ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಅಪ್ರತಿಮ ಗಾಂಧೀವಾದಿ, ಸ್ವಾತಂತ್ರ ಹೋರಾಟಗಾರ, ಸಹಕಾರಿ ಧುರೀಣ, ರಾಜ್ಯ ವಿಧಾನಪರಿಷತ್ತಿನ ಮಾಜಿ ಸಭಾಪತಿ ದಿ.ಕೆ ವಿ ನರಸಪ್ಪನವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಬದುಕು ಮತ್ತು ಸಾಧನೆಯ ಬಗೆಗಿನ ಜನಾನುರಾಗಿ ಪುಸ್ತಕ ಇದೇ ಮೇ 1 ರ ಭಾನುವಾರ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ, ದಿ.ನರಸಪ್ಪನವರ ಪುತ್ರ ಎನ್. ಅರುಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಗಾಮ ಗ್ರಾಮದ ರೈತ ಕುಟುಂಬದಲ್ಲಿ ನಿಂಗಪ್ಪ ಹಾಗೂ ರಂಗಮ್ಮ ದಂಪತಿಯ ಪುತ್ರರಾಗಿ ಜನಿಸಿದ ನರಸಪ್ಪನವರು ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಅವರ ಶಿಕ್ಷಣದ ಬಗೆಗಿನ ಆಸಕ್ತಿಯನ್ನು ಗುರುತಿಸಿ ಹಿರಿಯರು ಪ್ರೋತ್ಸಾಹಿಸಿದ ಪರಿಣಾಮ ಬಿಎ ಪದವಿಗಳಿಸಿ ಬೆಳಗಾಂನಲ್ಲಿ ಎಲ್‌ಎಲ್‌ಬಿ ಯಲ್ಲಿ ರ್ಯಾಂಕ್‌ಗಳಿಸಿ ವಕೀಲ ವೃತ್ತಿಗೆ ವಿದಾಯ ಹೇಳಿ ತಾಲೂಕಿಗೆ ವಾಪಾಸಾಗಿ ಕೃಷಿಕ ವೃತ್ತಿಯ ಜತೆಗೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆಗೈದರು ಎಂದು ತಿಳಿಸಿದರು.
ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಕೆಲಕಾಲ ಜೈಲುವಾಸ ಅನುಭವಿಸಿದ ನರಸಪ್ಪನವರು 29ರ ಯೌವನದಲ್ಲಿ ಪಟ್ಟಣದ ಪುರಸಭೆಗೆ ಆಯ್ಕೆಯಾಗಿ 1949 ರಲ್ಲಿ ಪ್ರಥಮ ಅಧ್ಯಕ್ಷರಾಗಿ ಮೂಲಸೌಲಭ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ಅವರ ದೂರದೃಷ್ಟಿಯ ಫಲವಾಗಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ವಿಶಾಲ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಮೀಸಲಾಗಿಟ್ಟಿದ್ದ ಅವರು ದಕ್ಷ ಆಡಳಿತಗಾರ, ದೂರದರ್ಶಿತ್ವ, ನಾಡು ಕಟ್ಟಲು ಅಗತ್ಯವಾದ ಕ್ರಿಯಾಶೀಲತೆ, ಎಲ್ಲ ಸಮುದಾಯವನ್ನು ಒಗ್ಗೂಡಿಸಿ ಕರೆದೊಯ್ಯುವ ಮುತ್ಸದ್ದಿತನ, ಪ್ರಾಮಾಣಿಕತೆ, ಶಾಂತ ಮನೋಭಾವ, ಸ್ವಚ್ಛ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.
Also read: ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಹಾನ್ ಕನಸುಗಾರರಾಗಿದ್ದ ದಿ.ಕೆ.ವಿ. ನರಸಪ್ಪನವರ ಬದುಕು ಮತ್ತು ಸಾಧನೆಯ ಬಗ್ಗೆ ಜನಾನುರಾಗಿ ಪುಸ್ತಕ ಪಾರ್ವತೀಶ ಬಿಳಿದಾಳೆ, ಎನ್. ಸಿದ್ದೇಗೌಡ, ಅಶಾಮಹೇಶ್ವರ ಸಿಂಗ್ ಅವರ ಸಂಪಾದಕತ್ವದಲ್ಲಿ ಸಿದ್ಧಗೊಂಡಿದ್ದು ಇದೇ ಮೇ 1ರ ಭಾನುವಾರ ಸಂಜೆ 4ಕ್ಕೆ ಪಟ್ಟಣದ ಜೈನ ಮಂದಿರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆಗೊಳಿಸಲಿದ್ದಾರೆ. ಪುರಸಭಾಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್, ಸಂಸದ ರಾಘವೇಂದ್ರ, ನಿವೃತ್ತ ಉಪನ್ಯಾಸಕ ಡಾ.ಶಿಕಾರಿಪುರ ಕೃಷ್ಣಮೂರ್ತಿ, ಮಾಜಿ ಶಾಸಕ ಮಧುಬಂಗಾರಪ್ಪ, ಹಿರಿಯ ವೈದ್ಯ ಡಾ.ಕಾಂತರಾಜ್ ಮತ್ತಿತರರು ಸಾಕ್ಷಿಯಾಗಲಿದ್ದಾರೆ. ಹಿರಿಯ ಸ್ವಾತಂತ್ರ ಹೋರಾಟಗಾರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ನರಸಪ್ಪನವರ ಪುತ್ರ ಭಾಸ್ಕರ್, ರವಿ ಮುಖಂಡ ತಿಮ್ಮಣ್ಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post