Read - 3 minutes
ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಇಲ್ಲಿಯವರೆಗೆ ಅದನ್ನಾಳಿದವರು ಆಡಿದ್ದೇ ಆಟ ಎನ್ನುವಂತಾಗಿತ್ತು. ಪ್ರಶ್ನಿಸಿದವರ ವಿರುದ್ದ ಸೇಡು ಕಟ್ಟಿಟ್ಟದ್ದು ಎನ್ನುವಂತಾಗಿತ್ತು. ಇಂತಹ ಸ್ವೇಚ್ಛಾರವನ್ನು ಬೆಳೆಸಿಕೊಂಡು ಬಂದಿತ್ತು. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಮಾತಿನಂತೆ ಮಂಡಳಿಯನ್ನು ಕೊಳ್ಳೆ ಹೊಡೆದು ಶ್ರೀಮಂತರಾದವರು ಹಲವರು ಕೋರ್ಟ್ ಕಟಕಟೆ ಏರುವಂತಾಗಿದೆ. ಹಲವರು ತಪ್ಪಿಸಿಕೊಂಡಿದ್ದಾರೆ. ಇನ್ನು ಮುಂದಾದರೂ ಬಿಸಿಸಿಐ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯಾಗಿರದೆ ತನ್ನನ್ನೂ ನಿಯಂತ್ರಿಸುವವರು ಇದ್ದಾರೆಂದು ತಿಳಿಯಬೇಕಿದೆ. ಇದನ್ನು ತಿಳಿಸುವತ್ತ ಸುಪ್ರೀಂ ಕೋರ್ಟ್ ದಿಟ್ಟ ಹೆಜ್ಜೆ ಇಟ್ಟಿದೆ. ಬಿಸಿಸಿಐನಲ್ಲಿ ಬೀಡುಬಿಟ್ಟಿರುವ ಅನೇಕ ರಾಜಕಾರಣಿಗಳು, ಅವರ ಹಿಂಬಾಲಕರಿಗೆ ಈಗ ಬೆವರಿಳಿಯಲಾರಂಭಿಸಿದೆ. ಅವರ ಆಸ್ತಿಪಾಸ್ತಿ ಲೆಕ್ಕಾಚಾರವನ್ನು ಸುಪ್ರೀಂ ಕೇಳಿದೆ. ಆದರೂ ತನ್ನ ಮೊಂಡುತನ ಬಿಡದೆ ಸುಪ್ರೀಂಗೆ ಸೆಡ್ಡು ಹೊಡೆಯುತ್ತಿರುವ ಬಿಸಿಸಿಐಗೆ ಮುಂದಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಸುಧಾರಣೆ ಮತ್ತು ಶಿಕ್ಷೆ ಎಂಬ ಪದಗಳಿಗೆ ಜಾಗವೇ ಇಲ್ಲ. ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಸಂಸ್ಥೆಯಲ್ಲಿ ನಡೆಯುತ್ತಿರುವ ಆಟಾಟೋಪವನ್ನು ತಡೆಗಟ್ಟಲು, ಪಾರದರ್ಶಕ ಆಡಳಿತವನ್ನು ಜಾರಿಗೊಳಿಸಲು ಈವರೆಗೆ ಮಂಡಳಿಯ ಯಾವ ಅಧ್ಯಕ್ಷರೂ ಮುಂದಾಗಿಲ್ಲ. ಕುಬೇರನ ಖಜಾನೆಯಾಗಿರುವ ಇಲ್ಲಿ ಯಾರು ಎಷ್ಟು ಲೂಟಿ ಹೊಡೆದರೂ, ಯಾರು ಎಷ್ಟು ಹಗರಣ ನಡೆಸಿದರೂ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅದಕ್ಕೆ ಸರಕಾರದ ನಿಯಂತ್ರಣ ಇಲ್ಲದಿರುವುದು. ಸ್ವಯಂ ನಿಯಂತ್ರಿತ ಸಂಸ್ಥೆಯಾಗಿರುವುದು.
ಯಾವ ದೃಷ್ಟಿಯಿಂದ ನೋಡಿದರೂ ಅಲ್ಲಿ ಈವರೆಗೆ ಆಡಳಿತ ನಡೆಸಿದವರು (ಬಹುಪಾಲು ಅಧ್ಯಕ್ಷರು ರಾಜಕಾರಣಿಗಳು, ಅವರ ಮಕ್ಕಳು ಅಥವಾ ಸಂಬಂಧಿಗಳು) ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಎಂಬ ಶಬ್ದವನ್ನೇ ಮರೆತುಬಿಟ್ಟಿದ್ದರು. ಮಂಡಳಿ ಇರುವುದೇ ಹಣ ಗಳಿಸಲು, ಮೋಜು-ಮೇಜವಾನಿಗೆ, ಸದಾ ವಿದೇಶ ಪ್ರವಾಸ ಮಾಡಲು ಎಂಬಂತೆ ವರ್ತಿಸಿ, ತಾವೂ ಕುಬೇರನ ಮಕ್ಕಳಂತಾದರು. ಸದಾ ಒಂದಿಲ್ಲೊಂದು ವಿವಾದ, ಹಗರಣದಿಂದ ದೇಶದ ಅಷ್ಟೇ ಏಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ್ದ ಬಿಸಿಸಿಐ ತಾನು ನಡೆಸುತ್ತಿದ್ದ ಐಪಿಎಲ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದ ಬಗ್ಗೆ ನ್ಯಾಯಮೂರ್ತಿ ಮುದ್ಗಲ್ ಸಮಿತಿ ವರದಿ ನೀಡಿತ್ತು. ಈ ಹಗರಣದ ಪರಿಶೀಲನೆಗೆ ಸುಪ್ರೀಂ ಕೋರ್ಟು ನ್ಯಾಯಮೂರ್ತಿ ಆರ್. ಎಸ್. ಲೋಧಾ ನೇತೃತ್ವದಲ್ಲಿ ನ್ಯಾ. ಅಶೋಕ್ ಬಾನ್, ನ್ಯಾ. ಆರ್.ರವೀಂದ್ರನ್ ನೇತೃತ್ವದಲ್ಲಿ ಸಮಿತಿಯೊಂದನ್ನು ೨೦೧೫ರ ಜನವರಿಯಲ್ಲೇ ರಚಿಸಿದೆ. ಈ ಸಮಿತಿ ಬಿಸಿಸಿಐಗೆ ಅಕ್ಷರಶಃ ಚಳಿಜ್ವರ ಬಿಡಿಸುತ್ತಿದೆ.
ಲೋಧಾ ಅವರು ೧೦ ಅಂಶಗಳ ಶಿಫಾರಸಿನ ಪಟ್ಟಿಯೊಂದನ್ನು ಬಿಸಿಸಿಐಗೆ ನೀಡಿ, ಆ ಪ್ರಕಾರ ಬದಲಾವಣೆ ಮಾಡಿಕೊಂಡು ಆಡಳಿತ ನಡೆಸಲು ಸೂಚಿಸಿದ್ದರು. ಅಲ್ಲಿಂದ ಶುರುವಾಗಿದ್ದೇ ಈ ವಿವಾದ. ಬಿಸಿಸಿಐ ಈ ಶಿಫಾರಸನ್ನು ತಾನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎನ್ನುವ ಮೂಲಕ ಸುಪ್ರೀಂ ಕೋರ್ಟ್‌ಗೆ ಸೆಡ್ಡು ಹೊಡೆದಿದೆ. ಲೋಧಾ ತಾನು ರೂಪಿಸಿರುವ ಶಿಫಾರಸುಗಳು ಮಂಡಳಿಯ ಕಿಡ್ನಿ, ಹೃದಯ ಮತ್ತು ಶ್ವಾಸಕೋಶವಿದ್ದಂತೆ ಎಂದು ತಿಳಿಯಪಡಿಸಿದ್ದರು. ಜೊತೆಗೆ ಈ ಶೀಫಾರಸನ್ನು ಜಾರಿಗೊಳಿಸಲು ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಇಬ್ರಾಹಿಂ ಖಲೀಫುಲ್ಲಾ ಅವರನ್ನು ನೇಮಿಸಲಾಗಿದೆ. ನಿಮಗೆ ಶಿಪಾರಸುಗಳನ್ನು ಅಳವಡಿಸಿಕೊಳ್ಳಲು ಕಷ್ಟವಾದರೆ ಹೇಳಿ, ನಾವೇ ಅಳವಡಿಸಿ ತೋರಿಸುತ್ತೇವೆ ಎಂಬ ಎಚ್ಚರಿಕೆಯನ್ನು ಈ ಸಮಿತಿ ನೀಡಿದೆ.
ಮುಖ್ಯವಾಗಿ ಶಿಫಾರಸ್ಸಿನಲ್ಲಿ ಒಂದು ರಾಜ್ಯಕ್ಕೆ ಒಂದು ವೋಟು, ೭೦ ವರ್ಷ ದಾಟಿದವರು ಪದಾಧಿಕಾರಿಗಳಾಗಿರಕೂಡದು, ಎರಡಕ್ಕಿಂತ ಹೆಚ್ಚು ಬಾರಿ ಒಬ್ಬ ಸದಸ್ಯನಾಗಬಾರದು, ಕ್ರಿಕೆಟ್ ಪಂದ್ಯದ ವೇಳೆ ಪ್ರಸಾರವಾಗುವ ಜಾಹೀರಾತಿನ ಮೇಲೆ ನಿರ್ಬಂಧ ವಿಧಿಸುವುದು ಮೊದಲಾದವು ಅತ್ಯಂತ ಪ್ರಮುಖವಾಗಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳದ ಬಿಸಿಸಿಐ ಮೇಲೆ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಕೆಂಗಣ್ಣು ಬೀರಿತ್ತು. ಜೊತೆಗೆ ೪ ರಿಂದ ೬ ತಿಂಗಳಲ್ಲಿ ಇದನ್ನು ಅಳವಡಿಸಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು.
ಇದಾದ ೨-೩ ವಾರದ ಬಳಿಕ ಬಿಸಿಸಿಐ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಅವರನ್ನು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಪರ ವಾದಿಸಲು ನೇಮಿಸಿಕೊಂಡಿತು. ಕಾಟ್ಜು ಸುಪ್ರೀಂ ಕೋರ್ಟ್‌ನ ರೂಲಿಂಗ್ ಕಾನೂನುಬಾಹಿರವಾದುದು ಎಂದು ವಾದಿಸಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಐಸಿಸಿ (ಇಂಟರ್‌ನ್ಯಾಶನಲ್ ಕ್ರಿಕೆಟ್ ಕಮಿಟಿ) ಅಧ್ಯಕ್ಷ ಶಶಾಂಕ್ ಮನೋಹರ್ (ಬಿಸಿಸಿಐ ಮಾಜಿ ಅಧ್ಯಕ್ಷರೂ ಹೌದು) ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದರು. ಆದರೆ ನೆರವಿಗೆ ಬರಲು ಅವರು ನಿರಾಕರಿಸಿದ್ದರು.
ಸದ್ಯ ಬಿಸಿಸಿಐ ಕೈಕಾಲನ್ನು ಸುಪ್ರೀಂ ಕಟ್ಟಿ ಹಾಕಿದೆ. ಅಧ್ಯಕ್ಷ ಠಾಕೂರ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಿಫಾರಸು ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ನ್ಯಾಯಾಲಯವು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗಿದೆ. ಇಡಿ ಜಗತ್ತಿಗೆ ಈ ಬಗ್ಗೆ ಗೊತ್ತಿದೆ. ಈಗ ನೀವು ಬಂದು ನನ್ನನ್ನು ಕೇಳದೆ ರೂಪಿಸಿದ್ದು ಸರಿಯಲ್ಲ ಎನ್ನುತ್ತಿದ್ದೀರಿ, ನಿಮಗೆ ನಾವು ಆಮಂತ್ರಣ ಪತ್ರಿಕೆ ಕೊಟ್ಟು ಶಿಫಾರಸು ರೂಪಿಸಬೇಕಿತ್ತೇ ಎಂದು ಖಾರವಾಗಿ ಪ್ರಶ್ನಿಸಿದೆ.
ವಿವಾದ ಅರಂಭವಾದಾಗ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಬಿಸಿಸಿಐ ಚುಕ್ಕಾಣಿಯನ್ನು ಬಿಟ್ಟು ಅನುರಾಗ್ ಠಾಕೂರ್ ಹೆಗಲಿಗೆ ಕಟ್ಟಿ ಹೋಗಿದ್ದಾರೆ. ಈಗ ಠಾಕೂರ್ ರಕ್ಷಿಸಬೇಕಿದೆ. ಆದರೆ ಠಾಕೂರ್ ತನ್ನ ಹಠವನ್ನು ಬಿಡದೆ ಸುಪ್ರೀಂ ಕೋರ್ಟ್‌ಗೆ ಸವಾಲು ಹಾಕುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುಪ್ರೀಂ, ಆಡಳಿತ ಮಂಡಳಿ ವಜಾ ಮಾಡಿ ಆಡಳಿತಾಧಿಕಾರಿ ನೇಮಿಸುವ ಅವಕಾಶವನ್ನು ನೀವೇ ಕಲ್ಪಿಸುತ್ತಿದ್ದೀರಿ ಎಂದು ಹೇಳಿದೆ. ಆದರೆ ತಾನೇ ಸುಪ್ರೀಂ ಎಂದು ತಿಳಿದ ಬಿಸಿಸಿಐ ಮತ್ತೆ ಜಗ್ಗದಿದ್ದಾಗ, ಒಂದೋ, ನೀವು ನಮ್ಮ ಶಿಫಾರಸು ಒಪ್ಪಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮನ್ನು ಹೇಗೆ ದಾರಿಗೆ ತರಬೇಕೆಂದು ನಮಗೆ ಗೊತ್ತು ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿತ್ತು. ಆದರೆ ಸೆ. ೩೦ರೊಳಗೆ ಶಿಫಾರಸು ಅಳವಡಿಕೆಯನ್ನು ನಿರಾಕರಿಸಿದ್ದ ಬಿಸಿಐಐಗೆ ಶಾಕ್ ಕೊಟ್ಟಿದ್ದು, ಅದರ ಇಬ್ಬರು ಸದಸ್ಯರಾದ ತ್ರಿಪುರಾ ಮತ್ತು ವಿದರ್ಭಾ ಕ್ರಿಕೆಟ್ ಮಂಡಳಿಯ ಸದಸ್ಯರೇ ಸುಪ್ರೀಂ ಕೋರ್ಟ್ ಪರ ನಿಂತಾಗ.
ಈ ಹಂತದಲ್ಲಿ ಸ್ವಲ್ಪ ಮೆತ್ತಗಾದ ಬಿಸಿಸಿಐ ಮಹತ್ವದ ಶಿಫಾರಸನ್ನು ಅಳವಡಿಸಿಕೊಳ್ಳುವುದಾಗಿ ಅಕ್ಟೋಬರ್ ೧ರಂದು ಕೋರ್ಟಿಗೆ ಹೇಳಿತ್ತು. ಆದರೆ ೭೦ ವರ್ಷದ ಮೀರಿದವರು ಹೊರಹೋಗುವುದು, ಒಂದು ರಾಜ್ಯಕ್ಕೆ ಒಂದು ಮತವನ್ನು ಮಾತ್ರ ಕೈಬಿಡಬೇಕೆಂದು ಕೋರಿತ್ತು. ಇದಕ್ಕೊಪ್ಪದ ಕೋರ್ಟು ಬಿಸಿಸಿಐನ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ಅ. ೭ರೊಳಗೆ ಶರತ್ತುರಹಿತವಾಗಿ ಶಿಫಾರಸು ಒಪ್ಪಿಕೊಳ್ಳಲು ಎಚ್ಚರಿಸಿತ್ತು. ಮಧ್ಯಾಂತರ ಆದೇಶವೊಂದನ್ನು ಹೊರಡಿಸಿ ಶಿಫಾರಸು ಒಪ್ಪಿಕೊಳ್ಳದಿದ್ದರೆ ಯಾವ ರಾಜ್ಯ ಮಂಡಳಿಗೂ ಹಣ ಬಿಡುಗಡೆ ಮಾಡುವಂತಿಲ್ಲ ಎಂದೂ ಸಹ ಹೇಳಿ ಬಿಸಿಐಐಗೆ ಇನ್ನೊಂದು ಸಂಕಷ್ಟ ತಂದಿಟ್ಟಿತು.
ಈ ಮಧ್ಯೆ ದೆಹಲಿಯಲ್ಲಿ ಸಭೆ ಸೇರಿದ ಬಿಸಿಸಿಐ ಆಡಳಿತ ಮಂಡಳಿ, ಶಿಫಾರಸು ಅಳವಡಿಕೆ ಪ್ರಾಯೋಗಿಕವಾಗಿ ಕಷ್ಟ ಎಂದು ಹೇಳಿತ್ತು. ಆದರೆ ಮೂರನೆಯ ಎರಡರಷ್ಟು ಸದಸ್ಯರು ಇದನ್ನು ಅನುಮೋದಿಸಿ ನಿರ್ಣಯ ಮಾಡಿರಲಿಲ್ಲ. ಅ. ೧೭ರಂದು ಠಾಕೂರ್ ಅಫಿಡವಿಟ್ ಸಲ್ಲಿಸಿ, ಲೋಧಾ ಶಿಫಾರಸು ಜಾರಿಗೊಳಿಸಿದರೆ ಸರ್ಕಾರವು ತನ್ನ ವ್ಯವಹಾರದಲ್ಲಿ ಮಧ್ಯಪ್ರವೇಶಿಸಲು ದಾರಿಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದಿದ್ದರು. ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಅ. ೨೧ರಂದು ಕೋರ್ಟ್ ಬಿಸಿಸಿಐ ಅಧ್ಯಕ್ಷ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ನೋಟೀಸ್ ಜಾರಿ ಮಾಡಿ ನ. ೩ರೊಳಗೆ ಲೋಧಾ ಸಮಿತಿ ಎದುರು ಹಾಜರಾಗುವಂತೆ ಆದೇಶಿಸಿದೆ.
ಒಟ್ಟಿನಲ್ಲಿ, ಎರಡು ತಿಂಗಳಿಂದ ಬಿಸಿಸಿಐ ದಿನನಿತ್ಯ ಸುದ್ದಿಯಲ್ಲಿದೆ. ನಿಯಂತ್ರಣವಿಲ್ಲದ ಅದರ ಅಧಿಕಾರಕ್ಕೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತನ್ನು ಮತ್ತು ಮನಬಂದಂತೆ ಆಟವಾಡುವುದನ್ನು, ಯಾವುದೇ ಹೊಸ ನಿರ್ಣಯ ಕೈಗೊಳ್ಳುವುದಕ್ಕೆ ಲೋಧಾ ಸಮಿತಿ ಕಡಿವಾಣ ಹಾಕುತ್ತಿದೆ. ತಾನು ಯಾರಿಗೂ ಹೊಣೆಗಾರನಲ್ಲ ಎನ್ನುವ ಅದರ ಅಹಂಕಾರಕ್ಕೆ ಕಡಿವಾಣ ಬೀಳುವುದು ನಿಶ್ಚಿತ. ಲೋಧಾ ಸಮಿತಿಯ ಶಿಫಾರಸುಗಳು ಜಾರಿಯಾದರೆ ಬಿಸಿಸಿಐನ ಅಧಿಕಾರ ಮೊಟಕುಗೊಳ್ಳಲಿ. ಪ್ರತಿ ವ್ಯವವಹಾರವನ್ನು ಪಾರದರ್ಶಕವಾಗಿ ನಡೆಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಸಮಿತಿಗೆ ಮತ್ತು ಸದಸ್ಯರಿಗೆ ತೊಂದರೆಯನ್ನುಂಟು ಮಾಡಲಿದೆ. ಇದರಿಂದ ಬಚಾವಾಗಲು ಇನ್ನಿಲ್ಲದ ಹೋರಾಟವನ್ನು ಬಿಸಿಸಿಐ ನಡೆಸುತ್ತಿದೆ.
ಲೋಧಾ ಸಮಿತಿಯ ಶಿಫಾರಸುಗಳು
* ಬಿಸಿಸಿಐ ಆರ್‌ಟಿಐ ಕಾಯ್ದೆಯಡಿ ಬರಬೇಕು
* ಬೆಟ್ಟಿಂಗ್ ವಿರುದ್ಧ ಹೊಸ ಕಾನೂನನ್ನು ಬಿಸಿಸಿಐ ಮುಂದಾಗಿ ತರಬೇಕು.
* ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಆದಾಯವನ್ನು ಘೋಷಿಸಬೇಕು.
* ಒಂದು ರಾಜ್ಯಕ್ಕೆ ಒಂದು ಮತ ಜಾರಿಬರಬೇಕು. (ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ೩ ಕ್ರಿಕೆಟ್ ಮಂಡಳಿಗಳಿದ್ದು, ಅಲ್ಲಿ ೩ ಮತಗಳಿವೆ)
* ಅಧ್ಯಕ್ಷ ಸಹಿತ ಬಿಸಿಸಿಐ ಪದಾಧಿಕಾರಿಯಾಗಿ ಯಾರೂ ೨ ಬಾರಿಗಿಂತ ಹೆಚ್ಚು ಮುಂದುವರೆಯಬಾರದು.
* ಬಿಸಿಸಿಐ ಪದಾಧಿಕಾರಿಯಾಗುವವರು ಸಚಿವರು ಅಥವಾ ಸರ್ಕಾರಿ ನೌಕರರಾಗಿರಬಾರದು.
* ಬಿಸಿಸಿಐಯು ಸಂಚಲನಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ನಿವೃತ್ತ ಐಎಎಸ್ ಅಥವಾ ಐಪಿಎಸ್ ಅಧಿಕಾರಿ, ಒಬ್ಬ ಮಾಜಿ ಹಿರಿಯ ಆಟಗಾರ, ಮಹಿಳಾ ಕ್ರಿಕೆಟ್ ಆಟಗಾರ್ತಿ ಮತ್ತು ಹಾಲಿ ಆಟಗಾರರೊಬ್ಬರಿರಬೇಕು.
* ಐಪಿಎಲ್ ಮತ್ತು ಬಿಸಿಸಿಐಗೆ ಪ್ರತ್ಯೇಕ ಆಡಳಿತ ಮಂಡಳಿ ಇರಬೇಕು.
* ರೈಲ್ವೇಸ್, ಸರ್ವೀಸಸ್ ಮತ್ತು ಯುನಿವರ್ಸಿಟಿ ಕ್ರಿಕೆಟ್ ಸಂಸ್ಥೆಗಳನ್ನು ಸದಸ್ಯರೆಂದು ಪರಿಗಣಿಸಬಾರದು.
* ಐಪಿಎಲ್ ಮಾಜಿ ಸಿಇಓ ಸುಂದರರರಾಮನ್ ವಿರುದ್ದ ಭ್ರಷ್ಟಾಚಾರದ ಪ್ರಕರಣದಡಿ ಸಾಕ್ಷಿಸ ಸಹಿತ ಕ್ರಮ ಜರುಗಿಸಬೇಕು.
Discussion about this post