ಉಡುಪಿ, ಅ.15: ಪಂಕ್ತಿಭೇದವೆಂಬ ಸುಳ್ಳನ್ನು ಸೃಷ್ಟಿಸಿ ಕಳೆದ ಅನೇಕ ವರ್ಷಗಳಿಂದ ನಾಡಿನ ಕೆಲವು ನಿರುದ್ಯೋಗಿಗಳು ಶ್ರೀ ಕೃಷ್ಣ ಮಠ ಮತ್ತು ಪೇಜಾವರ ಶ್ರೀಗಳು ಮತ್ತು ಉಡುಪಿಯ ಮಠಾಧೀಶರುಗಳನ್ನು ಕುರಿತು ಮಾಡುತ್ತಿರುವ ವೃಥಾಲಾಪವನ್ನು ಈ ಬಾರಿ ಕೊನೆಗಾಣಿಸುತ್ತೇವೆ. ಎಂದು ಹಿಂದು ಸಂಘಟನೆ ಮತ್ತು ಬ್ರಾಹ್ಮಣ ಸಮಾಜದ ಮುಖಂಡ ಜಿ. ವಾಸುದೇವ ಭಟ್ ಪೆರಂಪಳ್ಳಿ ಎಚ್ಚರಿಸಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಇಂಥ ಸಲ್ಲದ ಆರೋಪಗಳನ್ನು ವಿನಾಕಾರಣ ಮಾಡಿಕೊಂಡು ಕೃಷ್ಣ ಭಕ್ತರ ಸಹನೆಯನ್ನು ಕೆಣಕಲಾಗುತ್ತಿದೆ ಮತ್ತು ನಾಡಿಗೇ ಮಾದರಿಯಾಗಿ ಅತ್ಯಂತ ಕ್ರಿಯಾತ್ಮಕವಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವ ಪೇಜಾವರ ಶ್ರೀಗಳು ಮತ್ತು ಉಡುಪಿಯ ಇತರ ಮಠಾಧೀಶರುಗಳ ತೇಜೋವಧೆಗಳನ್ನು ಅತ್ಯಂತ ಸಹಿಸಿಕೊಂಡಿದ್ದೇವೆ ಆದರೆಇನ್ನು ಸಹಿಸಲು ಸಾಧ್ಯವಿಲ್ಲ. ಈಗ ಮತ್ತೊಮ್ಮೆ ಅದೇ ವಿಚಾರಗಳನ್ನು ಮುಂದಿಟ್ಟುಕೊಂಡು ಈ ವಿಚ್ಛಿದ್ರಕಾರಿ ಶಕ್ತಿಗಳು ನಡೆಸಲು ಉದ್ದೇಶಿಸಿರುವ ಕೃಷ್ಣಮಠ ಮುತ್ತಿಗೆಗೆ ಅವರೆಷ್ಟು ಸಂಖ್ಯೆಯಲ್ಲಿ ಬರುತ್ತಾರೋ ಅದಕ್ಕಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಕೃಷ್ಣ ಭಕ್ತರು ಪ್ರತಿರೋಧ ಒಡ್ಡಿ ಇಂತಹ ವೃಥಾಲಾಪಗಳು ಮುಂದೆಂದೂ ರಾಜ್ಯದಲ್ಲಿ ಕೇಳದಂತೆ ಮಾಡುತ್ತೇವೆ ಎಂದು ಭಟ್ ತಿಳಿಸಿದ್ದಾರೆ.
ಮೀಸಲಾತಿಯ ಪುನರ್ವಿಮರ್ಶೆಯಾಗಬೇಕು
ಈ ದೇಶದಲ್ಲಿ ಅಸಮಾನತೆ ಮತ್ತು ಆ ಹೆಸರಿನಲ್ಲಿ ನೀಡಲಾಗುತ್ತಿರುವ ಮೀಸಲಾತಿ, ಸೌಲಭ್ಯ, ರಿಯಾಯ್ತಿಗಳ ಕುರಿತು ಗಂಭೀರ ಪುನರ್ ವಿಮರ್ಶೆಯಾಬೇಕು. ಹಿಂದುಳಿದವರೆಂಬುದನ್ನೇ ಅಸ್ತ್ರವಾಗಿಟ್ಟುಕೊಂಡು ಕೆಲವು ವರ್ಗಗಳು ವಿಪರೀತ ಸೌಕರ್ಯಗಳನ್ನು ಪಡೆಯುತ್ತಿರುವುದು ಮಾತ್ರವಲ್ಲದೇ ಮತ್ತಷ್ಟು ಸೌಲಭ್ಯಗಳನ್ನು ಪಡೆಯುವುದು ತಮ್ಮ ಹಕ್ಕು ಎಂಬ ರೀತಿಯಲ್ಲಿ ಹೋರಾಟ ನಡೆಸುತ್ತಿವೆ. ಇದರಿಂದಾಗಿ ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ಅಸಮಾನತೆಯ ಕೂಗು ಹೆಚ್ಚಾಗುತ್ತಿದ್ದು ಒಂದಿಲ್ಲೊಂದು ಸಮುದಾಯಗಳು ತಮ್ಮನ್ನೂ ದಲಿತರೆಂದೋ ಅಥವಾ ಹಿಂದುಳಿದವರ ಪಟ್ಟಿಗೆ ಸೇರಿಸಲು ಆಗ್ರಹಿಸಿ, ಬಲಪ್ರದರ್ಶನ ಮಾಡುವ , ಮೀಸಲಾತಿಗಳಿಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗುತ್ತಿದೆ ಎಂದಿದ್ದಾರೆ.
ದೇಶದ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ರಾಜಕೀಯ ಪಕ್ಷಗಳು ಕಾರಣ. ಈ ಬಗ್ಗೆ ಕೂಡಲೇ ಮರುಚಿಂತನೆಯಾಗದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ . ಅಲ್ಪ ಸಂಖ್ಯಾತರೆಂಬ ಕಾರಣಕ್ಕೆ ಸೌಲಭ್ಯಗಳಿಗಾಗಿ ಅತ್ಯಂತ ಅರ್ಹರಾದವರಿದ್ದರೆ ಅದು ಬ್ರಾಹ್ಮಣರು. ಆದರೆ ಆ ವಿಚಾರವಾಗಿ ತಲೆಕೆಡಿಸಿಕೊಳ್ಳದ ಬ್ರಾಹ್ಮಣರು ಎಂದಿಗೂ ಸರಕಾರಗಳ ಮುಂದೆ ಕೈಚಾಚದೇ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಆದರೆ ಕೆಲವು ಎಡಬಿಡಂಗಿಗಳು ಸಮಾಜದ ಅಪಸವ್ಯಗಳಿಗೆ ಬ್ರಾಹ್ಮಣರನ್ನು ಹೊಣೆಯಾಗಿಸುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ವಾಸುದೇವ ಭಟ್ ಎಚ್ಚರಿಕೆ ನೀಡಿದ್ದಾರೆ.
Discussion about this post