ಕಲ್ಪ ಮೀಡಿಯಾ ಹೌಸ್ | ಸೊರಬ |
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ Bajarangadala Harsha Murder ಆರೋಪಿಗಳನ್ನು ಪೊಲೀಸ್ ಇಲಾಖೆ ಕೇವಲ 24 ಗಂಟೆಗಳಲ್ಲಿ ಬಂಧಿಸಿರುವುದನ್ನು ಸ್ವಾಗತಿಸುತ್ತೇವೆ. ಜೊತೆಗೆ ಹತ್ಯೆಯಾದ ಹರ್ಷ ಅವರ ಕುಟುಂಬಕ್ಕೆ 25 ಲಕ್ಷ ರೂ., ಪರಿಹಾರ ನೀಡುವ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಯುವಕ ದಿನೇಶ್ ಹತ್ಯೆಯ ವಿಷಯದಲ್ಲಿ ತಾರತಮ್ಯ ಧೋರಣೆ ಮಾಡುತ್ತಿರುವುದು ಖಂಡನೀಯ ಎಂದು ದಲಿತ ಮುಖಂಡ ಮಹೇಶ ಶಕುನವಳ್ಳಿ ಆರೋಪಿಸಿದರು.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೆ ಒಂದು ಕೋಟಿ ರೂ., ಪರಿಹಾರ ನೀಡಬೇಕು. ಬಜರಂಗದಳ ಮುಖಂಡರೊಬ್ಬರ ಸಹೋದರನಿಂದ ಹಾಡು ಹಗಲೇ ದೀನೇಶ್ ಎಂಬ ದಲಿತ ಯುವಕನ ಹತ್ಯೆಯಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಧ್ವನಿ ಎತ್ತುತ್ತಿಲ್ಲ. ಇದೇ ದಲಿತ ಯುವಕ ಅನ್ಯ ಧರ್ಮಿಯರಿಂದ ಕೊಲೆಯಾಗಿದ್ದರೆ ಬಿಜೆಪಿ ಮತ್ತು ಸಂಘ-ಪರಿವಾರದವರು ಸುಮ್ಮನೆ ಇರುತ್ತಿದ್ದರೆ ಎಂದು ಪ್ರಶ್ನಿಸಿದರು.

ದಲಿತ ಯುವಕನ ಹತ್ಯೆಯ ಆರೋಪಿಗಳಿಗೆ ಸ್ಥಳೀಯ ಜನಪ್ರತನಿಧಿಗಳು ರಕ್ಷಣೆ ನೀಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬಿಜೆಪಿಯವರು ಹಂತಕರ ರಕ್ಷಕರೇ ಎನ್ನುವ ಅನುಮಾನ ಮೂಡುತ್ತಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯದೇ ಆರೋಪಿಗಳಿಗೆ ಸೂಕ್ತ ಕಾನೂನು ರಿತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರ ಮೃತ ದೀನೇಶ್ ಕುಟುಂಬಕ್ಕೆ ಶೀಘ್ರದಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿದರು.


Also read: ಸಹ್ಯಾದ್ರಿ ಕಾಲೇಜು ಮಹಿಳಾ ಹಾಸ್ಟೆಲ್‌ನಲ್ಲಿ ಫುಡ್ ಪಾಯಿಸನ್: ಹಲವು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಪೊಲೀಸರು ಅಮಾನವೀಯವಾಗಿ ವರ್ತಿಸುತ್ತಿರುವುದು ಖಂಡನೀಯ. ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಪಿಎಸ್‍ಐ ಮತ್ತು ಸಿಬ್ಬಂದಿಯೊಬ್ಬರು ನಡೆಸುತ್ತಿರುವ ದೌರ್ಜನ್ಯದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮಾಯಕ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದ ಅವರು, ತಾಲೂಕಿನ ಕೋಲ್ಗುಣಸಿ ಗ್ರಾಮದಲ್ಲಿ 2021ರ ಏಪ್ರೀಲ್ 10ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾಧಿಕಾರಿಗಳು ದಲಿತರಿಗೆ ನ್ಯಾಯದೊರಕಿಸಿಕೊಟ್ಟಿಲ್ಲ. ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಕೋಲ್ಗುಣಸಿ ಗ್ರಾಮದ ದಲಿತರಿಗೆ ನ್ಯಾಯ ದೊರೆಯಬೇಕು. ಆರೋಪಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಗುರುರಾಜ, ಬಂಗಾರಪ್ಪ ನಿಟ್ಟಕ್ಕಿ, ಹರೀಶ್ ಚಿಟ್ಟೂರು, ನಾಗರಾಜ ಹುರಳಿಕೊಪ್ಪ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















