- ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಇಂದು ಬೆಳಗಿನ ಜಾವ ಒಂದು ಗಂಟೆಯ ಅವಧಿಯಲ್ಲೇ ಮೂರು ಕಡೆ ದರೋಡೆ ನಡೆಸಿರುವ ಪ್ರಕರಣಗಳು ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.


ಘಟನೆ 1:
ಬಳ್ಳಾರಿಯಿಂದ ಆಗಮಿಸಿದ ಬಸ್‌ನಿಂದ ಇಳಿದ ಮಹಿಳೆಯೊಬ್ಬರು ಹಳೆನಗರದ ಎನ್‌ಎಸ್‌ಟಿ ರಸ್ತೆಯಲ್ಲಿ 4:15ರ ವೇಳೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಾಗರಕ್ಕೆ ಹೋಗುವ ದಾರಿ ಕೇಳುವಂತೆ ನಟಿಸಿ ನಂತರ ಚಾಕು ತೋರಿಸಿ ಆಕೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ ಅದು ತುಂಡಾಗಿದ್ದು, ಮಹಿಳೆ ಕೂಗಿಕೊಂಡ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತುಂಡಾದ ಸರದೊಂದಿಗೆ ಪರಾರಿಯಾಗಿದ್ದಾರೆ.


ಘಟನೆ 2:
ತರೀಕೆರೆ ರಸ್ತೆಯಲ್ಲಿರುವ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ರಘು ಎನ್ನುವವರು ಬೆಳಗಿನ ಜಾವ 3ಗಂಟೆ ವೇಳೆಗೆ ವಸ್ತುಗಳನ್ನು ಅನ್‌ಲೋಡ್ ಮಾಡಿಸಿ ವರದಿ ಬರೆಯುತ್ತಿದ್ದರು. ಈ ವೇಳೆ ಕಚೇರಿ ಒಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಟೇಬಲ್ ಮೇಲಿದ್ದ ಮೊಬೈಲ್ ಕದಿಯಲು ಯತ್ನಿಸಿದ್ದು, ಇದರಿಂದ ಎಚ್ಚೆತ್ತ ರಘು ತತಕ್ಷಣ ಅವನನ್ನು ತಡೆಯಲು ಮುಂದಾಗಿದ್ದಾರೆ. ಈವೇಳೆ ದುಷ್ಕರ್ಮಿ ಚಾಕು ಬೀಸಿದ ಪರಿಣಾಮ ರಘು ಅವರ ಕೈಗೆ ಗಾಯಗಳಾಗಿದೆ. ತತಕ್ಷಣವೇ ಇನ್ನಿಬ್ಬರು ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ರಘು ಅವರಲ್ಲಿದ್ದ ಮೂರು ಸಾವಿರ ಹಣವನ್ನು ಕಸಿದುಕೊಂಡಿದ್ದಾರೆ.


ಘಟನೆ 3:
ಬೆಂಗಳೂರಿನಿಂದ ಭದ್ರಾವತಿಗೆ ಆಗಮಿಸಿದ ವ್ಯಕ್ತಿಯೊಬ್ಬರು ಬೆಳಗಿನ ಜಾವ 4 ಗಂಟೆಯ ವೇಳೆಗೆ ನಗರಸಭೆ ಬಳಿ ಇಳಿದು, ಭೂತನಗುಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ 10,000ರೂ. ನಗದು ಎಟಿಎಂ ಕಾರ್ಡ್ ಹಾಗೂ ಮೊಬೈಲ್ ದೋಚಿದ್ದು, ಈವೇಳೆ ಚಾಕುವಿನಿಂದ ಆ ವ್ಯಕ್ತಿಯ ಕೈಗೆ ಇರಿಯಲು ಸಹ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಒಂದೇ ದಿನ ಅದು ಒಂದು ಗಂಟೆಯ ಅವಧಿಯೊಳಗೆ ಮೂರು ದರೋಡೆ ಪ್ರಕರಣ. ಒಂದೇ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ನಾಗರೀಕರಲ್ಲಿ ಆತಂಕ ಮೂಡಿಸಿದೆ. ಈ ಮೂರು ದುಷ್ಕೃತ್ಯವನ್ನು ಒಂದೇ ತಂಡ ಮಾಡಿದೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ಧಾರೆ. ಇದರ ಬೆನ್ನಲ್ಲೇ ನಗರದಾದ್ಯಂತ ನೈಟ್ ಪೊಲೀಸ್ ಬೀಟನ್ನು ಬಿಗಿಗೊಳಿಸಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















