ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಮ್ಮ ಭಾರತ ದೇಶದಲ್ಲಿ ಮಹಿಳೆಯರ ಸಂಸ್ಕಾರ ಹಾಗೂ ಅಧ್ಯಾತ್ಮಿಕ ಶಕ್ತಿಯಿಂದಾಗಿ ಇಂದಿಗೂ ಸಹ ಧರ್ಮ ಉಳಿದಿದೆ ಎಂದು ಅವಧೂತ ಗೌರಿ ಗದ್ದೆಯ ವಿನಯ್ ಗುರೂಜಿ Gowri Gadde Vinay Guruji ಅಭಿಪ್ರಾಯಪಟ್ಟಿದ್ದಾರೆ.
ವಿನಯ್ ಗುರೂಜಿ ಭಕ್ತ ವೃಂದದಿಂದ ಭದ್ರಾವತಿ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ದುರ್ಗಾಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನ ಮಾನ ನೀಡಲಾಗಿದೆ. ಪುರುಷರಿಗಿಂತಲೂ ಮಹಿಳೆಯರಿಗೆ ಅಧ್ಯಾತ್ಮಿಕ ಶಕ್ತಿ ಹೆಚ್ಚು. ಹೀಗಾಗಿ, ಸ್ತ್ರೀಯರಿಂದಲೇ ಇಂದಿಗೂ ನಮ್ಮ ನೆಲದಲ್ಲಿ ಧರ್ಮ ಉಳಿದಿದೆ. ಭಾವನೆಯ ರಥವೇ ಭಾರತವಾಗಿದೆ. ಇಂತಹ ಸುಸಂಸ್ಕೃತ ಸಂಸ್ಕಾರಕ್ಕೆ ವಿಶ್ವವೇ ತಲೆ ಬಾಗುತ್ತಿದೆ ಎಂದರು.
ಹಿಂದೆ ನಮ್ಮ ಭಾರತ ಎಂತಹ ಸಂಸ್ಕಾರವನ್ನು ಹೊಂದಿತ್ತೋ ಅದೇ ಈಗ ಮತ್ತೆ ನಿರ್ಮಾಣವಾಗಬೇಕು. ಇದರಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ದುರ್ಗಾ ಮಾತಾ ಸಹ ಹೆಣ್ಣು. ಏಳು ಜನ್ಮದ ಶಾಪಗಳನ್ನು ತೊಳೆಯುವ ಶಕ್ತಿಯನ್ನು ದುರ್ಗಾಸಪ್ತಶತಿ ಹೊಂದಿದೆ. ಒಂದು ಕುಟುಂಬನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಶಕ್ತಿಯೂ ಸಹ ಒಂದು ಹೆಣ್ಣಿಗೆ ಇದೆ. ಹೀಗಾಗಿ ಪ್ರತಿ ಮಹಿಳೆಯೂ ದುರ್ಗಾಸಪ್ತಶತಿಯನ್ನು ಪಾರಾಯಣ ಮಾಡಬೇಕು ಎಂದರು.
ಭಾರತ ಎನ್ನುವುದು ಜಗತ್ತಿನ ದೇವರ ಕೋಣೆ, ಉಳಿದ ರಾಷ್ಟ್ರಗಳೆಲ್ಲಾ ಭೋಗದ ನೆಲಗಳು. ಇದಕ್ಕೆ ಇತಿಹಾಸದಲ್ಲಿ ನಮ್ಮ ಸಂಸ್ಕೃತಿಯ ಪುಟಗಳನ್ನು ನೋಡಿದರೆ ತಿಳಿಯುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದ ಇಂದು ಬಹಳಷ್ಟು ಮಂದಿಯ ಸಂಸ್ಕಾರ ಹಾಳಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶಗಳಲ್ಲಿ ಇಂತಹ ವಾತಾವರಣ ಹೆಚ್ಚು ಕಾಣಿಸುತ್ತದೆ. ಇದನ್ನು ಬದಲಿಸಿ, ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.
ಆಚಾರ್ಯತ್ರಯರು, ಬಸವಣ್ಣ, ಗಾಂಧಿ, ಅಂಬೇಡ್ಕರ ಸೇರಿದಂತೆ ಎಲ್ಲ ಮಹಾನುಭಾವರು ಯಾವುದೇ ಒಂದು ಧರ್ಮ ಹಾಗೂ ಜಾತಿಗೆ ಸೀಮಿತವಲ್ಲ. ಬದಲಾಗಿ, ನಮ್ಮ ಸಮಾಜವನ್ನು ಉದ್ಧರಿಸಲು ಅವತರಿಸಿದ ಹರಿಕಾರರು. ಇವರುಗಳ ಬಗ್ಗೆ ಇಂದು ವಿದೇಶಗಳಲ್ಲಿ ಅಧ್ಯಯವಾಗುತ್ತಿದೆ. ಬದಲಾಗಿ ನಮ್ಮಲ್ಲಿಯೇ ಇನ್ನೂ ಹೆಚ್ಚು ಹೆಚ್ಚು ಅಧ್ಯಯನವಾಗಬೇಕು ಎಂದರು.
ಇಂದಿನ ಯುವ ಪೀಳಿಗೆಯಲ್ಲಿ ಹೊಟ್ಟೆಕಿಚ್ಚು ಎನ್ನುವುದು ಇಲ್ಲ. ಪ್ರತಿಯೊಬ್ಬರೂ ಮುಗ್ದವಾಗಿ ಜೀವಿಸುವುದನ್ನು ಕಲಿಯಬೇಕು. ಮುಗ್ದತೆಗೆ ಎಂದಿಗೂ ಶಿವ ಒಲಿಯುತ್ತಾನೆ. ಪ್ರತಿಯೊಬ್ಬರ ಬದುಕಿನಲ್ಲೂ ಬೆಳಕು ಮೂಡಬೇಕು. ಆಗ ಮಾತ್ರ ಬದುಕು ಬಂಗಾರವಾಗುತ್ತದೆ ಎಂದರು.
ಅರಿವಿನಿಂದಾಗಿ ಜ್ಞಾನ ಹೆಚ್ಚಾಗುತ್ತದೆ. ಸೂಕ್ಷ್ಮ ಶರೀರ ಮಂತ್ರದಿಂದ ಶುದ್ಧಿಯಾಗುತ್ತದೆ. ಇದಕ್ಕಾಗಿ ಗಾಯತ್ರಿ ಮಂತ್ರ ಜಪ ಮಾಡಬೇಕು. ಇದರಿಂದಾಗಿ ಆತ್ಮ ಹಾಗೂ ಮನಸ್ಸು ಶುದ್ಧಿಯಾಗುತ್ತದೆ. ಈ ಜಪ ಮಾಡುವುದಕ್ಕೆ ಯಾವುದೇ ಬೇಧ ಭಾವವಿಲ್ಲ ಎಂದರು.
ಒಂದೆಡೆ ಸಮಾಜದಲ್ಲಿ ಕೂಡಿ ಬಾಳುವ ಸಂಸ್ಕೃತಿ ಮರೆಯಾಗುತ್ತಿದ್ದರೆ, ಇನ್ನೊಂದೆಡೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇದು ನಮ್ಮ ಸಂಸ್ಕೃತಿಗೆ ಮಾರಕವಾಗಿದೆ. ತಂದೆ ತಾಯಿಗಳೂ ಹಾಗೂ ಹಿರಿಯರು ಇದ್ಧಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧಾ ಎನಿಸಿಕೊಳ್ಳುತ್ತದೆ. ಹೀಗಾಗಿ, ಪೋಷಕರನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ನೋಡಿಕೊಳ್ಳುವ ಮಕ್ಕಳು ಎಂದಿಗೂ ಸುಖವಾಗಿರುತ್ತಾರೆ ಎಂದರು.
ಕೂಡಿ ಬಾಳುವ ಮನಃಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮಾತ್ರವಲ್ಲ, ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಲು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಸಂಬಂಧಗಳಲ್ಲಿ ಸುಳ್ಳು ಹೇಳುವುದು ಸಲ್ಲ. ಸುಳ್ಳು ಹೇಳುವ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ವ್ರತಗಳಲ್ಲಿ ಸತ್ಯ ವ್ರತವೇ ದೊಡ್ಡದು ಎಂಬುದನ್ನು ಸದಾ ನೆನಪಿನಲ್ಲಿ ಇಡಬೇಕು ಎಂದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ವಿನಯ್ ಗುರೂಜಿ ಅವರು ಇಂದು ನಗರಕ್ಕೆ ಆಗಮಿಸಿರುವುದು ನಮ್ಮೆಲ್ಲರ ಭಾಗ್ಯ. ಗುರೂಜಿಯರ ಆರ್ಶೀವಾದ ಪಡೆದ ನಮ್ಮ ಕುಟುಂಬಕ್ಕೆ ಬಹಳಷ್ಟು ಒಳ್ಳೆಯದಾಗಿದೆ. ಇದೇ ರೀತಿಯ ಇಡಿಯ ಭದ್ರಾವತಿ ನಗರದ ಎಲ್ಲ ನಾಗರಿಕರಿಗೆ ಒಳ್ಳೆಯದಾಗಬೇಕು. ಇದಕ್ಕಾಗಿ ಗುರುಗಳು ಅನುಗ್ರಹಿಸಬೇಕು ಎಂದು ಕೋರಿದರು.
ನಗರಸಭೆ ಮಹಿಳಾ ಪೌರಕಾರ್ಮಿಕರಿಗೆ ಭಕ್ತವೃಂದದ ವತಿಯಿಂದ ಸನ್ಮಾನಿಸಲಾಯಿತು. ಸುಮಾರು 150ಕ್ಕೂ ಅಧಿಕ ಮಹಿಳೆಯರು ದುರ್ಗಾಸಪ್ತಶತಿ ಪಾರಾಯಣ ಮಾಡಿದರು.
ನಗರಕ್ಕೆ ಆಗಮಿಸಿದ ವಿನಯ್ ಗುರೂಜಿ ಅವರನ್ನು ಬೈಕ್ ರ‍್ಯಾಲಿ ಮೂಲಕ ಕರೆತರಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಚಾಮುಂಡೇಶ್ವರಿ ಭಾವಚಿತ್ರಕ್ಕೆ ಗುರೂಜಿ ಪುಷ್ಪನಮನ ಸಲ್ಲಿಸಿದರು.
ನಗರಸಭೆ ಅಧ್ಯಕ್ಷೆ ಅನುಸುಧಾ ಪಳನಿ ಮೋಹನ್, ಉಪಾಧ್ಯಕ್ಷ ಚನ್ನಪ್ಪ, ಪ್ರಮುಖರಾದ ಮೂರ್ತಿ, ಭಾಗ್ಯ, ನರಸಿಂಹಾಚಾರ್, ಶಾಸಕರ ಕುಟುಂಬಸ್ಥರು ಇದ್ದರು. ಗುರೂಜಿಯವರ ದರ್ಶನಕ್ಕಾಗಿ ನಗರದ ವಿವಿದೆಢೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ದುರ್ಗಾಸಪ್ತಶತಿ ಪಾರಾಯಣ ಹಾಗೂ ದೆವರ ಭಜನೆ, ಹಾಡುಗಳನ್ನು ಹಾಡಿದರು. ಗುರುಗಳಿಂದ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು.
ನಗರಸಭಾ ಆಯುಕ್ತ ಮನುಕುಮಾರ್, ಅಧ್ಯಕ್ಷೆ ಅನುಸುಧಾ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿಸಮಿತಿ ಅದ್ಯಕ್ಷ ಸುದೀಪ್ ಸೇರಿದಂತೆ ಅನೇಕ ಗಣ್ಯರು ಸಾವಿರಾರು ಜನರು ಕಾರ್ಯಕ್ರಲದಲಿ ಭಾಗವಹಿಸಿ ಅವದೂತರಿಂದ ಆಶೀರ್ವಾದ ಪಡೆದು ಫಲ ಸ್ವೀಕರಿಸಿದರು.
ಕಳಸಪೂರ್ವಕವಾಗಿ ಗುರುಗಳನ್ನು ಸ್ವಾಗಿತಿಸಲಾಯಿತು. ಅವದೂತರು ಮಗುವೊಂದನ್ನು ಹಾಗೂ ಹಿರಿಯ ಮಹಿಳೆಯೋರ್ವರನ್ನು ತಾವು ಕುಳಿತುಕೋಳ್ಳುವ ಆಸನದಲ್ಲಿ ಕುಳ್ಳಿರಿಸಿ ಪುಷ್ಪವೃಷ್ಠಿ ಮಾಡಿದರು.
ಪುಷ್ಪಾಸುಬ್ರಹ್ಮಣ್ಯ ಪ್ರಾರ್ಥಿಸಿ, ಭಾಗ್ಯಮೂರ್ತಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ನರಸಿಂಹಾಚಾರ್ ನಿರೂಪಿಸಿದರು. ಕಾರ್ಯಕ್ರಮದ ಆಯೋಜಕರಾದ ಬಸವರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post