ಕಲ್ಪ ಮೀಡಿಯಾ ಹೌಸ್ | ಹೊನ್ನಾಳಿ |
ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸುವ ಕುರಿತಾಗಿ ಸರಕಾರ ಹಾಗೂ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಸ್ಥಳೀಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಸೋಮವಾರ ಪಟ್ಟಣದ ಸರಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ, ಹಿಜಬ್ ಹಾಗೂ ಕೇಸರಿ ಶಾಲು ಧರಿಸುವ ಕುರಿತಾಗಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಸರಕಾರಿ ಹಾಗೂ ಖಾಸಗಿ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರ ಧರಿಸುವಂತೆ ಸರ್ಕಾರ ಹೊರಡಿಸಿರುವ ನಿಯಮವನ್ನು ಪ್ರತಿಯೊಬ್ಬರೂ ಪಾಲನೆ ಮಾಡುವಂತೆ ಸಲಹೆ ಮಾಡಿದರು.
ವಿದ್ಯಾರ್ಥಿಗಳ ಯಾವ ಸಮವಸ್ತ್ರ ಧರಿಸಬೇಕು ಎಂಬುದನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಯವರು ತೀರ್ಮಾನಿಸುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಈ ನಿಯಮಗಳ ಪಾಲನೆ ಮಾಡಬೇಕು ಎಂದು ಹೇಳಿದರು.
ಕೇಸರಿ ಶಾಲು ಹಾಕಿದವರು ಇಲ್ಲವೇ ಹಿಜಬ್ ಧರಿಸಿದವರನ್ನು ಕಾಲೇಜಿನ ಒಳಗಡೆ ಬಿಡಬಾರದು. ಪ್ರಾಂಶುಪಾಲರು ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚನೆ ಕೊಟ್ಟರು.ನ್ಯಾಯಾಲಯ ಏನು ತೀರ್ಪು ನೀಡಲಿದೆಯೋ ನಮಗೆ ಗೊತ್ತಿಲ್ಲ.ನ್ಯಾಯಾಧೀಶರು ನೀಡುವ ಆದೇಶಕ್ಕೆ ಪ್ರತಿಯೊಬ್ಬರೂ ಬದ್ದರಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಹಾಗೂ ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈಗಾಗಲೇ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಲ್ಲಿನ ಹೈ ಕೋಟ್೯ಗಳು ಹಿಜಬ್ ಧರಿಸಿ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವಂತಿಲ್ಲ ಎಂಬ ತೀರ್ಪು ನೀಡಿದೆ. ಇದೇ ರೀತಿ ಕರ್ನಾಟಕ ಹೈ ಕೋಟ್೯ ನೀಡುವ ಆದೇಶಕ್ಕೆ ತಲೆಬಾಗಬೇಕು ಎಂದರು.
ಕಾನೂನುಗಿಂತ ಯಾರು ಕೂಡ ದೊಡ್ಡವರಲ್ಲ.ಈಗಾಗಲೇ ಸರಕಾರ ಸಮವಸ್ತ್ರವನ್ನು ಜಸರಿಗೊಳಿಸಿ ಅಧಿಸೂಚನೆಯನ್ನು ಹೊರಡಿಸಿದೆ. ನ್ಯಾಯಾಲಯದ ಅದೇಶಕ್ಕೆ ಸರಕಾರ ಕೂಡ ತಲೆಬಾಗುವುದಾಗಿ ಹೇಳಿದೆ. ಅಲ್ಲಿಯವರೆಗೆ ಎಲ್ಲರೂ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಹೇಳಿದರು.ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ- ಜಾತಿ, ಮೇಲು .ಕೀಳು ದೊಡ್ಡವರು , ಚಿಕ್ಕವರು, ಎಂಬ ಭೇದ-ಬಾವ ಇರುವುದಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವ ಉದ್ದೆಶವೇ ಎಲ್ಲರಲ್ಲೂ ನಾವೆಲ್ಲರೂ ಸಮಾನರು ಎಂಬ ಜಾಗೃತಿ ಮೂಡಿಸಲು. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಿದರು.
ನಾನೊಬ್ಬ ಚುನಾಯಿತರಾಗಿ ಚುನಾಯಿತ. ನನಗೆ ಹಿಂದು- ಮುಸ್ಲಿಂ ಎಂಬ ಬೇದ- ಭಾವ ಇಲ್ಲ. ನಿಮ್ಮೆಲ್ಲರ ರಕ್ಷಣೆ ನನ್ನ ಜವಾಬ್ದಾರಿಯಾಗಿದೆ. ಪರಸ್ಪರ ಮಾತಿನ ಚಕಮಕಿ ಇಲ್ಲವೇ ಘರ್ಷಣೆ ಉಂಟಾಗಿ ಯಾರಿಗಾದರೂ ಹೆಚ್ಚು ಕಡಿಮೆಯಾದರೆ ನನಗೆ ಕಪ್ಪು ಚುಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಗಳು ಸರಸ್ವತಿಯ ದೇಗುಲ. ಇಂತಹ ಕಡೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ವರ್ತಿಸಬೇಕು. ಹಿಜಾಬ್ ಇಲ್ಲವೇ ಕೇಸರಿ ಶಾಲಿಗಿಂತ ಶಿಕ್ಷಣ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.ವಿದ್ಯಾರ್ಥಿಗಳಿಗೆ ಮನವರಿಕೆ
ಇದಕ್ಕೂ ಮುನ್ನ ರೇಣುಕಾಚಾರ್ಯ ಅವರು ಕಾಲೇಜಿಗೆ ಆಗಮಿಸಿ ಎರಡು ಕಡೆಯ ವಿದ್ಯಾರ್ಥಿಗಳ ಜೊತೆಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮೊದಲು ಕೇಸರಿ ಶಾಲು ಹಾಕಿದ್ದ ವಿದ್ಯಾರ್ಥಿಗಳನ್ನು ಭೇಟಿಯಾದ ಅವರು, ಕಾಲೇಜುಗಳಿಗೆ ಈ ರೀತಿ ಹಾಕಿಕೊಟ್ಟ ಬರಬಾರದು. ಆಡಳಿತ ಮಂಡಳಿ ಯಾವ ಸಮವಸ್ತ್ರ ಧರಿಸಲು ಸೂಚಿಸಿದಿಯೋ ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಮನವೊಲಿಸಿದರು.ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಹಾ ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡಿದರು.
ಕಾಲೇಜುಗಳಲ್ಲಿ ಧರ್ಮದ ಆಚರಣೆಗಿಂತ ಶಿಕ್ಷಣ ಮುಖ್ಯ. ನೀವು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ನೀವು ಹಿಜಾಬ್ ಧರಿಸಲು ನಮ್ಮ ತಕರಾರು ಇಲ್ಲ. ಕಾಲೇಜಿನ ಆವರಣದೊಳಗೆ ಅದನ್ನು ತೆಗೆದುಬನ್ನಿ. ನೀವು ಹಿಜಾಬ್ ಧರಿಸುವುದು ಇನ್ನೊಬ್ಬರು ಕೇಸರಿ ಶಾಲು ಹಾಕುವುದರಿಂದ ವಾತವರಣ ಹಾಳಾಗುತ್ತದೆ.ನಮಗೆ ಶಾಂತಿ, ಸೌಹಾರ್ದತೆ, ಸಾಮರಸ್ಯ ಮುಖ್ಯ. ಇದನ್ನು ಎಲ್ಲರೂ ಚಾಚುತಪ್ಪದೆ ಪಾಲನೆ ಮಾಡಬೇಕು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post