ಕಲ್ಪ ಮೀಡಿಯಾ ಹೌಸ್
ಸೊರಬ: ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆ, ಕರ್ತವ್ಯ ಹೀನತೆಯಿಂದಾಗಿ ಬೆಳೆದ ಪೈರು ಕೊಚ್ಚಿ ಹೋಗಿರುವ ಜೊತೆಗೆ, ಮನೆಯೂ ಬಿರುಕು ಬಿಟ್ಟು ಶಿಥಿಲಗೊಂಡಿದೆ. ಗೋಡೆಗಳು ಕುಸಿದಿವೆ ಎಂದು ತಾಲ್ಲೂಕು ಕುಪ್ಪಗಡ್ಡೆ ಹೋಬಳಿ ತುಡ್ನೂರು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಪ್ರಸಕ್ತ ಸಾಲಿನ ಭಾರೀ ಮಳೆಗೆ ಇಲ್ಲಿನ ಆಲಳ್ಳಿ ಕೆರೆ ಚಾನಲ್ ಒಡೆದು 20 ಎಕರೆಗೂ ಹೆಚ್ಚು ಬೆಳೆಪ್ರದೇಶದಲ್ಲಿನ ಬೆಳೆ ಕೊಚ್ಚಿಹೋಗಿದೆ, ನಾಲ್ಕಾರು ದಿನ ನೀರು ನಿಂತು ಅಳೀದುಳಿದ ಬೆಳೆಯೂ ಹಾಳಾಗಿದೆ. ಸಾಲದೆಂಬಂತೆ ಚಾನಲ್ ಅಂಚಿನ ಕೆಲ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗೋಡೆ ಕುಸಿತಗೊಂಡಿದೆ. ಇಷ್ಟೆಲ್ಲ ಅವಾಂತರ ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಆಗಮಿಸಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು, ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.
ಬೆಳೆಯೂ ಹೋಯ್ತು, ಇತ್ತ ಮನೆಯೂ ಶಿಥಿಲಗೊಂಡಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ಇಲ್ಲಿನ ಮಹಿಳೆಯರು ಆತಂಕಗೊಂಡಿದ್ದು, ತುರ್ತು ಕ್ರಮಕ್ಕೆ ಈಗಲಾದರೂ ಮುಂದಾಗಿ ಇಲ್ಲದಿದ್ದರೆ ಶಾಸಕರ ಕಚೇರಿ, ತಾಪಂ ಕಚೇರಿ ಮತ್ತು ತಾಲ್ಲೂಕು ಕಚೇರಿ ಎದುರು ನಿರಶನ ಹೂಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸ್ಥಳಕ್ಕೆ ರೈತ ಸಮಾಜದ ಮಾಜಿ ಅಧ್ಯಕ್ಷ ಸೋಮಶೇಖರಯ್ಯ ಸುತ್ತೂರು ಮಠ ಭೇಟಿ ನೀಡಿ ವೀಕ್ಷಿಸಿದ್ದು, ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಸಂಬಳಕ್ಕಾಗಿ ಮಾತ್ರ ಕಚೇರಿಯಲ್ಲಿ ಕೂರುವ ಇಂತಹ ಅಧಿಕಾರಿಗಳಿಂದಾಗಿ ಅನ್ನ ನೀಡುವ ರೈತನ ಪಾಡು ತೀರಶೋಚನೀಯವಾಗಿದೆ.
ಸಾಮಾಜಿಕ ನ್ಯಾಯ ಎಂಬುದು ಸಂಪೂರ್ಣ ಸತ್ತುಹೋಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸ್ಥಿತಿ ಗಮನಿಸಿ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ನಡೆಸಬೇಕು. ತಾಲ್ಲೂಕು ಶಾಸಕರು ಸ್ಥಳಕ್ಕೆ ಆಗಮಿಸಿ ನೊಂದವರಿಗೆ ಮನೋಸ್ಥೈರ್ಯ ತುಂಬಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post