ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸಂಘಟನೆಯ ಸ್ವಂತ ಶಕ್ತಿಯಿಂದ ಗೆದ್ದು ರಾಜ್ಯದಲ್ಲಿ ಐದನೆಯ ಬಾರಿ ಬಿಜೆಪಿಯವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವತ್ವದಲ್ಲಿ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಬಿಲಿಷ್ಟಗೊಳಿಸುವ ಮೂಲಕ ಮುಂಬರುವ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಸಂಘಟನೆಯ ಶಕ್ತಿಯೊಂದಿಗೆ ಸಂಪೂರ್ಣ ಬಹುಮತ ಪಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದ್ದು, ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರಾದ ಅಮಿತ್ ಷಾ, ಜೆ.ಪಿ. ನಡ್ಡಾ ಎಲ್ಲರನ್ನು ಭೇಟಿ ಮಾಡಿ ಬಂದ ಬಳಿಕ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿ, ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚಿಸಲಾಗುವುದು ಎಂದರು.
ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಪಕ್ಷ, ಸಂಘಟನೆ ಮತ್ತು ಸರ್ಕಾರದ ಭಾಗವಾಗಿರುವ ನಾವೆಲ್ಲ ಆಗಾಗ ಭೇಟಿ ಮಾಡಿ ಸಮಾಲೋಚನೆ, ನಡೆಸುವುದು ಸಾಮಾನ್ಯ. ಇದೊಂದು ಸೌಹಾರ್ದ ಭೇಟಿ ಎಂದರು.
ಬಿ.ಎಸ್. ಯಡಿಯೂರಪ್ಪ ಅವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೂ, ದುರದೃಷ್ಟದಿಂದ ನಾಲ್ಕು ಬಾರಿಯೂ ರಾಜ್ಯದಲ್ಲಿ ನಮಗೆ ಸಂಪೂರ್ಣ ಬಹುಮತ ಸಿಗದ ಪರಿಣಾಮ ಗೊಂದಲಗಳು ಉಂಟಾಯಿತು ಎಂದು ಹೇಳಿದರು.
ಇನ್ನು ಮುಂದೆ ಇದು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ಮುಂದಿನ ಚುನಾವಾಣೆಯನ್ನು ನಳಿನ್ ಕುಮಾರ್ ನೇತೃತ್ವದಲ್ಲಿ ಸಂಘಟನೆಯ ಶಕ್ತಿಯಿಂದಲೇ ಎದುರಿಸಿ ಸಂಪೂರ್ಣ ಬಹುಮತ ಪಡೆಯಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಿದರೆ, ನಳಿನ್ ಕುಮಾರ್ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದರು.
ಸಂಪುಟದಲ್ಲಿ ಹಿರಿಯರನ್ನು ಕೈಬಿಡಲಾಗುವುದು ಎನ್ನುವ ಮಾತುಗಳು ಕೇಳಿಬರುತ್ತಿವೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಂಪುಟ ರಚನೆ ವಿಷಯದಲ್ಲಿ ಕೇಂದ್ರದ ಮುಖಂಡರ ತೀರ್ಮಾನವೇ ಅಂತಿಮ. ನಾವೆಲ್ಲರೂ ಅದಕ್ಕೆ ಬದ್ಧರಾಗಿದ್ದೇವೆ ಸ್ಪಷ್ಟಪಡಿಸಿದರು.
ತಮಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಅನೇಕರ ಆಸೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ ದೂರವಾಣಿ ಕರೆಮಾಡಿ ಅವರ ಆಸೆ ಹಂಚಿಕೊಂಡಿದ್ದಾರೆ. ಆದರೆ, ಪಕ್ಷದ ದೃಷ್ಟಿಯಿಂದ ಯಾರಿಗೆ ಯಾವ ಸ್ಥಾನ ನೀಡಿದರೆ ಅನುಕೂಲ ಆಗಲಿದೆ ಎಂಬುದನ್ನು ಆಧರಿಸಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಹಿಂದುಳಿದವ, ಹಿರಿಯ, ದಲಿತ ಎನ್ನುವುದು ಪಕ್ಷದ ಕಾರ್ಯಕರ್ತನ ಲಕ್ಷಣವಲ್ಲ. ಪಕ್ಷ ಸಂಘಟನೆಗೆ ಕಾರ್ಯಕರ್ತರೆಲ್ಲರೂ ಒಂದೇ, ಬಿಜೆಪಿ ನಮಗೆ ಮಾತೃ ಸಮಾನ ಎಂದು ಈಶ್ವರಪ್ಪ ಹೇಳಿದರು.
ಹಿಂದುಳಿದ ವರ್ಗಕ್ಕೆ ಬಿಜೆಪಿ ಮಾನ್ಯತೆ ನೀಡುತ್ತಿಲ್ಲ ಎಂದು ಸಿದ್ಧರಾಮಯ್ಯನವರ ಆರೋಪಕ್ಕೆ ಉತ್ತರ ನೀಡಿದ ಈಶ್ವರಪ್ಪ, 45 ಜನ ಹಿಂದುಳಿದ ವರ್ಗದವರು ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ. ಹಿಂದುಳಿದ ವರ್ಗದವರಿಗೆ ಬಿಜೆಪಿಯಲ್ಲಿ ಕೊಟ್ಟಿರುವಂತಹ ಮಾನ್ಯತೆ ಬೇರೆ ಯಾವುದೇ ಪಕ್ಷದಲ್ಲೂ ನೀಡಿಲ್ಲ. ಇಲ್ಲಿಯವರೆಗೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದುಳಿದ ವರ್ಗದ ಮಂತ್ರಿಗಳಿಗೆ ಯಾವ ಸರ್ಕಾರದಲ್ಲೂ ಸ್ಥಾನ ನೀಡಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post