ಬೆಂಗಳೂರು, ಅ.9: ಮಂತ್ರಿಮಂಡಲದಿಂದ ತಮ್ಮನ್ನು ಹೊರಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸಚಿವ, ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ದಸರಾ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಕಳೆದ ಸೆಪ್ಟೆಂಬರ್ ಮೊದಲ ವಾರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಅವರು ನಿರ್ಧರಿಸಿದ್ದರಾದರೂ ಕಾವೇರಿ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಮುಂದೂಡಿದ್ದರು.
ಈಗ ದಸರಾ ಮಹೋತ್ಸವ ಕಳೆದ ನಂತರ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಖುದ್ದಾಗಿ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಕಾವೇರಿ ವಿವಾದ ಇದೀಗ ಕೊಂಚ ತಣ್ಣಗಾಗಿದೆ. ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಶ್ರೀನಿವಾಸ ಪ್ರಸಾದ್ ಅವರು ಕೂಡ ತಮ್ಮ ಹೊಸ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಅವರ ಮುಂದಿನ ನಡೆ ನಿಗೂಢವಾಗಿದೆಯಾದರೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶ್ರೀನಿವಾಸ ಪ್ರಸಾದ್ ಅವರ ಸಂಪರ್ಕದಲ್ಲಿದ್ದಾರೆ.
ಈಗಾಗಲೇ ಜೆಡಿಎಸ್ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ಅವರು ಶ್ರೀನಿವಾಸ ಪ್ರಸಾದ್ ಅವರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿ ತಮ್ಮ ಪಕ್ಷಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಅವರು ಶ್ರೀನಿವಾಸ ಪ್ರಸಾದ್ ಅವರ ಜತೆ ಮಾತುಕತೆ ನಡೆಸಿ ತಮ್ಮ ಪಕ್ಷಕ್ಕೆ ಬರುವಂತೆ ಒತ್ತಡ ಹೇರುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಶ್ರೀನಿವಾಸ ಪ್ರಸಾದ್ ಅವರನ್ನು ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅವರು ಯಾವುದೇ ಪಕ್ಷಕ್ಕೆ ಹೋದರೂ ಹಳೆ ಮೈಸೂರು ಭಾಗದಲ್ಲಿ ಆ ಪಕ್ಷಕ್ಕೆ ಲಾಭವಾಗುವುದು ನಿಶ್ಚಿತವಾಗಿದ್ದು, ಇದೇ ಕಾರಣಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಶ್ರೀನಿವಾಸ ಪ್ರಸಾದ್ ಅವರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಸಿದ್ದರಾಮಯ್ಯನವರು ತಮ್ಮನ್ನು ರಾಜಕೀಯವಾಗಿ ಬಳಸಿಕೊಂಡು ಲಾಭ ಮಾಡಿಕೊಂಡಿದ್ದಲ್ಲದೆ, ಮುಖ್ಯಮಂತ್ರಿಯಾದ ನಂತರ ನಿರಂತರವಾಗಿ ತಮ್ಮನ್ನು ತುಳಿಯುವ ಯತ್ನ ನಡೆಸಿದರು ಎಂದು ಶ್ರೀನಿವಾಸ ಪ್ರಸಾದ್ ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಂತೆ, ಪಕ್ಷ ತೊರೆಯದಂತೆ ಶ್ರೀನಿವಾಸ ಪ್ರಸಾದ್ ಅವರನ್ನು ಕಾಂಗ್ರೆಸ್ನ ಹಲವು ಹಿರಿಯ ಮುಖಂಡರು ಕೋರಿಕೊಂಡಿದ್ದರಾದರೂ ಪ್ರಸಾದ್ ಅವರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.
ಮಂತ್ರಿ ಸ್ಥಾನದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದರೂ ತಮ್ಮನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿದ ಸಿಎಂ ಸಿದ್ದರಾಮಯ್ಯನವರ ನಿರ್ಧಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವುದು ನಮ್ಮ ಗುರಿ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.















