹಿಂಪಡೆದರು. ಆದರೆ ಈ ಊಟ ನೀಡಲು ಆಪ್ ನಲ್ಲಿ ಫೋಟೋ ಹಾಕಲು ನಿನ್ನೆ ಆದೇಶ ಹೊರಡಿಸಿದೆ. ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಇದರ ವಿರುದ್ಧ ನಾವು ಹೋರಾಡುತ್ತೇವೆ.
ನಾವು ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ಆದರೆ ಸರ್ಕಾರ ಅದನ್ನು ಉಳಿಸಿಕೊಂಡಿಲ್ಲ. ಇಂದು ನಮ್ಮ ನಾಯಕರಾದ ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡ ದಿನ. ನಮ್ಮ ದೇಶದ ಐಕ್ಯತೆ ಕಾಪಾಡುವ ದಿನ. ರಾಜೀವ್ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರ ಧಾರೆ, ಚಿಂತನೆಗಳನ್ನು ಪ್ರತಿ ಸಂದರ್ಭದಲ್ಲೂ ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ.
ಲಸಿಕೆಯನ್ನು ವಿರೋಧಿಸಿಲ್ಲ:
ಕಾಂಗ್ರೆಸ್ ಪಕ್ಷ ಲಸಿಕೆ ನೀಡುವುದನ್ನು ವಿರೋಧಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಪರೀಕ್ಷಿಸದೆ, ಅದನ್ನು ಬಡ ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ ಗಳಿಗೆ ನೀಡುವುದನ್ನು ಮಾತ್ರ ಪ್ರಶ್ನಿಸಿದ್ದೇವೆ.
ಆರಂಭದಲ್ಲಿ ಲಸಿಕೆ ಬಗ್ಗೆ ಬಿಜೆಪಿಯವರಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಮೊದಲು ಪ್ರಧಾನ ಮಂತ್ರಿಗಳು ತೆಗೆದುಕೊಳ್ಳದೇ, ಅದನ್ನು ಬಡವರ ಮೇಲೆ ಪ್ರಯೋಗಿಸಿದ್ದರು. ನಾವು ಲಸಿಕೆ ವಿರೋಧಿಸಿದ್ದರೆ ಸಿದ್ದರಾಮಯ್ಯನವರು, ನಾನು, ನಮ್ಮ ನಾಯಕರು ಲಸಿಕೆ ತೆಗೆದುಕೊಳ್ಳುತ್ತಿದ್ದೆವಾ? ನಾವು ಕೊಟ್ಟ ಸಹಕಾರವನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಸುಖಾಸುಮ್ಮನೆ ಆರೋಪ ಮಾಡುತ್ತಿದೆ.’
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post