ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರಕ್ಕೆ ಕಳಶಪ್ರಾಯವಾಗಿರುವ ಜೀವ ವೈವಿಧ್ಯತೆಯ ತಾಣ ರಾಗಿಗುಡ್ಡವನ್ನು ಸಂರಕ್ಷಿಸುವುದು ನಾಗರಿಕ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು ವಿಶೇಷ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಈ ಹಿಂದೆ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ರಾಗಿಗುಡ್ಡ ಈಗ ಸರ್ಕಾರದ ತೆಕ್ಕೆಯಲ್ಲಿ 22 ಎಕರೆ ಮಾತ್ರ ಉಳಿದಿದೆ. ಉಳಿದ 78 ಎಕರೆ ಪ್ರದೇಶವು ಹಲವಾರು ಸರ್ಕಾರಿ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ವಸತಿ ಉದ್ದೇಶಕ್ಕಾಗಿ ಬಳಸಲಾಗಿದೆ.
ರಾಗಿಗುಡ್ಡದ ವಿಶೇಷವೇನೆಂದರೆ ಇಡೀ ಶಿವಮೊಗ್ಗ ನಗರಕ್ಕೆ ಉತ್ತಮ ವಾತಾವರಣವನ್ನು ನೀಡುವ ಹಾಗೂ ಆಮ್ಲಜನಕವನ್ನು ನೀಡುವ ಏಕೈಕ ತಾಣವಾಗಿದೆ. ರಾಗಿಗುಡ್ಡದಲ್ಲಿ ಹಲವಾರು ಸಹಜ ಪ್ರಾಣಿ ಸಂಕುಲಗಳಿವೆ. ರಾಗಿಗುಡ್ಡದ ಸುತ್ತಮುತ್ತಲೂ ಮೂರಕ್ಕಿಂತಲೂ ಹೆಚ್ಚು ಕೆರೆಗಳಿದ್ದು ಅವುಗಳ ಜೀವನಾಡಿಯಾಗಿದೆ.
ರಾಜಕಾರಣಿಗಳ ದುರಾಸೆಯಿಂದಲೂ, ಅಧಿಕಾರಿಗಳ ನಿರ್ಲಕ್ಷದಿಂದಲೂ ಸಾವಿರಾರು ಗಿಡಮರಗಳಿರುವ ರಾಗಿ ಗುಡ್ಡವನ್ನು ಅರಣ್ಯವೆಂದು ಘೋಷಿಸದೇ ರೆವೆನ್ಯೂ ವಲಯವೆಂದು ಮಾಡಲಾಗಿದೆ. ಇಂತಹ ಪವಿತ್ರವಾದ ರಾಗಿಗುಡ್ಡವನ್ನು ಸಂರಕ್ಷಿಸುವುದು ನಾಗರಿಕರ ಜವಾಬ್ದಾರಿಯಾಗಿದೆ.
ಈಗಾಗಲೇ ರಾಗಿಗುಡ್ಡದಲ್ಲಿ ಸುಮಾರು 28 ಎಕರೆ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಸುಮಾರು 30 ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಇತ್ತೀಚಿಗೆ ಸುಮಾರು 5 ಎಕರೆ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆಗೆ ರಾಗಿಗುಡ್ಡವನ್ನು ನೀಡಲಾಗಿದ್ದು, ಆಸ್ಪತ್ರೆ ನಿರ್ಮಾಣ ಸಂದರ್ಭದಲ್ಲಿ ಬೃಹತ್ ಯಂತ್ರೋಪಕರಣಗಳಿಂದ ರಾಗಿಗುಡ್ಡವನ್ನು ಕೊರೆದು ಬಂಡೆಗಳನ್ನು ಬ್ಲಾಸ್ಟ್ ಮಾಡಿ ಬೃಹತ್ ಕಟ್ಟಡಗಳನ್ನು ಕಟ್ಟಲಾಗುತ್ತಿದೆ.
ಈ ಹಿಂದೆ ಶಿವಮೊಗ್ಗದ ಎಲ್ಲಾ ಪರಿಸರಾಸಕ್ತರು ಸಾವಿರಾರು ಗಿಡಗಳನ್ನು ರಾಗಿಗುಡ್ಡದಲ್ಲಿ ನೆಟ್ಟು ಬೆಳೆಸಿದ್ದರು. ಚೆನ್ನಾಗಿ ಬೆಳೆದಂತಹ ಆ ಎಲ್ಲಾ ಗಿಡಮರಗಳನ್ನು ನೆಲಸಮ ಮಾಡಲಾಗಿದೆ. ಒಂದಿಷ್ಟು ಭಾಗದಲ್ಲಿ ಭೂಗಳ್ಳರು ಒತ್ತುವರಿ ಮಾಡುತ್ತಿದ್ದಾರೆ. ಪದೇ ಪದೇ ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದು, ಗಿಡಗಳು ಸುಟ್ಟು ಭಸ್ಮವಾಗಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.
Also read: ಪದವೀಧರರ ಸಹಕಾರ ಸಂಘಕ್ಕೆ ಒಂದು ಕೋಟಿ ರೂ. ಲಾಭ: ಎಸ್.ಪಿ. ದಿನೇಶ್
ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ರಾಗಿಗುಡ್ಡ ಅಭಿವೃದ್ಧಿ ಮತ್ತು ಪ್ರವಾಸಿ ತಾಣದ ಹೆಸರಲ್ಲಿ ಗುಡ್ಡದ ಮೇಲೆ 75 ಅಡಿಯ ಬೃಹತ್ ಶಿವಲಿಂಗ ನಿರ್ಮಾಣ ಮತ್ತಿತರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ರಾಗಿಗುಡ್ಡದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯವಿದ್ದು, ಅರ್ಚಕ ಕುಟುಂಬವೊಂದು ತಲತಲಾಂತರದಿಂದ ಅದರ ನಿರ್ವಹಣೆ ಮಾಡಿಕೊಂಡು ಬಂದಿದೆ. ಪ್ರವಾಸೋದ್ಯಮ ಅಭಿವೃದ್ಧಿ ಮಾಡುವಾಗ ಅಲ್ಲಿಯ ಹಳೆಯ ಕಟ್ಟಡಗಳಿಗೆ ಧಕ್ಕೆ ತರದೇ ಈಗಿರುವ ದೇವಾಲಯಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಮತ್ತು ಅಲ್ಲಿರುವ ಕುಟುಂಬಗಳಿಗೆ ನೆಲೆ ಕಲ್ಪಿಸಬೇಕು. ಈಗಾಗಲೇ ನೆಟ್ಟು ಬೆಳೆಸಿದ ಗಿಡ ಮರಗಳನ್ನು ಸಂರಕ್ಷಿಸಬೇಕು. ಯಾವುದೇ ಕಾರಣಕ್ಕೂ ಕ್ರಿಕೆಟ್ ಕ್ರೀಡಾಂಗಣದ ಹೆಸರಲ್ಲಿ ಆಪೋಷನಗೊಂಡ ನವುಲೆ ಕೆರೆಯಂತೆ ರಾಗಿಗುಡ್ಡ ಕತೆಯಾಗಬಾರದು.
ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಗಿಗುಡ್ಡವನ್ನು ಉಳಿಸಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ರಾಗಿಗುಡ್ಡ ಉಳಿಸಿ ಎನ್ನುವ ವೇದಿಕೆಯೊಂದನ್ನು ರಚಿಸಲಾಗುತ್ತಿದೆ. ಆದ್ದರಿಂದ ಶಿವಮೊಗ್ಗದ ನಾಗರಿಕರು ತಮ್ಮ ಅಮೂಲ್ಯ ಸಲಹೆ ನೀಡಲು ಕೋರಿದೆ. ನವ್ಯಶ್ರೀ ನಾಗೇಶ್, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್, ಶಿವಮೊಗ್ಗ. ಫೋ: 9842 82504 ಈ ವಿಳಾಸಕ್ಕೆ ತಮ್ಮ ಸಲಹೆ ಸೂಚನೆಗಳನ್ನು ಇದೇ ತಿಂಗಳ 25 ರ ಒಳಗಾಗಿ ತಲುಪಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post