ಕಲ್ಪ ಮೀಡಿಯಾ ಹೌಸ್
ಬೆಂಗಳೂರು: 2020-21ನೇ ಸಾಲಿನ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಿದರು.
ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಗಳ ಆಧಾರದ ಮೇಲೆ ಈ ಫಲಿತಾಂಶ ನೀಡಿದ್ದೇವೆ. ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಮಾಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗಿತ್ತು. ಇದೇ ವೇಳೆ ಫಲಿತಾಂಶದಿಂದ ಅಸಮಾಧಾನವಾಗಿದ್ದರೆ, ಆಗಸ್ಟ್‍ನಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟು 6,66,497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರ ಪೈಕಿ 3,35,138 ವಿದ್ಯಾರ್ಥಿಗಳು, 3,31,359 ವಿದ್ಯಾರ್ಥಿನಿಯರು ಇದ್ದಾರೆ. ಪ್ರಮುಖವಾಗಿ 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 1,47,243 ಇದರಲ್ಲಿ 14,243 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸ್ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು https://dpue-exam.karnataka.gov.in/iipu2021 registration number/regnumber ಈ ಲಿಂಕ್‌ನ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ.
ಡಿಸ್ಟಿಂಕ್ಷನ್ ಮತ್ತು ಫಸ್ಟ್ ಕ್ಲಾಸ್ ಸ್ಟೂಡೆಂಟ್ಸ್: 4,50,706 ಇದರಲ್ಲಿ 1,95,650 ಬಾಲಕರು, 2,52,056 ಬಾಲಕಿಯರಿದ್ದಾರೆ. ದ್ವಿತೀಯ ದರ್ಜೆ- 1,67,055 ಜಸ್ಟ್ ಪಾಸ್- 68,729 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳು- 2,239.
ವೈಜ್ಞಾನಿಕ ಆಧಾರದಲ್ಲಿ ಫಲಿತಾಂಶ ಘೋಷಣೆ:
ಈಗ ಪಾಸಾಗುತ್ತಿರುವ ಎಲ್ಲ ಮಕ್ಕಳು ಕಳೆದ ವರ್ಷ ಮೊದಲ ಪಿಯುಸಿ ತರಗತಿಗಳನ್ನು ಪರೀಕ್ಷೆಯ ಮೂಲಕ ಉತ್ತೀರ್ಣರಾಗಿದ್ದು, ಆ ಅಂಕಗಳು ಮತ್ತು ಅವರ 10ನೇ ತರಗತಿ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯು ಫಲಿತಾಂಶಗಳನ್ನು ಘೋಷಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
2019-20ನೇ ಸಾಲಿನಲ್ಲಿ ನಡೆದ ಮೊದಲ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಅವರ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಈ ಬಾರಿಯ ದ್ವಿತೀಯ ಪಿಯುಸಿ ಅಂಕಗಳನ್ನು ನಿರ್ಧರಿಸಲಾಯಿತು. ಆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತಿದೆ. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ ಪ್ರಕಟಣೆ ಮೂಲಕ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಎಸ್ಸೆಸ್ಸೆಲ್ಸಿ ಅಥವಾ ಇತರೆ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ. 45ರಷ್ಟು ಅಂಕಗಳು, ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಶೇ. 45ರಷ್ಟು ಅಂಕಗಳು, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚುಟುವಟಿಕೆಗಳಿಗೆ ಶೇ. 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯುಸಿ ಪಡೆದ ಅಂಕಗಳಿಗೆ ಶೇ. 5 ಅಂಕಗಳನ್ನು ಸಿದ್ಧಪಡಿಸಿ ಫಲಿತಾಂಶವನ್ನು ನಿರ್ಣಯಿಸಲಾಗಿದೆ ಎಂದು ಸುರೇಶ್ ಕುಮಾರ್ ಫಲಿತಾಂಶ ಘೋಷಣೆಯ ವಿವರಗಳನ್ನು ನೀಡಿದರು.
ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳೂ ಮುಂದಿನ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.
ನಾವು ಘೋಷಿಸಿದಂತೆ ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸಿದ್ದೇವೆ. ಸಿಬಿಎಸ್‍ಇನವರಿಗಿಂತ ಫಲಿತಾಂಶ ಘೋಷಿಸಬೇಕೆಂಬುದು ನಮ್ಮ ಮಕ್ಕಳ ಇಚ್ಛೆಯಾಗಿತ್ತು ಎಂದು ಸಚಿವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಪ್ರಸರಣ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದರಿಂದ ಅವರ ಹಿಂದಿನ ಶೈಕ್ಷಣಿಕ ಸಾಧನೆಗಳನ್ನು ಆಧರಿಸಿ ಫಲಿತಾಂಶ ಘೋಷಿಸಿ ಎಲ್ಲರನ್ನು ಉತ್ತೀರ್ಣಗೊಳಿಸಿರುವುದರಿಂದ ಎಲ್ಲರಿಗೂ ಪದವಿ ತರಗತಿಗಳಲ್ಲಿ ಸೀಟುಗಳನ್ನು ದೊರೆಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಮಂಗಳವಾರ ಪಿಯುಸಿ ಫಲಿತಾಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ ಮಾತನಾಡಿದ ಅವರು, ಪದವಿ ಕಾಲೇಜುಗಳಿಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಿಯುಸಿ ಉತ್ತೀರ್ಣರಾಗುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಪದವಿ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಕಾಲೇಜು ಶಿಕ್ಷಣ ಇಲಾಖೆ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳಿಗೆ ಅವಕಾಶ ಕಲ್ಪಿಸಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಅವರೂ ಸಹ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಪುನರಾವರ್ತಿತ ಅಭ್ಯರ್ಥಿಗಳ ತೇರ್ಗಡೆ
ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲಾಗುತ್ತಿದೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಪಿಯುಸಿ ಪರೀಕ್ಷಾ ಫಲಿತಾಂಶ ವಿವರ: ಒಟ್ಟು ವಿದ್ಯಾರ್ಥಿಗಳು 666497, ಬಾಲಕರು – 335138, ಬಾಲಕಿಯರು- 331359. ಹೊಸ ವಿದ್ಯಾರ್ಥಿಗಳು – 590153, ಪುನರಾವರ್ತಿತ ವಿದ್ಯಾರ್ಥಿಗಳು- 76344. ವಾಣಿಜ್ಯ ವಿಭಾಗ- 251686, ವಿಜ್ಞಾನ ವಿಭಾಗ- 219777, ಕಲಾ ವಿಭಾಗ- 195034 ವಿದ್ಯಾರ್ಥಿಗಳಿದ್ದಾರೆ.
5,18,903 ನಗರ ಅಭ್ಯರ್ಥಿಗಳಿದ್ದರೆ, 1,47,594 ಗ್ರಾಮೀಣ ಅಭ್ಯರ್ಥಿಗಳಿದ್ದಾರೆ. ಒಟ್ಟು ಅಭ್ಯಥಿಗಳಲ್ಲಿ 4,50,706 ವಿದ್ಯಾರ್ಥಿಗಳು ಮೊದಲ ಶ್ರೇಣಿ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದರೆ, 1,47,055 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 68,729 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
1428 ವಿಕಲಚೇತನ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ಅದರಲ್ಲಿ 84 ಮಂದಿ ಉನ್ನತ ಶ್ರೇಣಿ, 603 ಪ್ರಥಮ ಶ್ರೇಣಿ, 459 ಮಂದಿ ದ್ವಿತೀಯ ಶ್ರೇಣಿ ಮತ್ತು 310 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮದ 2,75,599 ಮಕ್ಕಳು ಕನ್ನಡ ಮಾಧ್ಯಮ ಮತ್ತು 3,90,898 ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದವರು.
600ಕ್ಕೆ 600 ಅಂಕಗಳ ಫಲಿತಾಂಶ ಪಡೆದ ಮಕ್ಕಳು
ರಾಜ್ಯದ ಎಲ್ಲ 32 ಶೈಕ್ಷಣಿಕ ಜಿಲ್ಲೆಗಳ ಹಲವಾರು ಪದವಿ ಪೂರ್ವ ಕಾಲೇಜುಗಳ ಮಕ್ಕಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 2239 ಫ್ರೆಶ್ ವಿದ್ಯಾರ್ಥಿಗಳು ಪೂರ್ಣ ಅಂಕ ದಾಖಲಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ 445, ಬೆಂಗಳೂರು ದಕ್ಷಿಣ-302, ಬೆಂಗಳೂರು ಉತ್ತರ-261, ಉಡುಪಿ-149, ಕೊಡಗು-04, ರಾಯಚೂರು/ಚಿಕ್ಕೋಡಿ-07, ಚಾಮರಾಜನಗರ-03, ಯಾದಗಿರಿ ಜಿಲ್ಲೆ-02 ಮಕ್ಕಳು ಪೂಣ ಅಂಕಗಳನ್ನು ಗಳಿಸಿದ್ದಾರೆ.
ಆಗಸ್ಟ್ ನಲ್ಲಿ ವಾರ್ಷಿಕ ಪರೀಕ್ಷೆ
ಈ ಬಾರಿಯ ದ್ವಿತೀಯ ಪಿಯು ಫಲಿತಾಂಶವನ್ನು ಒಪ್ಪಿಕೊಳ್ಳಲು ಇಲ್ಲವೇ ತಿರಸ್ಕರಿಸಲು ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿದ್ದ ಫ್ರೆಷರ್ಸ್ ಮತ್ತು ರಿಪೀಟರ್ಸ್ ಅಭ್ಯರ್ಥಿಗಳಿಗೆ ಅವಕಾಶವಿದ್ದು, ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.
ಅದರಂತೆ ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಿ ಈ ಫಲಿತಾಂಶ ತಿರಸ್ಕರಿಸುವ ಹೊಸ ವಿದ್ಯಾರ್ಥಿಗಳಿಗೆ (ಫ್ರೆಷರ್ಸ್) ಮತ್ತು ಪುನರಾವರ್ತಿತ (ರಿಪೀಟರ್ಸ್) ಅಭ್ಯರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ.
ಈ ಎರಡು ವರ್ಗದ ಅಭ್ಯರ್ಥಿಗಳು ಫಲಿತಾಂಶ ತಿರಸ್ಕರಿಸಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಜುಲೈ 30ರಂದು ಕೊನೆಯ ದಿನವಾಗಿದೆ. ಹಾಗೆಯೇ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಖಾಸಗಿ (ಪ್ರೈವೇಟ್) ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಬೇಕಿದೆ. ಈ ಖಾಸಗಿ ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆಗೆ ನೊಂದಾಯಿಸಿಕೊಂಡಿರುವುದರಿಂದ ಅವರು ಮತ್ತೆ ಪರೀಕ್ಷೆಗೆ ನೊಂದಾಯಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಈ ಮೂರು ವರ್ಗದ ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ಪರೀಕ್ಷೆ ನಡೆಸಲಾಗುವುದು. ಆಗಸ್ಟ್‍ನಲ್ಲಿ ನಡೆಯುವ ಪರೀಕ್ಷೆ ಸಹ ವಾರ್ಷಿಕ ಪರೀಕ್ಷೆಯೇ ಆಗಿರುತ್ತದೆ. ಈ ಬಾರಿಯ ಫಲಿತಾಂಶ ತಿರಸ್ಕರಿಸಿ ಆಗಸ್ಟ್‍ನಲ್ಲಿ ಪರೀಕ್ಷೆಗೆ ಹಾಜರಾಗುವ ಫ್ರೆಷರ್ ಅಭ್ಯರ್ಥಿಗಳನ್ನು ಫ್ರೆಷರ್ ಎಂದೇ ಪರಿಗಣಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿವೆ ಎಂದು ಸಚಿವರು ಪರೀಕ್ಷೆಯ ವಿವರಗಳನ್ನು ಒದಗಿಸಿದರು.
ಯಾರೂ ಅಧೀರರಾಗಬಾರದು
ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಬಂದ ನಂತರ ತನಗೆ ಕಡಿಮೆ ಅಂಕಗಳು ಬರಬಹುದೆಂದು ಹೊಸನಗರ ಜಿಲ್ಲೆಯ ರಿಪ್ಪನ್‍ಪೇಟೆಯ ವಿದ್ಯಾರ್ಥಿನಿ ಕೆಂಚನಾಲ ಚೇತನ ಆತ್ಮಹತ್ಯೆಗೆ ಯತ್ನ ಮಾಡಿದ್ದನ್ನು ಪ್ರಸ್ತಾಪಿಸಿದ ಸಚಿವರು, ಯಾರೂ ಅಧೀರರಾಗಬಾರದು. ಜೀವನದಲ್ಲಿ ಇದೇ ಮೊದಲ ಪರೀಕ್ಷೆಯಲ್ಲ, ಅನೇಕ ಕಷ್ಟನಷ್ಟಗಳು, ಪರೀಕ್ಷೆಗಳು ಎದುರಾಗಲಿವೆ. ಎಲ್ಲದನ್ನೂ ಧೈರ್ಯದಿಂದ ಎದುರಿಸಬೇಕು. ಹಾಗಾಗಿ ಯಾವೊಬ್ಬ ಮಕ್ಕಳು ಪರೀಕ್ಷಾ ಫಲಿತಾಂಶದಿಂದ ಎದೆಗುಂದಬಾರದು. ಪೋಷಕರೂ ಸಹ ಮಕ್ಕಳಿಗೆ ಧೈರ್ಯ ಹೇಳಲು ಮುಂದಾಗಬೇಕು ಎಂದು ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ಚೇತಾನ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಗುರುವಾರದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಚೆನ್ನಾಗಿ ಬರೆಯಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಚಿವರು ಅಭಿನಂದಿಸಿದರು. ಸಚಿವರು ಫಲಿತಾಂಶ ಘೋಷಿಸಲು ಆರಂಭಿಸುತ್ತಿದ್ದಂತೆಯೇ ಪಿಯು ಮಂಡಳಿಯ ಸ್ಯಾಟ್ಸ್ ಪೋರ್ಟಲ್‍ನಲ್ಲಿ ನೊಂದಾಯಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಅವರ ನೊಂದಾಯಿತ ದೂರವಾಣಿ ಸಂಖ್ಯೆಗೆ ಫಲಿತಾಂಶಗಳು ರವಾನೆಯಾದವು.
762 ಮಕ್ಕಳು ಈ ಬಾರಿ ಪರೀಕ್ಷೆಗೆ ಹಾಜರಾಗಬಹುದು
ಈ ಬಾರಿಯ ದ್ವಿತೀಯ ಪಿಯುಸಿ ತರಗತಿಗಳಿಗೆ ನೊಂದಾಯಿಸಿದ್ದರೂ ಪಿಯುಸಿ ಪರೀಕ್ಷೆಗೆ ನೊಂದಾಯಿಸದೇ ಇದ್ದ 762 ಮಕ್ಕಳು ಆಗಸ್ಟ್‍ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೊಂದಾಯಿಸಿಕೊಂಡು ಹಾಜರಾಗಬಹುದು ಎಂದು ಸುರೇಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















