ಶ್ರೀನಗರ, ಅ.12: ಜಮ್ಮು ಕಾಶ್ಮೀರದ ಪ್ಯಾಂಪೋರ್‌ನ ಹೊರವಲಯದ ಸರ್ಕಾರಿ ಕಚೇರಿ ಮೇಲೆ ದಾಳಿ ಮಾಡಿರುವ ಉಗ್ರರ ಪೈಕಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನಾಪಡೆಗಳು ಯಶಸ್ವಿಯಾಗಿವೆ. ಇದೇ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ.
ಸೋಮವಾರದಿಂದ ೫೦ ಗಂಟೆಗಳಿಗೂ ಹೆಚ್ಚು ಸಮಯದಿಂದ ಗುಂಡಿನ ಚಕಮಕಿ ನಡೆಯುತ್ತಿದ್ದು, ಭದ್ರತಾ ಪಡೆಗಳು ವಾಣಿಜ್ಯೋಧ್ಯಮ ಸಂಸ್ಥೆಯ ಕಟ್ಟಡದೊಳಗೆ ಅವಿತಿದ್ದ ಒಟ್ಟು ಮೂವರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ. ಕಟ್ಟಡದ ಹೆಚ್ಚಿನ ಗೋಡೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಗುಂಡಿನ ಚಕಮಕಿಯ ವೇಳೆ ಇಬ್ಬರು ಯೋಧರು, ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.
ಉಗ್ರರು ಅವಿತಿರುವ ಸರ್ಕಾರಿ ಕಟ್ಟಡವನ್ನು ನಾಲ್ಕೂ ಮೂಲೆಯಿಂದ ಸುತ್ತುವರೆದಿರುವ ಭಾರತೀಯ ಸೈನಿಕರು ಯಾವುದೇ ಕಾರಣಕ್ಕೂ ಉಗ್ರರು ತಪ್ಪಿಸಿಕೊಳ್ಳದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಒಂದು ವೇಳೆ ಉಗ್ರರು ಹೊರಗೆ ಬಂದರೆ ಕೂಡಲೇ ಅವರನ್ನು ಹತ್ಯೆಗೈಯಲು ಸಿದ್ಧರಾಗಿ ನಿಂತಿದ್ದಾರೆ. ಅದರಂತೆ ಇಂದು ಬೆಳಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವ ಉಗ್ರನನ್ನು ಭದ್ರತಾಪಡೆಯ ಸಿಬ್ಬಂದಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಪ್ಯಾರಾ ಮಿಲಿಟರಿ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು, ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇದೇ ವೇಳೆ ಉಗ್ರರು ತಂದಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಕುರಿತೂ ಮಾಹಿತಿ ಲಭ್ಯವಾಗಿದ್ದು, ತುಂಬಾ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳಿ ತಿಳಿಸಿವೆ.
ಪಾಕ್ ಹಾಗೂ ಐಎಸ್‌ಐಎಸ್ ನಡುವೆ ವ್ಯತ್ಯಾಸವಿಲ್ಲ
ನವದೆಹಲಿ: ಉಗ್ರ ಬುರ್ಹಾನ್ ವನಿಯೊಬ್ಬ ಹೋರಾಟಗಾರ, ಯುವ ನಾಯಕ ಎಂಬ ಪಾಕಿಸ್ಥಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಪ್ರಶಂಸೆಯ ಮಾತುಗಳನ್ನು ಕೇಳಿದರೆ, ಅವರೂ ಕೂಡ ಐಎಸ್‌ಐಎಸ್ ಸಂಘಟನೆ ಸೇರಿದಂತಿದೆ ಎಂದು ಮಾಜಿ ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಭುಪತ್ರೇ ಶಶಾಂಕ್ ಅವರು ಇಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಗ್ರ ಬುರ್ಹಾನ್ ವಾನಿಯನ್ನು ಶರೀಫ್ ಕೊಂಡಾಡಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬುರ್ಹಾನ್ ವನಿಯನ್ನು ಷರೀಫ್ ಪ್ರಶಂಸಿಸಿರುವುದನ್ನು ನೋಡಿದರೆ, ಷರೀಫ್ ಅವರು ಐಎಸ್‌ಐಎಸ್ ಸಂಘಟನೆ ಸೇರಿರಬೇಕು ಅಥವಾ ಇಸ್ಲಾಮಿಕ್ ಸ್ಟೇಟ್ ಮತ್ತು ಕಾಶ್ಮೀರ, ಪಾಕಿಸ್ಥಾನದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿದಿರಬೇಕು ಎಂದು ಹೇಳಿದ್ದಾರೆ.
ಭಯೋತ್ಪಾದನೆ ಕುರಿತಂತೆ ಮೊದಲು ಷರೀಫ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಪಾಕಿಸ್ಥಾನ, ಭಾರತ ಮತ್ತು ಕಾಶ್ಮೀರ ಕುರಿತಂತೆ ಅವರು ಯಾವ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದಾರೆ? ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಲ್ಲಿ ಇವರೂ ಭಾಗಿಯಾಗಿದ್ದಾರೆಯೇ? ಉಗ್ರ ಬುರ್ಹಾನ್ ವನಿಯನ್ನು ಹೀರೋ ಎಂದು ಷರೀಫ್ ಕರೆದಿದ್ದಾರೆಂದರೆ ಆತ ಪಾಕಿಸ್ಥಾನದ ಹೀರೋ ಎಂಬ ಅರ್ಥವೇ ಬರುತ್ತದೆ. ಪಾಕಿಸ್ಥಾನ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿದೆ. ವನಿ ಕೂಡ ಭಾರತವನ್ನು ಇಸ್ಲಾಮಿಕ್ ಸ್ಟೇಟ್‌ನ ಭಾಗ ಮಾಡಬೇಕೆಂದು ಬಯಸಿದ್ದ. ಮೊದಲು ಷರೀಫ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ ಭಾರತೀಯರು ಷರೀಫ್ ಅವರಿಗೆ ದಿಟ್ಟ ಉತ್ತರ ನೀಡಲಿದ್ದಾರೆಂದು ತಿಳಿಸಿದ್ದಾರೆ.














