ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಮಡಿಕೇರಿ ಮತ್ತು ಗೋಣಿಕೊಪ್ಪ ಜನೋತ್ಸವ ದಸರಾಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಲಿದ್ದು, ಸಂಪ್ರದಾಯದಂತೆ ದಸರಾ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ Minister B C Nagesh ತಿಳಿಸಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು.
ಈ ಹಿಂದಿನಂತೆ ದಸರಾವನ್ನು ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ವಿವಿಧ ಉಪ ಸಮಿತಿಗಳು ಸೇರಿದಂತೆ ಕಾಲ ಕಾಲಕ್ಕೆ ಸಭೆ ಆಯೋಜಿಸಿ, ದಸರಾ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಆಗಲಿದ್ದು, ದಸರಾವನ್ನು ಸಂಪ್ರದಾಯದಂತೆ ಆಯೋಜಿಸುವಂತಾಗಬೇಕು ಎಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಕೊಡಗಿನ ನಾಡಹಬ್ಬವಾದ ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು 165 ವರ್ಷಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ ದಸರಾ ನಾಡಹಬ್ಬವು ಸರ್ಕಾರದ ಅನುದಾನದೊಂದಿಗೆ ಜನೋತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.
Also read: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಜೆಡಿಎಸ್ ಸದಸ್ಯರಿಂದ ಧರಣಿ
ಮಡಿಕೇರಿ ದಸರಾ ಉತ್ಸವದಲ್ಲಿ 4 ಶಕ್ತಿ ದೇವತೆಗಳ ಕರಗ ಮೆರವಣಿಗೆ ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ಸೆಪ್ಟೆಂಬರ್, 26 ರಂದು 4 ಶಕ್ತಿ ದೇವತೆಗಳ ಕರಗ ಮೆರವಣಿಯೊಂದಿಗೆ ದಸರಾಗೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್, 27 ಮತ್ತು 28 ರಂದು ಸಾಂಸ್ಕೃತಿಕ ಕಾರ್ಯಕ್ರಮ, ಸೆಪ್ಟೆಂಬರ್, 29 ರಂದು ಕ್ರೀಡಾಕೂಟ, ಸೆಪ್ಟೆಂಬರ್, 30 ರಂದು ಮಹಿಳಾ ದಸರಾ, ಅಕ್ಟೋಬರ್, 01 ರಂದು ಯುವ ದಸರಾ, ಅಕ್ಟೋಬರ್, 02 ರಂದು ಜನಪದ ದಸರಾ, ಅಕ್ಟೋಬರ್, 03 ರಂದು ಮಕ್ಕಳ ದಸರಾ, ಅಕ್ಟೋಬರ್, 04 ರಂದು ಕವಿಗೋಷ್ಠಿ ಮತ್ತು ಆಯುಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಈ ಎಲ್ಲಾ ದಿನಗಳಂದು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಅಕ್ಟೋಬರ್, 05 ರಂದು ವಿಜಯದಶಮಿಯ ರಾತ್ರಿ ದಶಮಂಟಪಗಳ ಶೋಭಾಯಾತ್ರೆಯಲ್ಲಿ 10 ದೇವಾಲಯಗಳಿಂದ ವಿಜಯದ ಸಂದೇಶ ನೀಡುವ ದಶಮಂಟಪಗಳು ಶೋಭಾಯಾತ್ರೆ ನಡೆಯಲಿದೆ. ಅಕ್ಟೋಬರ್, 06 ರಂದು ಮುಂಜಾನೆ ಸಾಂಪ್ರದಾಯದಂತೆ ಬನ್ನಿ ಕಡಿಯುವುದರ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷರು ಮಾಹಿತಿ ನೀಡಿದರು.
ದಸರಾ ಸಮಿತಿ ಕಾರ್ಯಧ್ಯಕ್ಷರಾದ ರಮೇಶ್ ಅವರು ಮಾತನಾಡಿ ದಸರಾದ ಅಂದಾಜು ಪಟ್ಟಿಯ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು.
ದಸರಾ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಬೇಕು. ವಿದ್ಯುತ್ ಮಾರ್ಗ ಸರಿಪಡಿಸುವುದು, ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಹಾಗೆಯೇ ಗೋಣಿಕೊಪ್ಪ ದಸರಾ ಸಂಬಂಧಿದಂತೆ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾದ ಬಿ.ಎನ್.ಪ್ರಕಾಶ ಅವರು ಶೋಭಾಯಾತ್ರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.ಗೋಣಿಕೊಪ್ಪ ದಸರಾ ಸಮಿತಿಯ ಸಿ.ಕೆ.ಬೋಪಣ್ಣ ಅವರು ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು ದಸರಾ ಆಚರಣೆಗೆ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು, ವಿಜಯದಶಮಿಯ ರಾತ್ರಿ ದಶಮಂಟಪಗಳ ಶೋಭಾಯಾತ್ರೆಯನ್ನು ಬೇಗ ಆರಂಭಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವಂತಾಗಬೇಕು ಎಂದರು.
ಎಂ.ಬಿ.ದೇವಯ್ಯ ಅವರು ಮಾತನಾಡಿ ದಸರಾ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರವಾಸಿ ಸ್ಥಳಗಳಿಗೆ 6 ಗಂಟೆಯ ನಂತರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಕೋರಿದರು. ಮನು ಮಂಜುನಾಥ್ ಅವರು ದಶಮಂಟಪಗಳ ಶೋಭಾಯಾತ್ರೆ ಬಗ್ಗೆ ಮಾಹಿತಿ ನೀಡಿದರು. ಮದ್ಯ ಮಾರಾಟ ನಿಷೇಧ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.
ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಇತರರು ಇದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಮತ್ತು ಶಾಸಕರು ಈ ಹಿಂದಿನಂತೆ ದಸರಾ ನಡೆಯಲಿದೆ. ಧ್ವನಿವರ್ಧಕ ಬಳಕೆ ಮತ್ತಿತರ ಸಂಬಂಧ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post