ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಬದುಕಿನಲ್ಲಿ ಎದುರಾಗುವಾಗ ಪ್ರತಿ ಸೋಲು ಗೆಲುವುಗಳನ್ನು ಕ್ರೀಡಾತ್ಮಕವಾಗಿ ನೋಡಬೇಕಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು
ಶನಿವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಬಹುಮಾನ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಬದುಕಿನಲ್ಲಿ ಸೋಲಿಗೆ ಅಧೀರರಾಗದೇ ಗೆಲುವಿಗೆ ಅಹಂಕಾರ ಪಡದೆ ಬಾಳಬೇಕು. ಯಾವುದೇ ಚರಿತ್ರೆಗಳಲ್ಲಿ ಗೆದ್ದವರಿಗೆ ಹಾಗೂ ಸೋತವರಿಗೆ ಜಾಗವಿದೆ, ಅದರೇ ನಿಂತು ನೋಡುವವರಿಗೆ ಹಿಯಾಳಿಸಿ ನಗುವವರಿಗೆ ಎಲ್ಲಿಯೂ ಸಲ್ಲದವರಾಗಿ ಉಳಿದುಬಿಡುತ್ತಾರೆ. ಹಾಗಾಗಿಯೇ ಭಾಗವಹಿಸುವಿಕೆ ಅತಿ ಮುಖ್ಯ ವಿಚಾರವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ನಮ್ಮ ಬದುಕಿನ ವಿಶಿಷ್ಟ ಸಾಧನೆಗೆ ಕ್ರೀಡೆ ಸ್ಫೂರ್ತಿದಾಯಕ ಸಾಧನವಾಗಿದೆ. ನಮ್ಮ ಹಿರಿಯರು ಕಟ್ಟಿಕೊಟ್ಟ ನೆಲೆಗಟ್ಟುಗಳು ಇಂದು ಕೇವಲ ಆಚರಣೆಯಾಗಿ ಉಳಿದಿದೆ. ಅಂದಿನ ದಿನಮಾನದಲ್ಲಿದ್ದ ಕ್ರೀಡಾತ್ಮಕ ಮನೋಭಾವ ಮುಕ್ತ ಭಾಗವಹಿಸುವಿಕೆ ಎಲ್ಲವೂ ಆಧುನಿಕತೆಯ ಭರಾಟೆ ಸಿಲುಕಿ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿಯೇ ಯುವ ಸಮೂಹ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
Also read: ಶ್ರೀ ರಾಮ ಸೇನೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯಾಗಿ ಪ್ರಶಾಂತ್ ಬಂಗೇರ ನೇಮಕ
ಕಾರ್ಯಕ್ರಮದಲ್ಲಿ ಜೆ.ಎನ್.ಎನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಚೇತನ್.ಎ.ವಿ, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರಾದ ಮಧುಸೂದನ್ ಗೊಲ್ಲಾ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















