ಕಲ್ಪ ಮೀಡಿಯಾ ಹೌಸ್ | ಮುಂಬೈ |
ಥಾಣೆಯ ಮಾನ್ಪಾಡಾದ ಐಸಿಐಸಿಐ ಬ್ಯಾಂಕ್‍ನಿಂದ 12 ಕೋಟಿ ರೂ. ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬ್ಯಾಂಕ್‌ನಲ್ಲಿ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೇ ಈ ದುಷ್ಕೃತ್ಯ ಎಸಗಿರುವುದು ಎನ್ನಲಾಗಿದೆ.
ಮುಂಬ್ರಾದ ನಿವಾಸಿ ಅಲ್ತಾಫ್ ಶೇಖ್ (43) ಬಂಧಿತ ಆರೋಪಿಯಾಗಿದ್ದು, ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ಈತ ಬ್ಯಾಂಕಿನ ಲಾಕರ್ ಕೀಗಳ ಕೇರ್‌ಟೇಕರ್ ಆಗಿದ್ದ. ಇದರ ಲಾಭವನ್ನು ಪಡೆದು ಅಲ್ತಾಫ್ ಶೇಖ್ ತನ್ನ ಸಹೋದರಿ ನೀಲೋಫರ್ ಸೇರಿ ಐವರೊಂದಿಗೆ ಬ್ಯಾಂಕ್‍ನಲ್ಲಿ ದರೋಡೆ ಮಾಡಲು ಒಂದು ವರ್ಷದಿಂದ ಸಂಚು ರೂಪಿಸಿ, ಇದರ ಪ್ರಕಾರವಾಗಿಯೇ ಬ್ಯಾಂಕ್‍ನಲ್ಲಿದ್ದ ಎಲ್ಲಾ ವ್ಯವಸ್ಥೆಯನ್ನು ಗಮನಿಸಿ, ಆ ಬಳಿಕ ಅಲ್ತಾಫ್ ಹಾಗೂ ಆತನ ಸಹಚರರು ಸೇರಿ ಜು.12 ರಂದು ಕಳ್ಳತನ ಮಾಡಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಎರಡು ತಿಂಗಳುಗಳಲ್ಲಿ ಆರೋಪಿ ಅಲ್ತಾಫ್ ಶೇಖ್ ಹಾಗೂ ಆತನ ಸಹೋದರಿ ನೀಲೋಫರ್‌ನನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಆರೋಪಿ ಅಲ್ತಾಫ್ ಶೇಖ್ ತನ್ನ ಪ್ಲ್ಯಾನ್ ಪ್ರಕಾರದಂತೆ ಎಸಿ ಡಕ್ಟ್‍ನೊಳಗೆ ಒಳ ಹೋಗಿ ಹಾಗೂ ಸಿಸಿಟಿವಿ ಫೂಟೇಜ್ ಅನ್ನು ಧ್ವಂಸಗೊಳಿಸಿ ಹಣ ಕದಿಯುವ ಸಂದರ್ಭದಲ್ಲಿ ಅಲರಾಮ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಾರನೇ ದಿನ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಘಟನೆ ಬಳಿಕ ಅಲ್ತಾಫ್ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗುರುತನ್ನು ಬದಲಾಯಿಸಿಕೊಂಡು ಬುರ್ಕಾ ಹಾಕಿ ಓಡಾಡುತ್ತಿದ್ದ.
ಅಲ್ತಾಫ್ ಸಹೋದರಿ ನೀಲೋಫರ್ ತನ್ನ ಮನೆಯಲ್ಲಿ ಸ್ವಲ್ಪ ಹಣವನ್ನು ಬಚ್ಚಿಟ್ಟಿದ್ದಳು. ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿ ಎಂದು ದಾಖಲಿಸಿ ಬಂಧಿಸಲಾಗಿತ್ತು. ಈ ವೇಳೆ ದರೋಡೆಯ ಎಲ್ಲಾ ಸತ್ಯವನ್ನು ಹಾಗೂ ಅಲ್ತಾಫ್ ಎಲ್ಲಿದ್ದಾನೆ ಎನ್ನುವುದರ ಕುರಿತು ಬಾಯ್ಬಿಟ್ಟಿದ್ದಾಳೆ. ಅದಾದ ಬಳಿಕ ಆಕೆಯ ಮಾಹಿತಿಯನ್ನು ಆಧರಿಸಿ ಪುಣೆಯಲ್ಲಿ ಅಲ್ತಾಫ್ ಶೇಖ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಬ್ಯಾಂಕ್‍ನಿಂದ ಕದ್ದ 12.20 ಕೋಟಿಯಲ್ಲಿ ಸುಮಾರು 9 ಕೋಟಿ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post