ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತವಾಗಿ ಬರುವ ನವೆಂಬರ್ 10 ಮತ್ತು 11 ರಂದು ಧಾರವಾಡದಲ್ಲಿ 2022-23 ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 14 ಮತ್ತು 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 14 ಮತ್ತು 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಕ್ರೀಡಾಕೂಟವನ್ನು ನವೆಂಬರ್ 10 ಮತ್ತು 11 ರಂದು ಆಯೋಜಿಸಲಾಗುವುದು. ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಕ್ರೀಡಾಕೂಟದಲ್ಲಿ 10 ಜಿಲ್ಲೆಗಳಿಂದ, 140 ಬಾಲಕರು ಮತ್ತು 220 ಬಾಲಕಿಯರು ಭಾಗವಹಿಸಲಿದ್ದಾರೆ. ಜಿಮ್ನಾಸ್ಟಿಕ್ಸ್ ತಂಡಗಳ ವ್ಯವಸ್ಥಾಪಕರಾಗಿ 10 ಜನ ಹಾಗೂ ತರಬೇತುದಾರರಾಗಿ 10 ಜನ ದೈಹಿಕ ಶಿಕ್ಷಕರು ಪಾಲ್ಗೊಳ್ಳುವರು. ಒಟ್ಟು 390 ಜನ ಜಿಮ್ನಾಸ್ಟಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಬಾಲಕಿಯರಿಗೆ ಧಾರವಾಡ ಕಿಲ್ಲಾ ಹತ್ತಿರದ ಕೆ.ಎನ್.ಕೆ ಬಾಲಿಕಾ ಪ್ರೌಢಶಾಲೆ, ಕರ್ನಾಟಕ ಪ್ರೌಢಶಾಲೆ, ಮರಾಠಾ ಕಾಲೋನಿಯ ಮಲ್ಲಸಜ್ಜನ ಪ್ರೌಢಶಾಲೆ, ಭಾರತ ಪ್ರೌಢಶಾಲೆ ಹಾಗೂ ಬಾಲಕರಿಗೆ ಮರಾಠಾ ಕಾಲೋನಿಯ ಬುದ್ಧ ರಕ್ಕಿತ ಪ್ರೌಢಶಾಲೆ, ವಿದ್ಯಾರಣ್ಯ ಪ್ರೌಢಶಾಲೆ, ಆರ್‍ಎಲ್‍ಎಸ್ ಪ್ರೌಢಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಅಕ್ಟೋಬರ್ 21, 22 ರಂದು ವಿಭಾಗ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 14 ಮತ್ತು 17 ವಯೋಮಿತಿಯ ಬಾಲಕ, ಬಾಲಕಿಯರ ಬೆಳಗಾವಿ ವಿಭಾಗ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿಯನ್ನು ಅಕ್ಟೋಬರ್ 21 ಮತ್ತು 22 ರಂದು ಧಾರವಾಡದಲ್ಲಿ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ನೋಂದಣಿಗೆ ಅಕ್ಟೋಬರ್ 20 ಕೊನೆಯದಿನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
Also read: ಅಪ್ಪು ಭರ್ಜರಿ ದಾಖಲೆ: ಗಂಧದ ಗುಡಿ ಟ್ರೇಲರ್ ಒಂದು ಕೋಟಿ ವೀಕ್ಷಣೆ
ವಿಭಾಗ ಮಟ್ಟದ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ 7 ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 49 ಬಾಲಕರು, 49 ಬಾಲಕಿಯರು, 14 ಜನ ತಂಡದ ವ್ಯವಸ್ಥಾಪಕರು ಮತ್ತು 14 ಜನ ತಂಡದ ತರಬೇತುದಾರರು ಸೇರಿ ಒಟ್ಟು 122 ಜನ ಭಾಗವಹಿಸಿಲಿದ್ದಾರೆ.
ನವೆಂಬರ್ 10, 11 ರಂದು ಆಯೋಜಿಸಿರುವ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಕ್ರೀಡಾಕೂಟ ಹಾಗೂ ಅಕ್ಟೋಬರ್ 21, 22 ರಂದು ನಡೆಯಲಿರುವ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಅಗತ್ಯವಿರುವ ಸಿದ್ಧತೆಗಳನ್ನು ಇಲಾಖೆಯ ಅಧಿಕಾರಿಗಳು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಊಟ, ವಸತಿ, ಕುಡಿಯುವ ನೀರು, ತುರ್ತು ಸಂದರ್ಭದ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಆರೋಗ್ಯ ಸಿಬ್ಬಂದಿ ಲಭ್ಯತೆ ಕುರಿತು ಅಗತ್ಯ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮಟ್ಟದ ಕ್ರೀಡಾಕೂಟ ಧಾರವಾಡದಲ್ಲಿ ಆಯೋಜಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ಆತಿಥ್ಯ ನೀಡಲಾಗುವುದು. ಸ್ಥಳೀಯ ಕ್ರೀಡಾ ಸಂಘ ಸಂಸ್ಥೆಗಳ ಹಾಗೂ ಜಿಲ್ಲೆಯ ಶಾಲಾ ಕಾಲೇಜು ದೈಹಿಕ ಶಿಕ್ಷಕರ ಸಹಕಾರದಲ್ಲಿ ಕ್ರೀಡಾಕೂಟ ಹಾಗೂ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಸಂಘಟಿಸಲಾಗುವುದು ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಅವರು ಸ್ವಾಗತಿಸಿ, ಜಿಮ್ನಾಸ್ಟಿಕ್ಸ ಕ್ರೀಡಾಕೂಟ ಹಾಗೂ ಬಾಸ್ಕೇಟ್ ಬಾಲ್ ಪಂದ್ಯಾವಳಿಯ ಸಿದ್ಧತೆಗಳ ಕುರಿತು ವಿವರಿಸಿದರು. ಅಪರ ಆಯುಕ್ತರ ಕಚೇರಿ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಕೆ.ಜಿ.ತಲಬಕ್ಕನವರ, ಬಾಲ ಮಾರುತಿ ಜಿಮ್ನಾಸ್ಟಿಕ್ಸ್ ಸಂಸ್ಥೆಯ ಪ್ರಾಚಾರ್ಯ ವಿ.ಜಿ. ಮುರ್ತುಗುಡ್ಡೆ, ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರು ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಕ ಬಿ.ಜಿ.ತೊಗರಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಎಸ್.ಬಿ. ಬಸಾಪೂರ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post