ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯ ಹಕ್ಕು ಕಾಯ್ದೆ ಜಾರಿ ವಿಚಾರದಲ್ಲಿ ಅರಣ್ಯಾಧಿಕಾರಿಗಳು ನ್ಯಾಯಾಲಯ ಆದೇಶವನ್ನು ಪಾಲಿಸದೇ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸಿದ್ದಾರೆ ಎಂದು ರೈತ ಮುಖಂಡ ಪರಶುರಾಮ ಶಿಡ್ಡಿಹಳ್ಳಿ ದೂರಿದ್ದಾರೆ.
ಮಂಗಳವಾರ ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಶಿಡ್ಡಿಹಳ್ಳಿ ಗ್ರಾಮದ ಸರ್ವೆ ನಂ. 11ರ ಸಾಗುವಳಿದಾರರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡುವಾಗ ಅರ್ಜಿದಾರರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸರ್ಕಾರಗಳು ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ ಅರಣ್ಯಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸದೆ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
ಶಿಡ್ಡಿಹಳ್ಳಿ ಗ್ರಾಮದ ಸ.ನಂ 11ರಲ್ಲಿ 71 ಸಾಗುವಳಿದಾರರಿದ್ದು, ಇಲ್ಲಿ 32 ವಾಸದ ಮನೆಗಳಿವೆ. ಸರ್ಕಾರದಿಂದ ಅಂಗನವಾಡಿ ಕೇಂದ್ರ, ದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಮೊದಲ ಬಾರಿ ಅರಣ್ಯ ಇಲಾಖೆುಂದ ನೀಡಿದ ನೋಟೀಸ್‌ಗೆ ಉತ್ತರವಾಗಿ ಅರಣ್ಯ ಸುತಿಯವರು ನಾವು ಅರ್ಜಿ ಸಲ್ಲಿಸಿದಾಗ ನೀಡಿದ ಸ್ವೀಕೃತಿಯನ್ನು ಕೊಟ್ಟಿದ್ದೇವೆ. ಆದರೆ, ಪದೇ ಪದೇ ನೋಟೀಸ್ ಜಾರಿ ಮಾಡುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದರು.
ಸಾಗುವಳಿದಾರರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಬೇಕು. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯವರಿಗೆ ಶಿಡ್ಡಿಹಳ್ಳಿಯ 71 ಸಾಗುವಳಿದಾರರಿಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಸಾಗುವಳಿದಾರರ ಮೇಲಿನ ಕೇಸನ್ನು ಕೈ ಬಿಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 71 ಸಾಗುವಳಿದಾರರು ಅಹವಾಲು ಸಲ್ಲಿಸಲಿದ್ದೇವೆ. ಈಗಾಗಲೇ ನೋಟೀಸ್ ಜಾರಿ ಮಾಡಿರುವುದು ಸಾಗುವಳಿದಾರರಿಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದರು.
ಶಿಡ್ಡಿಹಳ್ಳಿ ಗ್ರಾಮಸ್ಥರಾದ ಅಬ್ದುಲ್ ಅಜೀಜ್, ಮೈಲಾರಪ್ಪ, ಎನ್.ಎಸ್. ಅರುಣ್, ರಾಮಪ್ಪ, ಎಸ್.ಆರ್. ನಾಗರಾಜ, ದೇವಮ್ಮ, ರೇಣುಕಮ್ಮ, ಎಸ್.ಜಿ. ಲಿಂಗಪ್ಪ, ಗೌರಮ್ಮ ಸೇರಿದಂತೆ ಅನೇಕ ರೈತರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















