Read - < 1 minute
ಮಧುರೈ, ಅ.12: ತಮಿಳುನಾಡಿನ ಮದುರೈನಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯ ಮೇಲೆ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ, ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ನಡೆದಿದೆ.
ಮಧುರೈನಿಂದ ಸುಮಾರು 80 ಕಿಮೀ ದೂರದಲ್ಲಿರುವ ಸತ್ತೂರು ಪಟ್ಟಣದ ಬಳಿ ಈ ದಾಳಿ ನಡೆದಿದ್ದು, ತಮಿಳುನಾಡು ಸಾರಿಗೆ ಇಲಾಖೆಗೆ ಸೇರಿದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ತಮಿಳುನಾಡಿನ ಕೋವಿಲ್ ಪಟ್ಟಿಯ ಕರುಪ್ಪಸಾಮಿ ಎಂದು ಗುರುತಿಸಲಾಗಿದೆ. ಗುಂಡೇಟಿಗೆ ಬಲಿಯಾದ ವ್ಯಕ್ತಿ ಬಸ್ಸು ಹತ್ತುವಾಗಲೇ ಆತನನ್ನು ಹಿಂಬಾಲಿಸಿಕೊಂಡು ಹಂತಕರೂ ಬಸ್ಸು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಮಧುರೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discussion about this post