ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕಳೆದ ನೂರಾರು ವರ್ಷಗಳಿಂದ ಮಡಿವಾಳ ಸಮಾಜಕ್ಕೆ ಪರಿಶಿಷ್ಟ ಜಾತಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಮಾತ್ರ ಸಮಾಜದ ನಿರ್ಲಕ್ಷಿಸುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ನಾವೆಲ್ಲಾ ಒಂದಾಗಿ ಸಮಾಜಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ ಎಂದು ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠ ಡಾ.ಬಸವ ಮಾಚಿದೇವ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ನಗರಂಗೆರೆ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮನ, ಮನೆ ಮಾಚಿದೇವ ಶ್ರಾವಣ ಮಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆರ್ಶಿವಚನ ನೀಡಿದರು.

ಮನ, ಮನೆ ಶ್ರಾವಣ ಮಾಸದ ಕಾರ್ಯಕ್ರಮದ ಮೂಲಕ ಜನಾಂಗದಲ್ಲಿ ಹೊಸ ಆಂದೋಲನ ಸೃಷ್ಠಿಯಾಗಲಿದೆ. ದೇಶದ ಹಲವಾರು ರಾಜ್ಯಗಳಲ್ಲಿ ಮಡಿವಾಳ ಸಮಾಜಕ್ಕೆ ಎಸ್ಸಿ ಮೀಸಲಾತಿಯನ್ನು ನೀಡಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ. ಆದರೆ, ಕರ್ನಾಟಕದಲ್ಲಿ ದಶಕಗಳಿಂದ ಹೋರಾಟ ಮಾಡಿದರೂ ಸಮಾಜಕ್ಕೆ ಯಾವುದೇ ಸ್ಥಾನಮಾನ ದೊರಕಿಸಲಾಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಶಾಸಕ ಟಿ. ರಘುಮೂರ್ತಿ ಮನವಿ ಮಾಡಿದ ಶ್ರೀಗಳು, ನಗರದಲ್ಲಿ ಮಡಿವಾಳ ಸಮಾಜಕ್ಕೆ ೩ ಎಕರೆ ಜಾಗದಲ್ಲಿ ಮಡಿಕಟ್ಟೆ ನಿರ್ಮಿಸಬೇಕು, ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಬೇಕು, ಈಗಿರುವ ವಿದ್ಯಾರ್ಥಿನಿಯಲಕ್ಕೆ ಮೂಲಸೌಲಭ್ಯವಿಲ್ಲದೆ ಶಿಥಿಲ ವ್ಯವಸ್ಥೆಯಲ್ಲಿದೆ, ಅದರ ಕಾಯಕಲ್ಪ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಶಾಸಕರು ಸಮಾಜದ ಏಳ್ಗೆಗೆ ನಾನು ಸದಾ ಬೆನ್ನೆಲೆಬಾಗಿರುವ ಭರವಸೆ ನೀಡಿದರು.

ಸಾನ್ನಿಧ್ಯವಹಿಸಿ ಮಾತನಾಡಿದ ಕಬೀರಾನಂದ ಆಶ್ರಮ ಸದ್ಗುರು ಶ್ರೀಶಿವಲಿಂಗಾನಂದ ಮಹಾಸ್ವಾಮೀಜಿ, ೧೨ನೆಯ ಶತಮಾನದ ಜಾತಿ ವ್ಯವಸ್ಥೆಯಲ್ಲಿ ಹೊಸ ಸಂಚಲನ ಉಂಟು ಮಾಡಿದವರು ಮಾಚಿದೇವರು. ಸಮಾಜದ ಹೊಲಸನ್ನು ತೊಳೆದು ನೀತಿವಂತ ಸಮಾಜಕ್ಕೆ ಅಡಿಪಾಯ ಹಾಕಿದ ಕೀರ್ತಿ ಮಡಿವಾಳ ಸಮಾಜಕ್ಕೆ ಸೇರುತ್ತದೆ. ಅನೀತಿಯ ಸಮಾಜದಲ್ಲಿ ನೀತಿ ಉಳಿಸುವ ಕಾರ್ಯ ಮಡಿವಾಳ ಸಮಾಜ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ೧೨ನೆಯ ಶತಮಾನದ ಮಡಿವಾಳ ಮಾಚಿದೇವರ ತತ್ವ ಆದರ್ಶಗಳನ್ನು ಮನೆ, ಮನೆಗೆ ತಲುಪಿಸುವ ಉದ್ದೇಶದಿಂದ ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠ ಡಾ.ಬಸವ ಮಾಚಿದೇವ ಸ್ವಾಮೀಜಿ ಮನ, ಮನೆ ಶ್ರಾವಣ ಮಾಸದ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜವನ್ನು ಒಗ್ಗೂಡಿಸುವ ಕಾರ್ಯ ಶ್ಲಾಘನೀಯ ಎಂದರು.

ಸಂಪ್ರದಾಯ, ಗುರುಭಕ್ತಿ ಹೆಚ್ಚಾಗಿರುವ ಮಡಿವಾಳ ಸಮಾಜಕ್ಕೆ ಒಗ್ಗೂಡಿ ಹೋರಾಟ ನಡೆಸುವ ಶಕ್ತಿಯೂ ಬರಬೇಕಿದೆ. ಶತಮಾನಗಳಿಂದ ಜಾತಿ ವ್ಯವಸ್ಥೆಯಲ್ಲಿ ಹಲವಾರು ಸಮಾಜಗಳು ಇಂದಿಗೂ ಸಮಾಜಮುಖಿಗೆ ಬರಲಾಗಿಲ್ಲ. ಅದರಲ್ಲಿ ಮಡಿವಾಳ ಸಮಾಜವೂ ಒಂದಾಗಿದ್ದು, ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಮುಂದೆ ಬರಲು ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಎಂಬುವುದು ಪೋಷಕರು ತಿಳಿಯಬೇಕು ಎಂದರು.
ಪರಿವರ್ತಕನಾ ಚಿಂತಕ, ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದು ವಚನಗಳ ಪ್ರಭಾವದಿಂದ. ವಚನಕಾರರು ಈ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೇಲು ಕೀಳು ಭಾವನೆಯನ್ನು ದೂರ ಮಾಡಲು ವಚನಗಳನ್ನು ರಚಿಸಿದರು. ಆದರೆ, ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲೂ ಜಾತಿ ವ್ಯವಸ್ಥೆ ದೂರ ಮಾಡುವ ಉದ್ದೇಶವೇ ಅಡಗಿದೆ. ಸಂವಿಧಾನಕ್ಕೂ ವಚನಗಳಿಗೂ ಅವಿನಾಭಾವನ ಸಂಬಂಧ ಬೆಸೆದಿದೆ. ಪ್ರತಿಯೊಬ್ಬರೂ ವಚನಗಳನ್ನು ಓದಬೇಕೆಂದಿಲ್ಲ, ವಚನಗಳನ್ನು ಅಳವಡಿಸಿಕೊಂಡ ಶರಣರನ್ನು ಮನದಲ್ಲಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಾಕು ಈ ಸಮಾಜದ ಬದಲಾವಣೆಯತ್ತ ಸಾಗುತ್ತದೆ ಎಂದರು.

ಪ್ರಾಧ್ಯಾಪಕ ಡಾ.ವಿ. ಬಸವರಾಜು ಮಾರ್ಗದರ್ಶಿ ನುಡಿ ನುಡಿದರು, ಜಿಲ್ಲಾಧ್ಯಕ್ಷ ರಾಮಪ್ಪ, ತಾಲ್ಲೂಕು ಅಧ್ಯಕ್ಷ ಎನ್. ಮಂಜುನಾಥ, ಗೌರವಾಧ್ಯಕ್ಷ ಎಂ. ನಾಗರಾಜು, ನಗರಂಗೆರೆ ಗ್ರಾಪಂ ಅಧ್ಯಕ್ಷ ಪಾತಲಿಂಗಪ್ಪ, ಉಪಾಧ್ಯಕ್ಷೆ ಶಿವಲಿಂಗಮ್ಮ, ವಿಜಯನಗರ ತಾಲೂಕು ಅಧ್ಯಕ್ಷ ಹನುಮಂತಪ್ಪ, ತಿಪಟೂರು ತಾಲ್ಲೂಕು ಅಧ್ಯಕ್ಷ ನಿಜಲಿಂಗಪ್ಪ, ಎಂ. ಪುಟ್ಟಲಿಂಗಪ್ಪ, ಆರ್ಟ್‌ಸನ್ಸ್ ಪ್ರಕಾಶ್, ಓಂಕಾರಪ್ಪ, ಕುಶಾಲಪ್ಪ, ಟಿ. ಪರಮೇಶ್, ಶಿಕ್ಷಕರಾದ ನಾಗರಾಜು, ರುದ್ರಮುನಿಯಪ್ಪ, ಕೆಂಚವೀರನಹಳ್ಳಿ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಮೊದಲಾದವರು ಇದ್ದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















