ಕಲ್ಪ ಮೀಡಿಯಾ ಹೌಸ್
ಸೊರಬ : ಕೊರೋನಾ ಹರಡುವಿಕೆ ತಡೆಗಟ್ಟು ಸರ್ಕಾರಗಳು ಲಾಕ್‌ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ ಎಂದು ಸುರಭಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಜಿ. ರಾಮಚಂದ್ರ ಹೇಳಿದರು.
ಪಟ್ಟಣದ ಚಾಮರಾಜ ಪೇಟೆ ಬಡಾವಣೆಯಲ್ಲಿ ಸುರಭಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಪೌರ ಕಾರ್ಮಿಕರಿಗೆ ಹಾಗೂ ಆಯ್ದ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

ಕೊರೋನಾ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಸರ್ಕಾರ ಮತ್ತು ಆರೋಗ್ಯ ಇಲಾಖೆಗಳು ಸೂಚಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದ ಅವರು, ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರು ಸಹ ಕೊರೋನಾವಾರಿಯರ್ ಗಳಾಗಿದ್ದು, ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ಪೌಕಾರ್ಮಿಕರಿಗೆ ನೀಡಬೇಕು ಎಂದರು

ಪೌರ ಕಾರ್ಮಿಕರು ಇಲ್ಲದ ನಗರಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕೊರೋನಾದಂತಹ ಹೆಮ್ಮಾರಿ ನಾಡನ್ನೇ ಕಾಡುತ್ತಿರುವ ಸಂದರ್ಭದಲ್ಲಿಯ ಪೌರ ಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ನಗರದ ಸ್ವಚ್ಚತೆಗೆ ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದ ಅವರು, ಈಗಾಗಲೇ ಟ್ರಸ್ಟ್ ವತಿಯಿಂದ ತಾಲ್ಲೂಕು ಮಾತ್ರವಲ್ಲದೇ ನೆರೆಯ ಶಿರಸಿ, ಸಿದ್ದಾಪುರ ಮತ್ತು ಶಿರಾಳಕೊಪ್ಪದಲ್ಲೂ ಸಹ ಸುಮಾರು 360 ಕಿಟ್‌ಗಳನ್ನು ಕಡುಬಡವರನ್ನು ಗುರುತಿಸಿ ವಿತರಣೆ ಮಾಡಲಾಗಿದೆ ಎಂದರು.

ಬಿಎಸ್‌ಎನ್‌ಎಲ್ ನೌಕರ ರಾಮಮೂರ್ತಿ ಅಡಿಗ ಮಾತನಾಡಿ, ಪೌರ ಕಾರ್ಮಿಕರನ್ನು ಗುರುತಿಸಿ ದಿನಸಿ ವಸ್ತುಗಳ ಕಿಟ್ ವಿತರಿಸುತಿರುವುದು ಉತ್ತಮ ಕಾರ್ಯವಾಗಿದೆ. ಪೌರ ಕಾರ್ಮಿಕರು ಅತ್ಯಂತ ಶ್ರಮಜೀವಿಗಳಾಗಿದ್ದು, ಅವರನ್ನು ಗುರುತಿಸಿ ಸಹಕಾರ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ನಾಗರೀಕರ ಮೇಲಿದೆಂದು ಅವರು ಹೇಳಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















