ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ರಾಜ್ಯಾದ್ಯಂತ ಸ್ನಾತಕ ಪದವಿ ಕೋರ್ಸ್ ಗಳು ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾದಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದಾಗಿ ಕುವೆಂಪು ವಿವಿ Kuvempu VV ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊಸ ಶಿಕ್ಷಣ ನೀತಿ (ಎನ್ಇಪಿ) ಜಾರಿಗೊಂಡ ಬಳಿಕ ಬಿ.ಎ, ಬಿ.ಕಾಂ, ಬಿಎಸ್ಸಿ ಮತ್ತಿತರ ಸ್ನಾತಕ ಪದವಿ ಕೋರ್ಸ್ ಗಳ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಳವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿದೆ. ಆದರೆ, ಇದು ತಪ್ಪು ತಿಳುವಳಿಕೆಯಾಗಿದ್ದು, ಸ್ನಾತಕ ಪದವಿಗಳ ಅವಧಿ ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾಗಿರುತ್ತದೆ. ಪ್ರವೇಶಾತಿಯನ್ನು ದಂಡ ಶುಲ್ಕದೊಂದಿಗೆ ಆಗಸ್ಟ್ 20ರ ವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರವೇಶ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಎನ್ಇಪಿಯಲ್ಲಿ ಹೊಸತೇನಿದೆ?:
ಹೊಸ ಶಿಕ್ಷಣ ನೀತಿ ಅನ್ವಯ ಪಿಯುಸಿ ನಂತರ ಸ್ನಾತಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲ ವರ್ಷದ ಬಳಿಕ ಕಾಲೇಜು ತೊರೆದರೆ ಅಂತಹಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು. ಇನ್ನು ಎರಡು ವರ್ಷ ಪೂರೈಸಿ ಶಿಕ್ಷಣ ಮೊಟಕುಗೊಳಿಸಿದರೆ, ಯುಜಿ ಡಿಪ್ಲೊಮಾ ಸರ್ಟಿಫಿಕೇಟ್ ನೀಡಲಾಗುವುದು. ಮೂರನೆಯ ವರ್ಷ ಪೂರೈಸುವ ವಿದ್ಯಾರ್ಥಿಗಳು ಹಿಂದಿನಂತೆಯೇ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ನಾಲ್ಕನೇ ವರ್ಷ ಹಾನರ್ಸ್ ಕೋರ್ಸ್ ಆಗಿದ್ದು, ಇದು ಕಡ್ಡಾಯವಾಗಿರುವುದಿಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರುತ್ತದೆ.











Discussion about this post