Read - 2 minutes
ಶಿವಮೊಗ್ಗ: ನಗರದಲ್ಲಿ ಈಗ ಸೈಟ್, ಹೊಸ ಮನೆ ಖರೀದಿ ಕೇಳುವವರೇ ಇಲ್ಲ. ಸಾಕಷ್ಟು ಇಂತಹ ಮನೆ, ಸೈಟ್ ಮಾರಾಟಕ್ಕಿದೆ ಎಂದು ಕಂಡಕಂಡಲ್ಲೆಲ್ಲ ಬೋರ್ಡು, ಜಾಹೀರಾತು ಹಾಕಿದ್ದರೂ ಅದರತ್ತ ಗ್ರಾಹಕರು ಸುಳಿಯುತ್ತಿಲ್ಲ. ಒಂದರ್ಥದಲ್ಲಿ ರಿಯಲ್ ಎಸ್ಟೇಟ್ ದಂಧೆ ತೀವ್ರ ಇಳಿಮುಖದಲ್ಲಿದೆ ಎಂದೇ ಹೇಳಬಹುದು.
ಇದಕ್ಕೆ ಕಾರಣವಿಷ್ಟೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೊಲಗಳನ್ನೆಲ್ಲ ಕೃಷಿ ಉದ್ದೇಶದಿಂದ ಕೈಬಿಡಲಾಗಿದೆ. ಭಾರೀ ಲಾಭದಾಸೆಗೆ ದೊಡ್ಡ ಸಂಖ್ಯೆಯಲ್ಲಿ ಲೇಔಟ್‌ಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ನಗರದಿಂದ ಹತ್ತಿಪ್ಪತು ಕಿಮೀ ಒಳಗೆ ಸಾವಿರಾರು ನಿವೇಶನಗಳು ಮಾರಾಟಕ್ಕಿವೆ. ಯಾವಾಗ ರೈತರಿಗೆ ಕೃಷಿ ದುಬಾರಿ ಎನಿಸಲಾರಂಭಿಸಿತೋ, ಅದೇ ವೇಳೆ ನಗರದಲ್ಲಿ ಭೂಮಿಗೆ ಬಂಗಾರದ ಬೆಲೆಯೂ ಇತ್ತು. ಆದರೆ ಇದೇ ದರ ನಿಲ್ಲುವುದಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳದ ಕೆಲವು ಭೂ ದಂಧೆಕೋರರು ಕಂಡಲ್ಲೆಲ್ಲ ಹೊಲ ಖರೀದಿಸಿ ಲೇ ಔಟ್ ರಚಿಸಿ ನಿವೇಶನ ಮಾಡಿದರು. ಎಷ್ಟೋ ಜನರು, ಕೆಲವು ರಾಜಕೀಯ ಪುಢಾರಿಗಳು ಇದನ್ನೇ ದಂಧೆಯನ್ನಾಗಿಸಿಕೊಂಡರು. ಆದರೆ, ಇವರ ನಸೀಬು ಕೆಟ್ಟಿತ್ತು. ಅಷ್ಟರೊಳಗೆ ದರ ಕುಸಿಯಿತು. ಲೇಔಟ್‌ನ ನಿವೇಶನಗಳೆಲ್ಲ ಹಾಗೆಯೇ ಉಳಿದುಕೊಂಡವು.
ಸದ್ಯ ಖರೀದಿ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಕೆಲವು ಗೃಹ ನಿರ್ಮಾಣ ಸಹಕಾರ ಸಂಘಗಳು, ನೌಕರರ ಸಂಘಗಳು ಬಡಾವಣೆ ರಚನೆ ಮಾಡಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿವೆ. ಇದೂ ಸಹ ಖಾಸಗಿ ನಿವೇಶನಗಳ ಬೇಡಿಕೆ ಇಳಿಕೆಯಾಗಲು ಪ್ರಮುಖ ಕಾರಣ. ಏಕೆಂದರೆ ಬಹುತೇಕವಾಗಿ ನೌಕರರು ಮತ್ತು ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗುತ್ತಿದ್ದರು. ಉಳಿದಂತೆ ಸ್ಥಳೀಯ ಜಮೀನ್ದಾರರೂ, ಹಣವಂತರೂ ಸಾಕಷ್ಟಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗ ನಗರ ಸ್ಥಾನ ಪಡೆದುಕೊಳ್ಳುತ್ತಿದ್ದಂತೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿಯೇ ಹೊಸ ಹೊಸ ಬಡಾವಣೆಗಳ ರಚನೆ ಪ್ರಕ್ರಿಯೆ ಕೂಡ ನಗರದಲ್ಲಿ ಆರಂಭವಾಗಿತ್ತು. ನಾಗರಿಕ ವಲಯದಿಂದಲೂ ನಿವೇಶನ ಖರೀದಿಗೆ ಬೇಡಿಕೆ ಕಂಡುಬಂದಿತ್ತು.
ಆದರೆ ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ ಗಮನಿಸಿದರೆ ಈ ಹಿಂದಿದ್ದ ಉತ್ಸಾಹ ಮಾಯವಾಗಿದೆ. ಮತ್ತೊಂದೆಡೆ, ಏಕಾಏಕಿ ನಾಗರಿಕ ವಲಯದಿಂದಲೂ ನಿವೇಶನಗಳ ಬೇಡಿಕೆ ಕಡಿಮೆಯಾಗತೊಡಗಿದೆ. ನಗರದ ಸುತ್ತಮುತ್ತಲು ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಲು ಪೈಪೋಟಿ ನಡೆಸುತ್ತಿದ್ದ ಹೊರ ಊರಿನ ಹೂಡಿಕೆದಾರರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಪ್ರಕ್ರಿಯೆಗೆ ಆಯ್ಕೆಯಾದರೂ ರಿಯಲ್ ಎಸ್ಟೇಟ್ ವಲಯದಲ್ಲಿ ಈ ಹಿಂದೆ ಕಂಡುಬಂದಿದ್ದ ಉತ್ಸಾಹದ ವಾತಾವರಣ ಕಂಡುಬರುತ್ತಿಲ್ಲ. ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಸ್ಮಾರ್ಟ್ ಸಿಟಿಗೆ ಆಯ್ಕೆಯಾದರೆ ನಿವೇಶನ-ಮನೆಗಳ ದರದಲ್ಲಿ ಏರಿಕೆಯಾಗಲಿದೆ ಎಂಬ ಮಧ್ಯಮ ವರ್ಗದವರಲ್ಲಿ ಮನೆ ಮಾಡಿದ್ದ ನಿರೀಕ್ಷೆ-ಆತಂಕಗಳು ಕೂಡ ತಲೆಕೆಳಗಾಗುವಂತೆ ಮಾಡಿದೆ.
ಗಗನಮುಖಿಯಾಗಿದ್ದು ಹೀಗೆ
ಕಳೆದ ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೇಳಿಕೊಳ್ಳುವಂತಹ ಮಟ್ಟದಲ್ಲಿರಲಿಲ್ಲ. ನಿವೇಶನ-ಮನೆಗಳಿಗೆ ಹೇಳಿಕೊಳ್ಳುವಂತಹ ಮೌಲ್ಯವೂ ಇರಲಿಲ್ಲ. ಆದರೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಉದ್ಯಮದಲ್ಲಿ ಚೇತರಿಕೆ ಕಾಣಲಾರಂಭಿಸಿತು. ಬಿಜೆಪಿ ಸರ್ಕಾರದ ಅವಧಿಯಲ್ಲಂತೂ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ದಿಢೀರ್ ಆಗಿ ನಿವೇಶನ-ಮನೆಗಳ ಬೆಲೆಯಲ್ಲಿ ಏರಿಕೆ ಕಾಣಲಾರಂಭಿಸಿತು. ಅಕ್ಷರಶಃ ರಿಯಲ್ ಎಸ್ಟೇಟ್ ರೇಟು ಗಗನಮುಖಿಯಾಗಿ ಏರಲಾರಂಭಿಸಿತು. ಹೊರ ಜಿಲ್ಲೆ, ರಾಜ್ಯ, ವಿದೇಶದವರೂ ನಗರದಲ್ಲಿ ನಿವೇಶನ-ಮನೆ-ಆಸ್ತಿಯ ಮೇಲೆ ಬಂಡವಾಳ ಹೂಡಿಕೆ ಮಾಡಲಾರಂಭಿಸಿದರು. ನಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗಲಾರಂಭಿಸಿದವು.
ಫಲವತ್ತಾದ ಬತ್ತದ ಗದ್ದೆ, ತೋಟಗಳು ಕೂಡ ಲೇಔಟ್‌ಗಳಾಗಿ ಪರಿವರ್ತಿತವಾಗಲಾರಂಭಿಸಿದವು. ಬೆಂಗಳೂರು, ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ನಗರದಲ್ಲಿ ಲೇಔಟ್, ಫ್ಲ್ಯಾಟ್‌ಗಳ ನಿರ್ಮಾಣ ಮಾಡಲಾರಂಭಿಸಿದರು. ಮಧ್ಯಮ-ಬಡ ವರ್ಗದವರು ಸ್ವಂತ ನಿವೇಶನ-ಮನೆ ಖರೀದಿಸುವುದು ಕನಸಿನ ಮಾತಾಗಿ ಪರಿಣಮಿಸಿತು. ಆ ಮಟ್ಟಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಬೆಳೆದು ನಿಂತಿತ್ತು.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಿದ್ದಂತೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆ ಇಳಿಮುಖವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಚಟುವಟಿಕೆ ಮಾತ್ರ ಇಳಿಕೆಯಾಗಿರಲಿಲ್ಲ. ನಿವೇಶನಗಳ ಬೆಲೆಯಲ್ಲಿಯೂ ತಗ್ಗಿರಲಿಲ್ಲ. ಹೊಸ ಹೊಸ ಬಡಾವಣೆ ರಚನೆ ಪ್ರಕ್ರಿಯೆ ವೇಗ ಈ ಹಿಂದಿನಂತೆಯೇ ಮುಂದುವರಿದಿತ್ತು.
ಈ ನಡುವೆ ನಗರವೂ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ವೇಗ ದೊರಕುವ ಲಕ್ಷಣಗಳು ಗೋಚರವಾಗಿದ್ದವು. ಕೆಲವು ಲೇಔಟ್ ಮಾಲಕರು ‘ಸ್ಮಾರ್ಟ್ ಸಿಟಿ’ಯಲ್ಲಿ ನಿವೇಶನ-ಮನೆ ನಿಮ್ಮದಾಗಿಸಿಕೊಳ್ಳಿ ಎಂಬ ರೀತಿಯಲ್ಲಿ ಪ್ರಚಾರ ಕೂಡ ನಡೆಸಿದರು. ಆದರೆ ಈಗ ಖರೀದಿಸುವವರು ಇಲ್ಲದೆ ಉದ್ಯಮ ಇಳಿಜಾರಿನಲ್ಲಿದೆ. ಎಷ್ಟೋ ಹಣವಂತರು, ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ಕಟ್ಟಿದ್ದರೂ ಅವು ಸಹ ಖಾಲಿ ಹೊಡೆಯುತ್ತಿವೆ. ನಗರದಲ್ಲಿ ಕರಾವಳಿ ಪ್ರದೇಶ ಅಥವಾ ಮೆಟ್ರೋ ಸಿಟಿಗಳಂತೆ ಅಪಾರ್ಟ್‌ಮೆಂಟ್ ದಂಧೆಯೂ ನಡೆಯುತ್ತಿಲ್ಲ. ಇದರಿಂದ ಬಿಲ್ಡರ್‌ಗಳು ಹೊಸ ಚಿಂತನೆ ಮಾಡುವಂತಾಗಿದೆ. ಸದ್ಯದ ಮಟ್ಟಿಗೆ ಭೂ ವಹಿವಾಟು ಅದರ ವ್ಯಾಪಾರಸ್ಥರಿಗೆ ಲಾಭವನ್ನು ತಂದುಕೊಡದ ಸ್ಥಿತಿಯಲ್ಲಿದೆ.
ಹಿಂದಿನ ವರ್ಷಗಳಲ್ಲಿ ನಗರ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಡಾವಣೆ ರಚನೆಗೆ ಅನುಮತಿ ಕೋರಿ ಆಗಮಿಸುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಹಾಗೆಯೇ ಜಮೀನುಗಳ ಭೂ ಪರಿವರ್ತನೆ ಮಾಡಿಸುವ ಪ್ರಕ್ರಿಯೆ ಕೂಡ ಏರುಗತಿಯಲ್ಲಿತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಹೊಸ ಬಡಾವಣೆ ರಚನೆ ಪ್ರಕ್ರಿಯೆಗಳು ಕಡಿಮೆಯಾಗಿವೆ.
ಹೊಸದಾಗಿ ಬಡಾವಣೆ ರಚನೆ ಮಾಡುವವರಿಗೆ ಈ ಹಿಂದೆ ಹಂತಹಂತವಾಗಿ ನಿವೇಶನ ನೊಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಪ್ರಸ್ತುತ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಲೇಔಟ್‌ಗಳ ರಚನೆ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡು, ನಿಯಮಾನುಸಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದ ನಂತರವಷ್ಟೇ ಏಕಕಾಲಕ್ಕೆ ನಿವೇಶನ ನೊಂದಣಿ-ಪರಭಾರೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ .
– ಸ್ಬುಡಾ ಆಯುಕ್ತ ಮೂಕಪ್ಪ ಕರಭೀಮಣ್ಣವರ್
Discussion about this post