ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿ, ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಿ ಭಾರತ ಸ್ವಾತಂತ್ರ್ಯಕ್ಕೆ 75 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಅಮೃತ ಮಹೋತ್ಸವ ಪ್ರಯುಕ್ತ ‘ಹರ್ ಘರ್ ತಿರಂಗಾ’ Har Ghar Tiranga ಅಭಿಯಾನವನ್ನು ಆಗಸ್ಟ್, 13 ರಿಂದ 15 ರವರೆಗೆ ಕೊಡಗು ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
‘ಈಗಾಗಲೇ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 28 ಸಾವಿರ ಧ್ವಜವನ್ನು ವಿವಿಧ ಇಲಾಖೆಗಳಿಗೆ ವಿತರಿಸಲಾಗಿದ್ದು, ಜಿ.ಪಂ.ಸ್ವಸಹಾಯ ಗುಂಪುಗಳಿಂದ 53 ಸಾವಿರಕ್ಕೂ ಹೆಚ್ಚು ಧ್ವಜಗಳನ್ನು ಗ್ರಾಮೀಣ ಮಟ್ಟದಲ್ಲಿ ವಿತರಿಸಲಾಗಿದೆ. ಅಂಚೆ ಕಚೇರಿಯಿಂದ 13 ಸಾವಿರಕ್ಕೂ ಹೆಚ್ಚು, ಹಾಗೆಯೇ ಶಾಸಕರ ನೇತೃತ್ವದಲ್ಲಿಯೂ ಧ್ವಜ ವಿತರಣೆ ಮಾಡಿದ್ದು, ಒಟ್ಟಾರೆ ಜಿಲ್ಲೆಯ 1.44 ಲಕ್ಷ ಕುಟುಂಬಗಳಿಗೆ ರಾಷ್ಟ್ರಧ್ವಜವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
‘ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್, 13 ರಿಂದ 15 ರವರೆಗೆ ಪ್ರತೀ ದಿನ ಬೆಳಗ್ಗೆ 8 ರಿಂದ ಧ್ಜಜಾರೋಹಣ ಮಾಡಿ ಸೂರ್ಯಾಸ್ತದ ವೇಳೆಗೆ ಇಳಿಸಬೇಕಿದೆ. ಜಿಲ್ಲೆಯಾದ್ಯಂತ ಮನೆಗಳಲ್ಲಿ ಮಾತ್ರ ಆಗಸ್ಟ್, 13 ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆಗಸ್ಟ್, 15 ರ ಸಂಜೆ ಸೂರ್ಯಾಸ್ತದ ವೇಳೆಗೆ ಇಳಿಸಿ, ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯ ಮಡಿಕೇರಿ ನಗರಸಭೆ, ವಿರಾಜಪೇಟೆ ಪುರಸಭೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಗುರುವಾರ ಚಾಲನೆ ದೊರೆತಿದೆ.
ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ತ್ಯಾಗಮಾಡಿದ ಎಲ್ಲರನ್ನೂ ಗೌರವಿಸಿ ಸ್ಮರಿಸಬೇಕಿದೆ. ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ.
ಆ.12 ರಂದು ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಜಾಥಾ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆಯ ಪ್ರಯುಕ್ತ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಗಸ್ಟ್ 12 ರಂದು ಬೆಳಗ್ಗೆ 10.30 ಗಂಟೆಗೆ ಹರ್ ಘರ್ ತಿರಂಗಾ ಜಾಥಾವು ನಗರದಲ್ಲಿ ನಡೆಯಲಿದೆ.
Also read: ಅತಿವೃಷ್ಟಿ: ಹೆಚ್ಚಿನ ಪರಿಹಾರ ಕೋರಿ ಶೀಘ್ರದಲ್ಲಿ ಕೇಂದ್ರಕ್ಕೆ ಮನವಿ – ಸಿಎಂ
ಈ ಜಾಥವು ಮಡಿಕೇರಿಯ ಕೋಟೆ ಆವರಣದಿಂದ ಪ್ರಾರಂಭವಾಗಿ ಸ್ಕ್ವಾಡ್ರ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಮೂಲಕ ಇಂದಿರಾ ಗಾಂಧಿ ವೃತ್ತ ತಲುಪಿ ನಂತರ ಸ್ಕ್ವಾಡ್ರ್ರನ್ ಲೀಡರ್ ದೇವಯ್ಯ ವೃತ್ತ-ಮಂಗೆರೀರ ಮುತ್ತಣ್ಣ ವೃತ್ತ-ಜನರಲ್ ತಿಮ್ಮಯ್ಯ ವೃತ್ತ ಮತ್ತು ಮಂಗೆರೀರ ಮುತ್ತಣ್ಣ ವೃತ್ತದ ಮುಖಾಂತರ ಕೋಟೆ ಆವರಣಕ್ಕೆ ತಲುಪಲಿದೆ.
ಈ ಜಾಥಾದಲ್ಲಿ ಎಲ್ಲಾ ಸರ್ಕಾರಿ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಧ್ವಜದೊಂದಿಗೆ ಭಾಗವಹಿಸಲಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸಹ ಜಾಥಾದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಮತ್ತಷ್ಟು ಮಾಹಿತಿ: ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರ್ಣಗೊಂಡಿದೆ. ಆದರೆ, ಅದರ ಹಿಂದೆ ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿವೆ. ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ ಈ ಹೋರಾಟಗಳಲ್ಲಿ ಮುಂಚೂಣಿ ನಾಯಕರುಗಳ ಪಾತ್ರ ಎಷ್ಟು ಮುಖ್ಯವಾಗಿರುತ್ತೋ ಅಷ್ಟೇ ಮುಖ್ಯವಾಗಿ ಅವರು ಹೋರಾಟಕ್ಕೆ ಕರೆ ನೀಡಿದಾಗ, ತಮ್ಮ ಮನೆ ಮಠಗಳನ್ನು ಹಾಗೂ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಲಕ್ಷಾಂತರ ಜನರ ಪಾತ್ರವೂ ಮುಖ್ಯ. ಆದರೆ ಅವರುಗಳ ಹೆಸರು ಎಲ್ಲೂ ದಾಖಲಾಗಿಲ್ಲ. ಆದರೆ ಮುಂಚೂಣಿ ನಾಯಕರ ಜೊತೆ ಇವರೆಲ್ಲ ಕೈಜೋಡಿಸಿದ್ದರಿಂದ ಸ್ವಾತಂತ್ರ್ಯ ಕನಸು ಸಾಕಾರವಾಯಿತು.
ಪ್ರಸ್ತುತ ದೇಶಾದ್ಯಂತ ಭಾರತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗಾ’ ಎಂಬ ಘೋಷ ವಾಕ್ಯದೊಂದಿಗೆ ಆಗಸ್ಟ್ 13 ರಿಂದ 15 ರವರೆಗೆ ದೇಶದ ಪ್ರತಿಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿದೆ. ಅದರಂತೆ ಈ ಸಂದರ್ಭದಲ್ಲಿ ನೀವೆಲ್ಲರೂ ಆಗಸ್ಟ್, 13 ರಿಂದ 15 ರವರೆಗೆ ನಿಮ್ಮ-ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜಹಾರಿಸುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post