ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ರಾಜ್ಯದ 750 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಉದ್ದೇಶಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಗೊಂಡು 32ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಗ್ರಾಮಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಯ್ಕೆಯಾಗಿರುವ ಈ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳು, ಪ್ರತಿ ಮನೆಗೆ ಕುಡಿಯುನ ನೀರಿನ ಸರಬರಾಜು, ಶೇ. 100ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾಗಿ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಈ ಯೋಜನೆಯಡಿ ಒತ್ತು ನೀಡಲಾಗುವುದು ಎಂದರು.
ಅಲ್ಲದೇ ಅಮೃತ ಉದ್ಯಾನವನ, ಗ್ರಾಮೀಣ ಗ್ರಂಥಾಲಯಗಳ ಡಿಜಿಟಲೀಕರಣ, ಅಂಗನವಾಡಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನ ಹಾಗೂ ಗೋಡೆಗಳ ನಿರ್ಮಾಣ, ಕೆರೆ/ಕಲ್ಯಾಣಿಗಳ ಪುನಶ್ಚೇತನ ಹಾಗೂ ಗ್ರಾಮಗಳಲ್ಲಿ ಅಗತ್ಯವಿರುವ ಇತರೆ ಯೋಜನೆಗಳನ್ನು ಕೈಗೊಳ್ಳಲಾಗುವುದು. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, 15ನೇ ಹಣಕಾಸು, ನರೇಗಾ, ಗ್ರಾಮ ಪಂಚಾಯಿತಿಗಳ ಸ್ವಂತ ಅನುದಾನ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಶಾಲಾ ಕಟ್ಟಡದ ಅನುದಾನಗಳನ್ನು ಒಗ್ಗೂಡಿಸುವ ಮೂಲಕ ತಲಾ ರೂ.25ಲಕ್ಷ ಗಳ ಅನಿರ್ಬಂಧಿತ ಅನುದಾನ ಒದಗಿಸಲಿದೆ ಎಂದರು.
ಈ ಹಿಂದೆ ಕೈಗೊಂಡಿರುವ ಕುಡಿಯುವ ನೀರಿನ ಕೆಲವು ಯೋಜನೆಗಳಲ್ಲಿ ಅಳವಡಿಸಲಾಗಿರುವ ಕೊಳವೆಗಳು ಜಖಂ ಆಗಿ ನೀರು ಸರಬರಾಜಾಗದಿರುವ ಬಗ್ಗೆ ದೂರುಗಳಿವೆ. ಆಧ್ದರಿಂದ ಅಧಿಕಾರಿಗಳು ಗುಣಮಟ್ಟದ ಕೊಳವೆ ಅಳವಡಿಸುವಂತೆ ನೋಡಿಕೊಳ್ಳಬೇಕು. ಸರ್ಕಾರವು ನಿಗಧಿಪಡಿಸಿರುವ ಮಾನದಂಡದಂತೆ ಕಾಮಗಾರಿಗಳು ನಡೆಯಬೇಕು. ಸಾಧ್ಯವಾಗದಿರುವ ಗುತ್ತಿಗೆದಾರರು ಕಾರ್ಯದಿಂದ ಹಿಂದಿರುಗಬಹುದಾಗಿದೆ ಎಂದರು.
ಅನೇಕ ಕಾರಣಗಳಿಂದಾಗಿ ಗುತ್ತಿಗೆದಾರರು ಕಾರ್ಯಾದೇಶ ಪಡೆದಿರುವ ಕಾಮಗಾರಿಗಳಿಂದ ದೂರ ಸರಿಯುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅಲ್ಲದೇ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಕೆಲವು ಕಾಮಗಾರಿಗಳ ಪ್ರಗತಿ ಆಶಾದಾಯಕವಾಗಿಲ್ಲ. ಕಾರ್ಯಾದೇಶ ಪಡೆದ ನಂತ ಕಾಮಗಾರಿ ಕೈಗೆತ್ತಿಕೊಂಡಿರುವ ಹಾಗೂ ಆಸಕ್ತಿ ತೋರದಿರುವ ಗುತ್ತಿಗೆದಾರರನ್ನು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು ಸೇರಿದಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೈಗೊಂಡ ಯೋಜನೆಗಳನ್ನು ಗುತ್ತಿಗೆದಾರರು ನವೆಂಬರ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಬಿಡುಗಡೆಗೊಂಡಿರುವ ಅನುದಾನವು ಸಕಾಲದಲ್ಲಿ ಸದ್ಭಳಕೆಯಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಜಲದ ಮೂಲ ಇರುವೆಡೆಗಳಲ್ಲಿ ಸಮೀಪದ ಗ್ರಾಮಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಕಾರ್ಯಾರಂಭಕ್ಕೆ ಮುಂದಾಗಬೇಕು. ವಿವೇಚನೆ ರಹಿತವಾಗಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾದಲ್ಲಿ ಅಂತಹ ಯೋಜನೆಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಯೋಜನೆಯ ಅನುಷ್ಠಾನದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಇತ್ಯರ್ಥಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಅಗತ್ಯ ಸಲಹೆ ಪಡೆದುಕೊಳ್ಳಬೇಕು. ಈ ಕಾಮಗಾರಿಗಳಿಗೆ ಶೇ.10ರಷ್ಟು ಅನುದಾನವನ್ನು ಸ್ಥಳೀಯವಾಗಿ ಕ್ರೋಢೀಕರಿಸಬೇಕು. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಆರ್ಥಿಕ ಕ್ರೋಢೀಕರಣಕ್ಕೆ ಮುಂದಾಗಬೇಕು. ಬಹುಗ್ರಾಮ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಈ ಕಾಮಗಾರಿಗಳ ಉಸ್ತುವಾರಿಗಾಗಿ ಕೊರತೆ ಇರುವ ವಿಷಯ ಗಮನಕ್ಕೆ ಬಂದಿದೆ. ಆದರೆ ಸಿಬ್ಬಂಧಿಗಳ ನೇಮಕಾತಿ ಪ್ರಕ್ರಿಯೆ ಸದ್ಯಕ್ಕಿಲ್ಲ. ಇಲಾಖೆಯಿಂದ ಅನ್ಯ ಇಲಾಖೆಗೆ ಹೋಗಿ ಎರವಲು ಸೇವೆ ಮಾಡುತ್ತಿರುವ ಇಂಜಿನಿಯರುಗಳನ್ನು ಹಿಂದಕ್ಕೆ ಕರೆದುಕೊಂಡು ಕುಡಿಯುವ ನೀರಿನ ಕಾಮಗಾರಿಗಳ ಉಸ್ತುವಾರಿಗೆ ನಿಯೋಜಿಸಲಾಗುವುದು ಎಂದರು.
ಸಬೆಯಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳಲಾಗುವ ಅಭಿವೃಧ್ಧಿ ಕಾಮಗಾರಿಗಳಿಗಾಗಿ ಈಗಾಗಲೇ ನಿರ್ಮಿಸಲಾಗಿರುವ ಕಾಂಕ್ರೀಟ್ ಚರಂಡಿ ಹಾಗೂ ರಸ್ತೆಗಳನ್ನು ಹಾನಿಗೊಳಿಸಿದಲ್ಲಿ ಅಂತಹ ಸ್ಥಳಗಳನ್ನು ಮೊದಲಿನಂತೆ ಸುಸ್ಥಿತಿಯಲ್ಲಿರುವಂತೆ ಗುತ್ತಿಗೆದಾರರು ಕಾರ್ಯನಿರ್ವಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಆಯನೂರು ಮಂಜುನಾಥ್, ಶಾಸಕ ಕುಮಾರ್ ಬಂಗಾರಪ್ಪ, ಕೆ.ಬಿ. ಅಶೋಕನಾಯ್ಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಸೇರಿದಂತೆ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಗುತ್ತಿಗೆದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post