ಕಲ್ಪ ಮೀಡಿಯಾ ಹೌಸ್ | ಉಡುಪಿ |
ಹಿಜಾಬ್ ಧರಿಸಿ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ನೀಡುವಂತೆ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಪ್ರವೇಶ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಪೋಷಕರು ಪೊಲೀಸರ ಜತೆಗೂ ವಾಗ್ವಾದ ನಡೆಸಿ, ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಪ್ರಾಂಶುಪಾಲರನ್ನು ಒತ್ತಾಯಿಸಿದ್ದಾರೆ. ಈ ವೇಳೆ ಸರ್ಕಾರದ ಆದೇಶ ಏನು ಎಂಬುದನ್ನು ಕಾಲೇಜಿನ ಮಹಿಳಾ ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.
ಪೋಷಕರು ಮತ್ತು ಉಪನ್ಯಾಸಕರ ನಡುವೆ ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಪೋಷಕರನ್ನು ತರಾಟೆಗೆ ತೆಗೆದುಕೊಂಡು, ಪ್ರತಿಭಟನೆ ನಡೆಸಿದರೆ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಕಾಲೇಜಿನ ಹೊರಗಡೆ ಹಿಜಾಬ್ ವಿವಾದ ಕುರಿತು ಗಲಾಟೆ ನಡೆಯುತ್ತಿದ್ದರೆ, ಒಳಗಡೆ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ನಿನ್ನೆ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬರಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದರು.
ಹಿಜಾಬ್ ಧರಿಸಿ ಬಂದಿರುವ ಹಿನ್ನೆಲೆಯಲ್ಲಿ ಕಾಲೇಜಿನ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಮಧ್ಯೆ ಹಿಜಾಬ್ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು ಪ್ರತಿಭಟನೆ ನಡೆಯುವ ಸಾಧ್ಯತೆ ಮನಗಂಡು ಬೆಂಗಳೂರಿನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post