ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗಿರುವ ಡಯಾಲಿಸಿಸ್ ಘಟಕದಿಂದಾಗಿ, ಮಲೆನಾಡು ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಖ್ಯಾತ ಮೂತ್ರಪಿಂಡ ತಜ್ಞ ಡಾ.ದಯಾನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೂತನ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಗಿರಿ, ಭದ್ರಾವತಿ, ಚಿತ್ರದುರ್ಗ ಭಾಗದ ಜನಗಳಿಗೆ ನಗರ ಪ್ರವೇಶಿಸಿ ವಾಹನ ಸಂದಣಿಯಲ್ಲಿ ಸಿಲುಕಿ ಡಯಾಲಿಸಿಸ್ ರೋಗಿಗಳು ಬಳಲುವುದನ್ನು ತಡೆಯಲು ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನವು ಅತಿ ಕಡಿಮೆ ದರದಲ್ಲಿ ಘಟಕವನ್ನು ಆರಂಭಿಸಿದೆ. ಡಯಾಲಿಸಿಸ್ ರೋಗಿಗೆ ಭರಿಸುವ ಖರ್ಚಿನಲ್ಲಿ ಶೇ.25ರಷ್ಟು ಕಡಿತ ಮಾಡುವುದರ ಜೊತೆಗೆ ಉನ್ನತ ದರ್ಜೆಯ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ದೀರ್ಘಕಾಲಿಕವಾಗಿ ತೀವ್ರತೆಯಿಂದ ಬಳಲುವ ಕಿಡ್ನಿ ಸಂಬಂಧಿ ರೋಗಿಗಳಿಗೆ ಉತ್ತಮ ಶುಶ್ರೂಶೆ ಅವಶ್ಯಕ. ನಿಯಮಿತವಾಗಿ ವೈದ್ಯರ ಮಾರ್ಗದರ್ಶನವನ್ನು ರೋಗಿಗಳು ಅನುಸರಿಸಬೇಕು. ಈ ವೈದ್ಯಕೀಯ ಸೇವಾ-ಸೌಲಭ್ಯದ ಕುರಿತು ಸಾರ್ವಜನಿಕರು ಡಯಾಲಿಸಿಸ್’ನಿಂದ ಬಳಲುವವರಿಗೆ ಅರಿವು ಮೂಡಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ಕೃಷ್ಣಪ್ರಸಾದ್ ಮಾತನಾಡಿ, ಕಿಡ್ನಿ ಕಾಯಿಲೆಗಳಿಂದ ಬಳಲುವವರು ನಿರಂತರವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ರೋಗಿಗಳಿಗೆ ಮನೋಧೈರ್ಯ ತುಂಬಿ ಉನ್ನತಮಟ್ಟದ ಸೇವೆ ಒದಗಿಸುವುದು ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಎಸ್. ನಾಗೇಂದ್ರ ಮಾತನಾಡಿ, ಡಯಾಲಿಸಿಸ್’ಗೆ ಒಳಪಡುವವರ ಖರ್ಚು ತಿಂಗಳಿಗೆ ಸುಮಾರು ಮೂವತ್ತು ಸಾವಿರದಷ್ಟು ಆಗುತ್ತದೆ. ಇದರಿಂದ ರೋಗಿಗಳ ಕುಟುಂಬದವರಿಗೆ ಅರ್ಥಿಕ ಹೊರೆಯಾಗುವುದು. ಜನರಲ್ ಮೆಡಿಷನ್ ವಿಭಾಗದಡಿ ಬರುವ ಮೂತ್ರಪಿಂಡ ವಿಭಾಗವು ಅತ್ಯಂತ ಕಡಿಮೆ ಖರ್ಚಿನಲ್ಲಿ ಡಯಾಲಿಸಿಸ್ ಮಾಡುವ ಉದ್ದೇಶದಿಂದ ಡಯಾಲಿಸಿಸ್ ಘಟಕವನ್ನು ಆರಂಭಿಸಲಾಗಿದೆ. ಕೇವಲ 800 ರೂಪಾಯಿಗಳಲ್ಲಿ ಡಯಾಲಿಸಿಸ್ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರ ಪ್ರದೇಶದಿಂದ ಬರುವ ಡಯಾಲಿಸಿಸ್ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಕಡಿಮೆ ದರದ ಜೊತೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಡಯಾಲಿಸಿಸ್ ರೋಗಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಲತಾ ನಾಗೇಂದ್ರ, ಡಾ. ವಿನಯ ಶ್ರೀನಿವಾಸ್, ವೈದ್ಯಕೀಯ ಅಧೀಕ್ಷಕರಾದ ಡಾ.ಎಚ್.ಎಂ. ಶಿವಮೂರ್ತಿ, ಡೆಪ್ಯುಟಿ ಮೆಡಿಕಲ್ ಸೂಪರಿಂಡೆಂಟ್ ಡಾ. ಸುಜಿತ್ ಹಾಲಪ್ಪ, ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಶೇಖರಪ್ಪ ಡಾ. ಅಧಿತಿ ನಾಗೇಂದ್ರ, ಡಾ. ಶಶಾಂಕ್ ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post