ನವದೆಹಲಿ:ಸೆ:30:ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿದ್ದ ಭಾರತೀಯ ಯೋಧನನ್ನು ಪಾಕಿಸ್ತಾನದ ವಶದಿಂದ ಸುರಕ್ಷಿತವಾಗಿ ಬಿಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಪಾಕಿಸ್ತಾನ ಯೋಧರು ಭಾರತೀಯ ಯೋಧನನ್ನು ಬಂಧಿಸಿದ್ದಾರೆ ಎಂದು ಪಾಕ್ ಹೇಳುತ್ತಿರುವ ವರದಿ ಸುಳ್ಳು. ಯೋಧನೋರ್ವ ಗಡಿ ನಿಯಂತ್ರಣ ರೇಖೆ ಬಳಿ ಪಹರೆ ತಿರುಗುತ್ತಿದ್ದಾಗ ಅಚಾನಕ್ಕಾಗಿ ಗಡಿ ದಾಟಿದ್ದರು. ಈ ವೇಳೆ ಪಾಕ್ ಸೈನಿಕರು ಯೋಧನನ್ನು ವಶಕ್ಕೆ ಪಡೆದಿದ್ದಾರೆ? ಎಂದು ಸ್ಪಷ್ಟಪಡಿಸಿದರು.
ಭಾರತೀಯ ಯೋಧನನ್ನು ಪಾಕ್ ಸೈನಿಕರು ವಶಕ್ಕೆ ಪಡೆದಿರುವ ವರದಿಯ ಸಂಬಂಧ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗಿದೆ. ಆತನನ್ನು ಬಿಡಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಪಾಕ್ ವಶದಲ್ಲಿರುವ ಯೋಧನನ್ನು 37ನೇ ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ 22 ವರ್ಷದ ಚಂದು ಬಾಬುಲಾಲ್ ಚೌಹಾಣ್ ಎಂದು ತಿಳಿದುಬಂದಿದೆ. ಪಾಕ್ ಸೇನೆಯೊಂದಿಗೆ ಮಾತುಕತೆ ನಡೆಯುತ್ತಿದ್ದು, ಯೋಧನನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಗಡಿ ನಿಯಂತ್ರಣ ರೇಖೆ ಬಳಿ ಆಗಾಗ್ಗೆ ಯೋಧರು ಮತ್ತು ನಾಗರಿಕರು ಗಡಿ ದಾಟುತ್ತಿರುತ್ತಾರೆ. ನಂತರ ಅವರನ್ನು ಪರಸ್ಪರ ಹಸ್ತಾಂತರಿಸಿಕೊಳ್ಳಲಾಗುತ್ತದೆ ಎಂದು ಸೇನಾಧಿಕಾರಿಗಳು ಕೂಡ ತಿಳಿಸಿದ್ದಾರೆ.















