ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಗೀತವು ಮನುಷ್ಯನ ಮನಸ್ಸನ್ನು ಸಂತಸವಾಗಿರುವ ದಿವ್ಯ ಔಷಧ. ಸಂಗೀತ ಕಲಿಕೆ ಮತ್ತು ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುವುದರ ಜತೆಯಲ್ಲಿ ಖಿನ್ನತೆ ಕಡಿಮೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಹವ್ಯಾಸಿ ಗಾಯಕರ ಬಳಗ ಶಿವಮೊಗ್ಗ ಮತ್ತು ನಮ್ಮ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಸೌರಭ – ಹಳೇ ಚಿತ್ರಗೀತೆಗಳ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳೆಯ ಚಿತ್ರಗೀತೆಗಳು ತುಂಬಾ ಅರ್ಥಗರ್ಭಿತ ಹಾಗೂ ಉತ್ತಮ ಸಂಗೀತ ಹೊಂದಿರುತ್ತದೆ. ಒಳ್ಳೆಯ ಸಂದೇಶಗಳನ್ನು ಒಳಗೊಂಡಿರುತ್ತದೆ. ಹಳೇ ಚಿತ್ರಗೀತೆಗಳನ್ನು ಕೇಳುತ್ತಿದ್ದರೆ ಮನುಷ್ಯನಲ್ಲಿ ಮನಸ್ಸಿನ ಸಂತೋಷ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯು ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿದ್ದು, ಇಲ್ಲಿ ಕಲಾವಿದರ ಸಂಖ್ಯೆ ಅಪಾರವಾಗಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಯುವಪೀಳಿಗೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದರು.
ಕನ್ನಡ ಚಿತ್ರಗೀತೆಗಳಿಗೂ ವಿಶೇಷ ಇತಿಹಾಸವಿದ್ದು, ಸ್ಫೂರ್ತಿ ತುಂಬುವ ಕೆಲ ಕನ್ನಡ ಚಿತ್ರಗೀತೆಗಳು ಬಹಳ ಜನರ ಬದುಕನ್ನು ಉತ್ತಮಗೊಳಿಸಿವೆ. ಅನೇಕ ಗೀತೆಗಳು ಇಂದಿಗೂ ಕನ್ನಡಿಗರ ಜನಮಾನಸದ ನೆನಪಿನಲ್ಲಿ ಉಳಿದಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹಳೇ ಚಿತ್ರಗೀತೆಗಳನ್ನು ಹಾಡಿ ಜನರನ್ನು ರಂಜಿಸಿ ಮಾತನಾಡಿ, ಹಳೇ ಚಿತ್ರಗೀತೆಗಳು ಎಂದೆಂದಿಗೂ ಅಜರಾಮರ. ಹಳೇ ಚಿತ್ರಗೀತೆಗಳು ನಮ್ಮ ಮನಸ್ಸನ್ನು ವಿಕನಸಗೊಳಿಸುತ್ತವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಹವ್ಯಾಸಿ ಗಾಯಕರ ಬಳಗದ ಭಾಗ್ಯ ನಂಜಪ್ಪ, ಶಿವಗಂಗಾ ಯೋಗಕೇಂದ್ರದ ಸಿ.ವಿ.ರುದ್ರಾರಾಧ್ಯ, ಗಾಯಕ ವಾಸು ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಹವ್ಯಾಸಿ ಗಾಯಕರ ಬಳಗದ ಬಸವರಾಜ್ ನಾಯಕ್, ಬಸವರಾಜ ಮಾಸ್ಟಾರ್ ಕುಮಾರಿ ಆದ್ಯ, ಭವಾನಿ ಶಂಕರ್, ಜಿ.ವಿಜಯ್‌ಕುಮಾರ್, ಪ್ರಿಯಾಂಕ, ವಿರೇಂದ್ರ, ಸರೋಜ ಬುಜಂಗಪ್ಪ, ಶೃತಿ ಅವರು ಹಳೇ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಧೃವರಾಜ್, ಮೆಲ್ವಿನ್, ಜಯಶೀಲನ್, ಕ್ವಿಂಟನ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post