ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ದಸರಾ ಚಲನಚಿತ್ರೋತ್ಸವದಲ್ಲಿ ಅ.16ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರದ ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಕೃಷ್ಣ ಟಾಕೀಸ್ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಈ ಸಿನಿಮಾದ ವಿಶೇಷವೆಂದರೆ ಶಿವಮೊಗ್ಗೆಯ ಮೂವರು ರಂಗಭೂಮಿ ಕಲಾವಿದರಾದ ವೈದ್ಯ, ಶಿವಮೊಗ್ಗ ರಾಮಣ್ಣ ಹಾಗೂ ವಿಜಯಲಕ್ಷ್ಮಿ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಬಾಲ್ಕನಿ ಸೀಟ್ ನಂ. 13 ಎಂಬ ಅಡಿ ಬರಹ ಕೂಡಾ ಇದೆ. ಅಜಯ್ ರಾವ್ ಈ ಸಿನಿಮಾದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿರುವುದು ಗಮನಾರ್ಹ.
ವಿಜಯಾನಂದ್‌ರವರು ಕೃಷ್ಣ ಟಾಕೀಸ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ಕಾಶಿನಾಥ್ ಮುಖ್ಯಭೂಮಿಕೆಯ ಓಳ್ ಮುನ್ಸಾಮಿ ಚಿತ್ರವನ್ನು ನಿರ್ದೇಶಿಸಿದ್ದರು. ನಿರ್ಮಾಪಕ – ನಟ ಗೋವಿಂದ್‌ರಾಜ್ ಆಲೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿನ ಮೂರು ಹಾಡುಗಳಿದ್ದು, ಅವುಗಳಿಗೆ ಪ್ರಮೋದ್ ಹಾಗೂ ಆನಂದ ಪ್ರಿಯರವರ ಸಾಹಿತ್ಯವಿದೆ.
ಅಭಿಷೇಕ ಕಾಸರಗೋಡುರವರ ಛಾಯಾಗ್ರಹಣವಿರುವ ಈ ಚಿತ್ರದ ನಾಯಕಿಯರಾಗಿ ಅಪೂರ್ವ – ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಚಿಕ್ಕಣ್ಣ , ಯಶ್ ಶೆಟ್ಟಿ , ಶಿವಮೊಗ್ಗ ವೈದ್ಯ, ಪ್ರಮೋದ್ ಶೆಟ್ಟಿ, ಶಿವಮೊಗ್ಗ ರಾಮಣ್ಣ, ಶ್ರೀನಿವಾಸ ಪ್ರಭು, ವಿಜಯಲಕ್ಷ್ಮಿಮೊದಲಾದವರ ಅಭಿನಯವಿದೆ. ಉಚಿತ ಪ್ರವೇಶವಿರುವ ಈ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post