ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಬಲವಾನ್ ಇಂದ್ರಿಯಗ್ರಾಮಃ ವಿದ್ವಾಂಸಮಪಿ ಕರ್ಷತಿ||
ಇದರ ಅರ್ಥ, ಅತ್ಯಂತ ಪ್ರಬಲವಾದ ಇಂದ್ರಿಯಗಳ ಸಮೂಹವು ಎಂತಹ ವಿದ್ವಾಂಸರನ್ನು ಕೂಡ ಸೆಳೆಯುತ್ತದೆ. ಹಾಗಾದರೆ ನಾವು ಇಂದ್ರಿಯ ನಿಗ್ರಹ ಹೇಗೆ ಮಾಡಬೇಕು? ಶ್ರೀ ಮದ್ಭಗವದ್ಗೀತೆಯು ಅಪರೋಕ್ಷಜ್ಞಾನವನ್ನು ಹೇಗೆ ಸಂಪಾದಿಸಬೇಕು ಎಂಬುದಕ್ಕೆ ಇಂದ್ರಿಯ ನಿಗ್ರಹದಿಂದ ಸಂಪಾದಿಸಬಹುದು ಎಂಬುದಾಗಿ ಉತ್ತರ ನೀಡುತ್ತದೆ. ಆದರೆ ವಸ್ತುತಸ್ತು, ಅಪರೋಕ್ಷ ಜ್ಞಾನ ಬರುವ ತನಕ ಇಂದ್ರಿಯ ನಿಗ್ರಹ ಕಷ್ಟಸಾಧ್ಯ. ಆದರೆ ಇಂದ್ರಿಯವನ್ನು ಹತೋಟಿಗೆ ತಂದುಕೊಳ್ಳುವ ತನಕ ಅಪರೋಕ್ಷ ಜ್ಞಾನವಾಗುವುದಿಲ್ಲ. ಹಾಗಾದರೆ, ನಮಗೆ ಅಪರೋಕ್ಷ ಜ್ಞಾನವೂ ಆಗುವುದಿಲ್ಲ. ಇಂದ್ರಿಯ ನಿಗ್ರಹವೂ ಆಗುವುದಿಲ್ಲ. ಎಂಬ ಶಂಕೆ ಬಂದರೆ ಅದಕ್ಕೆ ಉತ್ತರವನ್ನು ಹೀಗೆ ಹೇಳಬಹುದಾಗಿದೆ.
ಇಂದ್ರಿಯ ನಿಗ್ರಹವನ್ನು ಅನೇಕ ವಿಧದಲ್ಲಿ ಮಾಡಬಹುದು. ಮೊದಲನೆಯ ವಿಧಾನ ಎಂಬುದಾಗಿ ಭಗವದ್ಗೀತೆಯು ಹೇಳುವುದು ಆಹಾರದ ತ್ಯಾಗವನ್ನು. ಅಂದರೆ ಆಹಾರನ್ನೂ ನಾವು ತ್ಯಜಿಸುವುದರಿಂದ ನಾವು ಇಂದ್ರಿಯನಿಗ್ರಹವನ್ನು ಸಾಧಿಸಬಹುದು. ಆದರೆ ಆಹಾರದ ತ್ಯಾಗ ಕಷ್ಟ ಸಾಧ್ಯ. ಮತ್ತೊಂದು ವಿಧಾನ ಎಂದರೆ, ಪ್ರಾಣಾಯಾಮ, ಪ್ರತ್ಯಾಹಾರ, ಆಸನಗಳು, ಯೋಗಾಭ್ಯಾಸ ಮೊದಲಾದವುಗಳಿಂದ ಸಾಧಿಸಬಹುದು. ಆದರೆ ಇಂದ್ರಿಯನಿಗ್ರಹಕ್ಕೆ ಬೇಕಾದ ಹಾಗೆ ನಾವು ಯೋಗಾಸನಗಳನ್ನು ಮಾಡುವುದಿಲ್ಲವಾದ್ದರಿಂದ, ಈ ವಿಧಾನವೂ ಸರಿಹೋಗುವುದಿಲ್ಲ. ಹಾಗಾದರೆ ಇಂದ್ರಿಯ ನಿಗ್ರಹಕ್ಕೆ ಸುಲಭೋಪಾಯ ಯಾವುದು?
ಭಗವದ್ಧ್ಯಾನ ಎಂಬುದೇ ಇದಕ್ಕೆ ಉತ್ತರ. ಭಾಗವತ, ಮಹಾಭಾರತ ಮೊದಲಾದ ಗ್ರಂಥಗಳಲ್ಲಿ ನಾವು ಭಗವಂತನವಪಾರಮ್ಯವನ್ನು ತಿಳಿದು, ಈ ಹಿನ್ನೆಲೆಯನ್ನು ಯಥಾಶಕ್ತಿ ಭಗವಂತನ ಧ್ಯಾನವನ್ನು ಮಾಡುತ್ತಿದ್ದರೆ, ಒಂದು ದಿನ ಭಗವಂತನ ಅಪರೋಕ್ಷ ಜ್ಞಾನವನ್ನು ಪಡೆಯಬಹುದು. ಹೀಗಾಗಿ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರೆ ಭಗವಂತನ ಮಹಿಮೆಯನ್ನು ಶ್ರವಣ ಮಾಡುವುದು. ಅದನ್ನು ಹೆಚ್ಚು ಚಿಂತನ (ಮನನ) ಮಾಡುವುದು, ಈ ಹಿನ್ನೆಲೆಯಲ್ಲಿ ಧ್ಯಾನ ಮಾಡಬೇಕು.
(ನಾಳಿನ ಲೇಖನ: ಫಲ ನೀಡುವ ಕೆಲಸಗಳು ಯಾವುವು?ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post