ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಲಾಕ್ ಡೌನ್ ನಿಯಮಾವಳಿಗಳನ್ನು ಮೀರಿ ವಾಕಿಂಗ್ ಹಾಗೂ ಬೈಕ್ ರೈಡ್ ಬಂದವರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಎಚ್ಚರಿಕೆ ನೀಡಿ, ಬಿಟ್ಟು ಕಳುಹಿಸಿದ್ದಾರೆ.
ಸೈನಿಕ ಪಾರ್ಕ್, ಫ್ರೀಡಂ ಪಾರ್ಕ್ ಸೇರಿದಂತೆ ಹಲವೆಡೆ ವಾಕಿಂಗ್ ಮಾಡುತ್ತಿದ್ದ ಸುಮಾರು 22 ಪುರುಷರು ಹಾಗೂ 9 ಮಹಿಳೆಯರನ್ನು ಮಂದಿಯನ್ನು ಜಯನಗರ ಪೊಲೀಸರು ಠಾಣೆಗೆ ಕರೆತಂದಿದ್ದಾರೆ.
ಇವರನ್ನೆಲ್ಲಾ ಠಾಣೆ ಮುಂದೆ ನಿಲ್ಲಿಸಿ ಮಾತನಾಡಿದ ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ಅವರು, ಬಿಗಿ ಲಾಕ್ ಡೌನ್ ಜಾರಿಯಲ್ಲಿದೆ ಎಂದು ತಿಳಿದಿದ್ದರೂ ಹೊರಕ್ಕೆ ಬರಬಾರದು ಎಂದು ನಿಮಗೆ ತಿಳಿದಿಲ್ಲವೇ? ಎಲ್ಲ ಕಡೆಗಳಲ್ಲಿ ಬ್ಯಾರಿಕೇಟ್, ಬೇಲಿ ಹಾಕಿ ಬಂದ್ ಮಾಡಿರುವುದು ಯಾತಕ್ಕಾಗಿ ಎಂದು ಪ್ರಶ್ನಿಸಿದರು.
ಕೊರೋನಾ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯವಾದುದು. ಕೇವಲ ಪೊಲೀಸರು, ಪಾಲಿಕೆ ಸೇರಿದಂತೆ ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮಗಳ ಆರೋಗ್ಯಕ್ಕಾಗಿಯೇ ಇಷ್ಟು ಬಿಗಿ ನಿಲುವುಗಳನ್ನು ತಂದಿರುವುದು. ನಿಮ್ಮ ಮನೆಗಳಲ್ಲಿಯೇ ಆದಷ್ಟು ವ್ಯಾಯಾಮ ಮಾಡಿ ಎಂದರು.
ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಎಚ್ಚರಿಕೆ ನೀಡಿದ ಡಿವೈಎಸ್’ಪಿ ಹಾಗೂ ಸಿಪಿಐ ರವಿ ಅವರು, ಎಲ್ಲರಿಗೂ ಕೆಲವು ಕಾಲ ದೈನಿಂದಿನ ವ್ಯಾಯಾಮ ಮಾಡಿಸಿ, ಬಿಟ್ಟು ಕಳುಹಿಸಿದರು.
ಅತ್ಯಂತ ಮುಖ್ಯವಾಗಿ ಠಾಣೆಗೆ ಕರೆತಂದವರೆಲ್ಲರೂ ನಿಯಮವನ್ನು ಮೀರಿದ್ದರೂ ಸಹ ಅತ್ಯಂತ ಗೌರವಯುತವಾಗಿ ಹಾಗೂ ಸೌಜನ್ಯಯುತವಾಗಿ ಮಾತನಾಡಿದ ಡಿವೈಎಸ್’ಪಿ ಅವರು, ನೀವುಗಳು ತುರ್ತು ಕಾರ್ಯದ ನಿಮಿತ್ತ ತೆರಳುತ್ತಿದ್ದಿರಬಹುದು. ನಾವು ಕರೆತಂದದ್ದರಿಂದ ನಿಮಗೆ ತೊಂದರೆಯಾಗಿದೆ. ಅದಕ್ಕಾಗಿ ಕ್ಷಮಿಸಿ. ಆದರೆ, ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು. ಸೀಜ್ ಮಾಡಿರುವ ಗಾಡಿಗಳನ್ನು ಸದ್ಯಕ್ಕೆ ಬಿಡುವುದಿಲ್ಲ. ಆದರೆ, ನೀವುಗಳು ಮನೆಗೆ ತೆರಳಿ ಎಂದು ಹೇಳಿದ ರೀತಿ ಓರ್ವ ಪೊಲೀಸ್ ಅಧಿಕಾರಿಯ ಜನರಪರ ಕಾಳಜಿಯನ್ನು ಪ್ರತಿನಿಧಿಸುತ್ತಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















