ಮಡಿಕೇರಿ, ಅ.18: ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರ್ಯಾಂಚ್ ಆಫೀಸ್ ನಂತೆ ವರ್ತಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಸಮಾಜಗಳು ಸಮಾಜಕ್ಕೆ ಸಂಬಂಧಿಸಿದ ಕೆಲಸ ಮಾಡಬೇಕೆ ಹೊರತು ಬಿಜೆಪಿಯ ಬ್ರ್ಯಾಂಚ್ ಆಫೀಸ್ ನಂತೆ ಕಾರ್ಯನಿರ್ವಹಿಸುವುದು ಸರಿಯಲ್ಲವೆಂದರು. ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ಕಾಂಗ್ರೆಸ್ ಸರಕಾರದ ಅಜಂಡಾವಾದರೆ, ಇದನ್ನು ವಿರೋಧಿಸುವುದು ಬಿಜೆಪಿಯ ಅಜಂಡಾವಾಗಿದೆ. ಪರಿಸ್ಥಿತಿ ಹೀಗಿರುವಾಗ ಕೊಡವ ಸಮಾಜ ಮತ್ತು ಕೊಡವ ಮೂಲಭೂತ ವಾದಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕೊಡವ ಸಮುದಾಯಕ್ಕೆ ತೋರಿದ ಅಗೌರವವಾಗಿದೆ. ಸ್ವಂತ ಬುದ್ಧಿಯ ಮೂಲಕ ಪ್ರಬುದ್ಧತೆಯನ್ನು ಮೆರೆಯಬೇಕಾಗಿದ್ದ ಕೊಡವ ಸಮಾಜ ಕೊಡವರ ಗೌರವಕ್ಕೆ ದಕ್ಕೆ ತರುತ್ತಿದೆ ಎಂದು ಸುಬ್ಬಯ್ಯ ಆರೋಪಿಸಿದರು.
ಸುಳ್ಳಿನ ಆಧಾರದಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುವವರು ಅನೇಕರಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ದೇವಟ್ಪರಂಬು ಎನ್ನುವ ಸುಳ್ಳನ್ನು ಸೃಷ್ಟಿಸಿವೆ. ಇತಿಹಾಸವನ್ನು ಅಧ್ಯಯನ ಮಾಡಿದರೆ ದೇವಟ್ಪರಂಬು ಪ್ರದೇಶ ಅಥವಾ ಅಲ್ಲಿ ಹತ್ಯೆ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ಅಭಿಪ್ರಾಯಪಟ್ಟ ಸುಬ್ಬಯ್ಯ ಕೊಡವ ಸಮಾಜ ಮೊದಲು ಚರಿತ್ರೆಯನ್ನು ಅಧ್ಯಯನ ಮಾಡಲಿ ಎಂದು ಒತ್ತಾಯಿಸಿದರು.
ಕೊಡವ ಸಮಾಜದ ಈ ವರ್ತನೆಯಿಂದ ಸಮಾಜದಲ್ಲಿ ಕೊಡವರನ್ನು ಪ್ರತ್ಯೇಕವಾಗಿ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗುವುದಲ್ಲದೆ ದ್ವೇಷ ಮನೋಭಾವನೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ದೇವಟ್ಪರಂಬುವಿನಲ್ಲಿ ಕೊಡವರ ಹತ್ಯೆ ಮತ್ತು ಅತ್ಯಾಚಾರ ನಡೆದಿದೆ ಎಂದು ಸುಳ್ಳು ಹೇಳುವ ಮೂಲಕ ಕೊಡವರನ್ನು ಅವಮಾನಿಸಲಾಗುತ್ತಿದ್ದು, ಈ ಬಗ್ಗೆ ಕೊಡವ ಸಮಾಜಗಳು ಜಾಗೃತವಾಗಬೇಕಾಗಿದೆ. ಟಿಪ್ಪುವಿನಿಂದ ಈ ಕೃತ್ಯ ನಡೆದಿದೆ ಎನ್ನುವುದಕ್ಕೆ ಆಧಾರ ನೀಡುವಂತೆ ಒತ್ತಾಯಿಸಿದ ಎ.ಕೆ. ಸುಬ್ಬಯ್ಯ, ಕಳೆದ ವರ್ಷ ನಡೆದ ಟಿಪ್ಪು ಜಯಂತಿಯ ಸಂದರ್ಭ ಸಂಭವಿಸಿದ ಎರಡು ಸಾವಿನ ಪ್ರಕರಣಕ್ಕೆ ಜಯಂತಿಯನ್ನು ವಿರೋಧಿಸಿದವರೇ ಕಾರಣರೆಂದು ಆರೋಪಿಸಿದರು.
ಗೌಡ ಸಮಾಜದ ಬಹುತೇಕ ಮಂದಿ ಬಿಜೆಪಿಯಲ್ಲಿದ್ದರೂ ಟಿಪ್ಪು ಜಯಂತಿಯ ವಿಚಾರದಲ್ಲಿ ಮೌನವಾಗಿರುವ ಮೂಲಕ ಪ್ರೌಢಿಮೆಯನ್ನು ತೋರಿದ್ದಾರೆ ಎಂದು ಸುಬ್ಬಯ್ಯ ಶ್ಲಾಘಿಸಿದರು.
ಇತ್ತೀಚೆಗೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲು ಬಿಜೆಪಿ ಸದಸ್ಯರು ಒತ್ತಡ ಹೇರಿದ್ದರು. ಈ ಸಂದರ್ಭ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನ ಮಹಿಳಾ ಸದಸ್ಯರು ಬಿಜೆಪಿ ಪ್ರಸ್ತಾಪವನ್ನು ವಿಫಲಗೊಳಿಸಿದ್ದಾರೆ. ಇದು ಅತ್ಯಂತ ಚೇತೋಹಾರಿ ಬೆಳವಣಿಗೆಯಾಗಿದ್ದು, ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಮಹಿಳಾ ಸದಸ್ಯರ ಧೈರ್ಯವನ್ನು ಅನುಸರಿಸಬೇಕಾಗಿದೆ ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಕಮಲ ಕಾಂಗ್ರೆಸ್ ನವರ ಹಿಡಿತದಲ್ಲಿದ್ದು, ಇನ್ನು ಮುಂದೆಯಾದರು ಪಕ್ಷದ ಗೌರವವನ್ನು ಉಳಿಸುವ ಕೆಲಸವನ್ನು ಪ್ರಮುಖರು ಮಾಡಬೇಕಾಗಿದೆ ಎಂದರು.
ನಾಚಪ್ಪ ವಿರುದ್ಧ ಕ್ರಿಮಿನಲ್ ಕೇಸ್
ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎ.ಕೆ. ಸುಬ್ಬಯ್ಯ, ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಚಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದ ಸರ್ವೆ ಸಂಖ್ಯೆ 1/6ಎ ನಲ್ಲಿ ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ತಲಾ 5 ಏಕರೆ ಮತ್ತು ಇನ್ನಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಒಟ್ಟು 16 ಎಕರೆ ಪೈಸಾರಿ ಜಾಗವನ್ನು ಎನ್.ಯು. ನಾಚಪ್ಪ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು.
ಅಕ್ರಮ ಸಕ್ರಮ ಸಮಿತಿಯಡಿ ಪೈಸಾರಿ ಜಾಗವನ್ನು ಹೊಂದಲು ಅರ್ಹತೆ ಇಲ್ಲದಿದ್ದರೂ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅಲ್ಲದೆ, ತಮ್ಮ ಪತ್ನಿಗೆ ತಿಳಿಯದೆಯೇ ನಕಲಿ ಸಹಿ ಮಾಡುವ ಮೂಲಕ ಪತ್ನಿಯ ಹೆಸರಿನಲ್ಲೂ ಅರ್ಜಿ ಸಲ್ಲಿಸಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ತಕ್ಷಣ ಲ್ಯಾಂಡ್ ಟ್ರಿಬ್ಯೂನಲ್ ಇದನ್ನು ಪರಿಶೀಲಿಸಿ ಅರ್ಜಿಯನ್ನು ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸುಬ್ಬಯ್ಯ ಒತ್ತಾಯಿಸಿದರು.
ಎನ್.ಯು. ನಾಚಪ್ಪ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಿದ್ದಾರೆ ಎಂದು ಟೀಕಿಸಿದ ಎ.ಕೆ.ಸುಬ್ಬಯ್ಯ, ನಾಚಪ್ಪ ವಿರುದ್ಧ ಈಗಾಗಲೇ ಕಾನೂನು ಹೋರಾಟ ಆರಂಭಿಸಿರುವುದಾಗಿ ತಿಳಿಸಿದರು. ದೇವಟ್ ಪರಂಬು ಎಂದು ಹೇಳಿಕೊಳ್ಳುತ್ತಿರುವ ಜಾಗದಲ್ಲಿ ಅ.17ರ ಒಳಗೆ ಸ್ಮಾರಕ ನಿರ್ಮಾಣದ ಕಲ್ಲುಗಳನ್ನು ಸ್ಥಾಪಿಸದಿದ್ದಲ್ಲಿ ಕರಸೇವೆ ಮಾಡುವುದಾಗಿ ಎನ್.ಯು. ನಾಚಪ್ಪ ಘೋಷಿಸಿದ್ದರು. ಆದರೆ, ಅ.17 ಕಳೆದರೂ ಕರಸೇವೆಯ ಯಾವುದೇ ಬೆಳವಣಿಗೆ ಕಂಡು ಬರುತ್ತಿಲ್ಲ. ನಾಚಪ್ಪ ಕೇವಲ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ ಸುಬ್ಬಯ್ಯ, ಕರಸೇವೆ ಮಾಡಬೇಕು ಅಥವಾ ಮೌನ ವಹಿಸಿ ಹೋರಾಟದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.
—>
News by: ಇಂದ್ರೇಶ್, ಮಡಿಕೇರಿ














