ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯಾರಂಭಗೊಂಡಿರುವ ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಸೌಲಭ್ಯ ಹೊಂದಿರುವ ಕ್ಯಾಥ್‌ಲ್ಯಾಬ್, ಜಯದೇವ ಹೃದ್ರೋಗ ಸಂಸ್ಥೆಯ ಗುಣಮಟ್ಟ ಹೊಂದಿದೆ ಎಂದು ಜಯದೇವ ಹೃದ್ರೊಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದರು.
ಅವರು ಶನಿವಾರ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಇಲ್ಲಿನ ಕ್ಯಾಥ್‌ಲ್ಯಾಬ್‌ನಲ್ಲಿ ಶನಿವಾರ ಬೆಳಿಗ್ಗೆ ಐದು ಮಂದಿಗೆ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಇಲ್ಲಿ ಅತ್ಯಾಧುನಿಕ ಉಪಕರಣಗಳು, ಮೂವರು ತಜ್ಞ ಹೃದ್ರೋಗ ತಜ್ಞರು ಮತ್ತು ತಂತ್ರಜ್ಞರಿದ್ದು, ಹೃದ್ರೋಗ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿದೆ. 50 ಹಾಸಿಗೆ ಸಾಮರ್ಥ್ಯದ ಕ್ಯಾಥ್‌ಲ್ಯಾಬ್ ಆರಂಭದೊಂದಿಗೆ ಶಿವಮೊಗ್ಗ ಜಿಲ್ಲೆಯ ಮಾತ್ರವಲ್ಲದೆ ನೆರೆಯ ಜಿಲ್ಲೆಗಳ ಜನರಿಗೂ ಉತ್ತಮ ಗುಣಮಟ್ಟದ ಹೃದ್ರೋಗ ಚಿಕಿತ್ಸೆ ದೊರೆಯಲಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ 25ರಿಂದ 35 ವರ್ಷದೊಳಗಿನವರಲ್ಲಿ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿನ ಕ್ಯಾಥ್‌ಲ್ಯಾಬ್‌ನಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಹೆಲ್ತ್ ತಪಾಸಣೆ ಸೌಲಭ್ಯ ಸಹ ಲಭ್ಯವಿದೆ. ಹೃದಯಾಘಾತವಾದ ಸಂದರ್ಭದಲ್ಲಿ ಆದಷ್ಟು ಬೇಗನೆ ಆಸ್ಪತ್ರೆಗೆ ಆಗಮಿಸುವುದರಿಂದ ಜೀವ ಉಳಿಸಲು ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಿದೆ. ಜಯದೇವ ಹೃದ್ರೋಗ ಸಂಸ್ಥೆಯಿಂದ ಇಲ್ಲಿನ ತಜ್ಞ ವೈದ್ಯರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದರು.
ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ ಅವರು ಮಾತನಾಡಿ, ಕ್ಯಾಥ್‌ಲ್ಯಾಬ್‌ನಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಆರೋಗ್ಯ ಕರ್ನಾಟಕ ಕಾರ್ಡುದಾರರಿಗೆ ಹಾಗೂ ಇನ್ನುಳಿದ ಸಾರ್ವಜನಿಕರಿಗೂ ರಿಯಾಯಿತಿ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಡಾ.ರವೀಂದ್ರನಾಥ್, ಶಿವಮೊಗ ಮೆಡಿಕಲ್ ಕಾಲೇಜಿನ ಹೃದ್ರೋಗ ತಜ್ಞರಾದ ಡಾ. ವಿರೂಪಾಕ್ಷಪ್ಪ, ಡಾ. ಪರಮೇಶ್ವರಪ್ಪ, ಡಾ.ಮಹೇಶ್, ಡಾ.ಶ್ರಿಧರ್, ಆಡಳಿತಾಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post