ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನ ಸಾಂಕ್ರಾಮಿಕ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದೆ. ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಇಂತಹ ಸಂಕಟ ಸ್ಥಿತಿಯಲ್ಲಿ ಬೆಂಗಳೂರಿನ ಉದ್ಯಮಿಯೋರ್ವರು, ತಾವು ಹುಟ್ಟಿ ಬೆಳೆದ ಊರು – ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಿನಹಸ್ತ ಚಾಚುತ್ತಿದ್ದಾರೆ. ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆಗೆ ಮುಂದಾಗಿದ್ದಾರೆ.
ಮೂಲತಃ ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆರ್ .ಚಂದ್ರು ಎಂಬುವರೇ ನೋಟ್ ಬುಕ್-ಲೇಖನ ಸಾಮಗ್ರಿ ವಿತರಿಸುತ್ತಿರುವ ಉದ್ಯಮಿಯಾಗಿದ್ದಾರೆ. ಶುಕ್ರವಾರ ಕುಂಸಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ನೋಟ್ ಬುಕ್ ವಿತರಣೆಗೆ ಚಾಲನೆ ನೀಡಲಾಯಿತು.
ಆರ್.ಚಂದ್ರುರವರ ಅನುಪಸ್ಥಿತಿಯಲ್ಲಿ ಅವರ ಸಹೋದರ, ಕುಂಸಿ ಗ್ರಾಪಂ ಮಾಜಿ ಅಧ್ಯಕ್ಷರಾದ ಹುಲಿಗೆಪ್ಪರವರು ಸಾಂಕೇತಿಕವಾಗಿ ಕೆಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.
ನಂತರ ಮಾತನಾಡಿದ ಅವರು, ‘ಆಯಾ ಶಾಲೆಗಳಿಗೆ ನೋಟ್ ಬುಕ್-ಲೇಖನ ಸಾಮಗ್ರಿ ಹಸ್ತಾಂತರಿಸಲಾಗುವುದು. ಶಾಲೆ ಆರಂಭವಾದ ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಲಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ನೋಟ್ ಬುಕ್ ಲಭ್ಯವಾಗಲಿದೆ. ಸೇವಾ ಕಾರ್ಯಗಳ ಮೂಲಕ ಸಂಕಟದಲ್ಲಿರುವವರಿಗೆ ನಿರಂತರವಾಗಿ ನೆರವಾಗುತ್ತಿರುವ ಸಹೋದರನಿಗೆ, ಭಗವಂತ ಆರೋಗ್ಯ ಕಲ್ಪಿಸಿ ಶುಭವನ್ನುಂಟು ಮಾಡಲಿ’ ಎಂದರು.
ಆರ್. ಚಂದ್ರು ಅವರ ಬಾಲ್ಯ ಸ್ನೇಹಿತ ಹಾಗೂ ಶಿವಮೊಗ್ಗದ ಮಥುರಾ ಸೆಂಟ್ರಲ್ ಹೋಟೆಲ್ ಮಾಲೀಕ ರಾಜೇಂದ್ರರವರು ಮಾತನಾಡಿ, ‘ಆರ್.ಚಂದ್ರು ಕುಂಸಿ ಗ್ರಾಮದಲ್ಲಿಯೇ ಹುಟ್ಟಿ ಬೆಳೆದವರಾಗಿದ್ದಾರೆ. ಬಡತನದಿಂದ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ. ಶ್ರಮಪಟ್ಟು ಮೇಲೆ ಬಂದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಹುಟ್ಟಿದ ಊರಿಗೆ ನಾನಾ ರೀತಿಯಲ್ಲಿ ನೆರವಾಗುತ್ತಿದ್ದಾರೆ’ ಎಂದು ಹೇಳಿದರು.
‘ಬಡತನದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕಗಬಾರದು ಎಂಬ ಕಳಕಳಿ ಅವರದ್ದಾಗಿದೆ. ಈ ಕಾರಣದಿಂದ ಕಳೆದ 16 ವರ್ಷಗಳಿಂದ, ಕುಂಸಿ ಸುತ್ತಮುತ್ತಲಿನ ಐದಾರು ಗ್ರಾಮಗಳ ಸರ್ಕಾರಿ-ಖಾಸಗಿ ಶಾಲೆಗಳಲ್ಲಿ ಅಭ್ಯಾಸಿಸುತ್ತಿರುವ ಎಲ್ಲ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಆಗುವಷ್ಟು ನೋಟ್ ಬುಕ್-ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಹಾಯಹಸ್ತ ಮುಂದುವರಿಸಿರುವುದು ಅಭಿನಂದನೀಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ಜಗದೀಶ್, ದೈಹಿಕ ಶಿಕ್ಷಕರಾದ ಹಾಲೇಶಪ್ಪ, ಹುಲಿಗೆಪ್ಪರವರ ಪುತ್ರ ಪ್ರದೀಪ್, ಶಿವಮೊಗ್ಗದ ಯುವ ಉದ್ಯಮಿ ಆರ್. ರಾಘವೇಂದ್ರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post