ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಅಮೇರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಟಾಪ್ ಶೇ. 02ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಡಾ. ಬಿ. ಜೆ. ಗಿರೀಶ್ ಮತ್ತು ಡಾ. ಬಿ. ಇ. ಕುಮಾರಸ್ವಾಮಿ ಸ್ಥಾನ ಮತ್ತೊಮ್ಮೆ ಪಡೆದಿದ್ದಾರೆ.
ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟಾನ್‌ಫೋರ್ಡ್ ವಿವಿಯ ಜೆರೋಯಿನ ಬಾಸ್, ಕೆವಿನ್ ಬೋಯಾಕ್ ಮತ್ತು ಡಾ. ಜಾನ್ ಇವೊನ್ನಿಡಿಸ್ ಸಂಶೋಧನಾ ತಂಡವು ವಿಶ್ವದ ಅಗ್ರ ಶೇ. 2 ವಿಜ್ಞಾನಿಗಳ ಡೇಟಾಬೇಸ್ ಅನ್ನು ಅ. 10ರಂದು ಬಿಡುಗಡೆ ಮಾಡಿದ್ದು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹಲೇಖನಗಳು, ಹೆಚ್-ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಾಗತಿಕ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶವೊಂದನ್ನು ಪ್ರಕಟಿಸಿದ್ದಾರೆ.
Also read: ಗಣಿ ನೀತಿ ಷರತ್ತು ಉಲ್ಲಂಘನೆ ಹಿನ್ನೆಲೆ ಗುತ್ತಿಗೆದಾರರ ವಾಹನ ತಡೆದು ಗ್ರಾಮಸ್ಥರ ಪ್ರತಿಭಟನೆ
ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176 ಉಪವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿಜೀವಮಾನ ಸಾಧಕರು ಮತ್ತು 2022ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ.
2022ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 50,440ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣಿತವಿಜ್ಞಾನ ಸಹಪ್ರಾಧ್ಯಾಪಕ ಡಾ. ಬಿ.ಜೆ. ಗಿರೀಶ್ ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳ ಕುರಿತ ಅತ್ಯುತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸತತ ನಾಲ್ಕನೇ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧನೆಯನ್ನು ಮಾಡಿದ್ದಾರೆ.
ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ. ಇ. ಕುಮಾರಸ್ವಾಮಿ 1,63,473ನೇ ಸ್ಥಾನದಲ್ಲಿದ್ದು, ಸತತ ಎರಡನೇ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ಭಾರತದ ವಿವಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2000 ಕ್ಕೂ ಅಧಿಕ ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post