ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ Central Minister Dharmendra Pradhan ಶುಕ್ರವಾರ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿರುವ 2022ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‌ಐಆರ್‌ಎಫ್) ನಲ್ಲಿ NIRF ಕುವೆಂಪು ವಿಶ್ವವಿದ್ಯಾಲಯವು Kuvempu University 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ ಐದನೇ ವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಕಳೆದ ಬಾರಿಯಂತೆಯೇ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
ದೇಶದ 4100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.44ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ವಿಶ್ವವಿದ್ಯಾಲಯಗಳ ಪೈಕಿ 86ನೇ ಸ್ಥಾನ ಪಡೆದಿದೆ. 2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ 86ನೇ ರ‍್ಯಾಂಕ್ ಪಡೆಯುವುದರೊಂದಿಗೆ, ಕೋವಿಡ್-19 ಮತ್ತು ವಿವಿಯ ಸುಮಾರು 10 ಪ್ರಾಧ್ಯಾಪಕರು ನಿವೃತ್ತರಾದ ಕಾರಣದಿಂದ ಉನ್ನತ ಶಿಕ್ಷಣದ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದ್ದರೂ, ಟಾಪ್ 100ರೊಳಗೆ ಸ್ಥಾನ ಪಡೆದುಕೊಂಡಿದೆ.

ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 33 ಮತ್ತು 64ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದಿವೆ.
Also read: ಮಾವಿನ ಗಿಡ ನೆಡುವುದರ ಮೂಲಕ ಜನ್ಮದಿನಾಚರಣೆ ಆಚರಿಸಿಕೊಂಡ ಪ್ರಗತಿಪರ ರೈತ ದಯಾನಂದಮೂರ್ತಿ
ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದ್ದು, ಈಗ ಏಳನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

ಕುಲಸಚಿವರಾದ ಜಿ. ಅನುರಾಧ ಪ್ರತಿಕ್ರಿಯಿಸಿ, ದೇಶದ ಪ್ರತಿಶ್ಠಿತ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಗ್ರಾಮೀಣ ಭಾಗದ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯ ಹಾಗೂ ಕೇವಲ ಮೂರು ದಶಕಗಳ ಹಿನ್ನಲೆಯುಳ್ಳ ಸಂಸ್ಥೆಯೊಂದು ಸತತ ನಾಲ್ಕು ವರ್ಷಗಳಿಂದ ನೂರರ ಪಟ್ಟಿಯೊಳಗೆ ಸ್ಥಾನ ಪಡೆಯುತ್ತಾ ಬಂದಿರುವುದು ಸಂತಸದ ವಿಚಾರ. ಶೈಕ್ಷಣಿಕ, ಆಡಳಿತಾತ್ಮಕ ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆ ತಂದು ರ‍್ಯಾಂಕಿಂಗ್ ಉತ್ತಮಪಡಿಸಲಾಗುವುದು ಎಂದಿದ್ದಾರೆ.

ರಾಜ್ಯದ ಉನ್ನತ ಶಿಕ್ಷಣದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 10ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (1), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (7), ಮೈಸೂರು ವಿಶ್ವವಿದ್ಯಾಲಯ (33), ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ (34), ಬೆಂಗಳೂರು ವಿಶ್ವವಿದ್ಯಾಲಯ (64), ಬೆಂಗಳೂರಿನ ಕ್ರೆಸ್ಟ್ ವಿವಿ (71), ಮಂಗಳೂರಿನ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯ (75) ಸ್ಥಾನ ಪಡೆದಿವೆ. ಇನ್ನುಳಿದಂತೆ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ (72), ಮತ್ತು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ (79), ಕೆಎಲ್‌ಯ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (88), ಮಂಗಳೂರಿನ ಯೆನಪೊಯ ವಿವಿಗಳು (97) ಟಾಪ್ 100ರಲ್ಲಿರುವ ಕರ್ನಾಟಕದ ಇತರೆ ಶೈಕ್ಷಣಿಕ ಸಂಸ್ಥೆಗಳು.










Discussion about this post