ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಜೆಪಿ ವಿಶ್ವದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದೆ. ಅದು ಕೇವಲ ರಾಜಕೀಯ ಪಕ್ಷವಲ್ಲ; ಅದು ಸೇವಾ ಸಂಸ್ಥೆಯಾಗಿಯೂ ಗುರುತಿಸಿಕೊಂಡಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ಡಾ. ಕೆ. ಲಕ್ಷ್ಮಣ್ ಅವರು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ಇಂದು ಹನೂರು ತಾಲ್ಲೂಕು, ಗೌರಿಶಂಕರ ಕಲ್ಯಾಣ ಮಂಟಪ ಹತ್ತಿರ “ಹಳ್ಳಿಗೊಂದು ಅರಳಿ” ಎನ್ನುವ ಹೆಸರಿನ ಅಡಿಯಲ್ಲಿ ನಡೆದ ಸಸಿ ನೆಡುವ, ಬೀಜದ ಉಂಡೆ ಬಿತ್ತುವ ಮತ್ತು ಆರೋಗ್ಯ ಸೇವಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ವರೆಗೆ ಪಕ್ಷವು ಸೇವಾ ಪಾಕ್ಷಿಕವನ್ನು ಆಚರಿಸುತ್ತಿದೆ ಎಂದು ತಿಳಿಸಿದರು.
ಸೆ.25ರಂದು ದೀನದಯಾಳ್ ಉಪಾಧ್ಯಾಯರ ಜಯಂತಿಯನ್ನೂ ಪಕ್ಷವು ಆಚರಿಸುತ್ತಿದೆ. ರಾಜಕೀಯದ ಜೊತೆಜೊತೆಗೇ ಸೇವೆಯನ್ನೂ ಪ್ರಮುಖ ಉದ್ದೇಶವನ್ನಾಗಿ ಬಿಜೆಪಿ ಜಾರಿಗೊಳಿಸುತ್ತಿದೆ ಎಂದು ಅವರು ವಿವರಿಸಿದರು.
ಕೋವಿಡ್ ಸಂದರ್ಭದಲ್ಲೂ ಸರಕಾರದ ಜೊತೆಗೇ ಪಕ್ಷವು ವಿವಿಧ ಸೇವಾಕಾರ್ಯಗಳನ್ನು ಹಮ್ಮಿಕೊಂಡಿತ್ತು. ಜನರಿಗೆ ನೆರವಾಗಿ ಪ್ರಾಣರಕ್ಷಣೆ ಮಾಡಿತ್ತು ಎಂದು ತಿಳಿಸಿದರು. ಸ್ವದೇಶಿ ಲಸಿಕೆಗಳ ಸಂಶೋಧನೆ ಮೂಲಕ ಮೋದಿಜಿ ಅವರ ನೇತೃತ್ವದ ಸರಕಾರವು ಮಹತ್ವದ ಸಾಧನೆ ಮಾಡಿತ್ತು ಎಂದು ನೆನಪಿಸಿದರು.
Also read: ಕಾರು ಢಿಕ್ಕಿ ಹೊಡೆದು ಪಲ್ಟಿಯಾದ ಆಟೋ: ತಪ್ಪಿದ ಭಾರೀ ಅನಾಹುತ
ಒಬಿಸಿ ಮೋರ್ಚಾ ವತಿಯಿಂದ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿದ ಮೋರ್ಚಾದ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು. ದೇಶದ ಸರ್ವತೋಮುಖ ಅಭಿವೃದ್ಧಿ, ಸ್ವಚ್ಛತಾ ಕಾರ್ಯಕ್ಕೆ ಪ್ರಧಾನಿಯವರು ನೀಡಿದ ಮಹತ್ವ ಅಭಿನಂದನೀಯ. 10 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ಮಹಿಳೆಯರ ಆತ್ಮಗೌರವ ಕಾಪಾಡಿದ ಪ್ರಮುಖ ಕಾರ್ಯ ಎಂದ ಅವರು, ಉಜ್ವಲಾ ಗ್ಯಾಸ್ ಸಂಪರ್ಕ, ಮನೆ ನಿರ್ಮಾಣ, ಹರ್ ಘರ್ ನಲ್ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಜನೌಷಧಿ ಯೋಜನೆ, ಆಯುಷ್ಮಾನ್ ಯೋಜನೆ ಜಾರಿಗೊಳಿಸಿದ ಮೋದಿಜಿ ಅಭಿನಂದನಾರ್ಹರು. ರಾಜ್ಯದಲ್ಲೂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ವಿವಿಧ ಮೋರ್ಚಾಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕಳೆದ ವರ್ಷ ಒಬಿಸಿ ಮೋರ್ಚಾವು 5 ಲಕ್ಷ ಬೀಜದ ಉಂಡೆ ಬಿತ್ತಿತ್ತು. ಈ ಬಾರಿ ಅರಳಿ ಗಿಡ ನೆಡಲಾಗುತ್ತಿದೆ ಎಂದು ತಿಳಿಸಿದರು.
ಅರಳಿಮರ ಕರೆಯಡಿ ಹಳ್ಳಿಗೊಂದು ಅರಳಿ ಸಸಿ, ಅತ್ತಿ, ಬೇವು ಮತ್ತಿತರ ಸಸಿಗಳನ್ನು ನೆಡಲಾಗುತ್ತಿದೆ. 1.5 ಲಕ್ಷದಿಂದ 2 ಲಕ್ಷ ಸಸಿಗಳನ್ನು ನೆಡಲಾಗುವುದು. 2 ಲಕ್ಷ ಬೀಜದ ಉಂಡೆ ಬಿತ್ತಲಾಗುತ್ತದೆ ಎಂದು ವಿವರ ನೀಡಿದರು.
ಆರೋಗ್ಯವಂತ ಮನಸ್ಸು, ದೇಹ ನಮ್ಮ ದೇಶದ ಆಸ್ತಿ. ರಾಜ್ಯದಾದ್ಯಂತ ಇಂಥ ಶಿಬಿರಗಳು ನಡೆಯುತ್ತಿದೆ. ಅಕ್ಟೋಬರ್ ಅಂತ್ಯದಲ್ಲಿ ಗುಲ್ಬರ್ಗದಲ್ಲಿ 2 ಲಕ್ಷ ಜನರ ಒಬಿಸಿ ಸಮಾವೇಶವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಸೇವಾ ಕಾರ್ಯ ನಿರಂತರವಾಗಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪಕ್ಷದ ರಾಜ್ಯ ಸಹ ಪ್ರಭಾರಿಡಿ.ಕೆ.ಅರುಣಾ, ಪಕ್ಷದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು, ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್‍ಬಾಬು ಮತ್ತು ವಿವೇಕಾನಂದ ಡಬ್ಬಿ ಅವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post