ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರಿಗೆ ರಾಜ್ಯದ ರೈತರ, ಬಡವರ, ಮಹಿಳೆಯರ, ಮಕ್ಕಳ, ಜನಸಾಮಾನ್ಯರ ಬಗ್ಗೆ ಕಾಳಜಿ, ಕಳಕಳಿ ಇಲ್ಲ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ವಿವಿಧ ವಿಭಾಗಗಳಿಗೆ ಇತ್ತೀಚೆಗೆ ನೂತನ ಪದಾಧಿಕಾರಿಗಳಾಗಿ ನೇಮಕಗೊಂಡ ಮುಖಂಡರಿಗೆ ಸೋಮವಾರ ಬೆಳಗ್ಗೆ ಜೆಡಿಎಸ್ ಜಿಲ್ಲಾ ಘಟಕದ ಕಛೇರಿಯ ಆವರಣದಲ್ಲಿ ಆದೇಶ ಪತ್ರ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಗರಣಗಳನ್ನು ಮಾಡಿಕೊಂಡು ಕುಂಭಕರ್ಣ ನಿದ್ರೆಗೆ ಜಾರಿದೆ. ಈಗ ಜನ ಸಂಕಲ್ಪ ಯಾತ್ರೆ ಮಾಡ್ತಿದ್ದಾರೆ. ಜನೋಪಯೋಗಿ ಕೆಲಸ ಮಾಡದ ಅವರು ಏನು ಸಂಕಲ್ಪ ಮಾಡ್ತಿದ್ದಾರೊ ಎಂಬುದು ತಿಳಿಯದಾಗಿದೆ ಎಂದರು.
ನಾವು ಟೀಮ್ ಮಾಡಿಕೊಂಡು ಜನರ ಮಧ್ಯ ಹೋಗ್ತಿವಿ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿರವರ, ದೇವೇಗೌಡರ ಆಶಯದಂತೆ ಕರ್ನಾಟಕದಲ್ಲಿ ಮಿಷನ್ 123 ಯಂತೆ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಮಾಡಿದ್ದೇವೆ. ಪಂಚರತ್ನ ಕಾರ್ಯಕ್ರಮ ಮಾಡುತ್ತೇವೆ. ನಾವು ಅಧಿಕಾರದಲ್ಲಿದ್ದಾಗ ಸಾಲಮನ್ನಾ ಸೇರಿದಂತೆ, ನಾವು ನಾಡಿನ ಒಳಿತಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೇವೆ ಎಂಬುದನ್ನು ಜನತೆಗೆ ತಿಳಿಸುತ್ತೇವೆ. ಜನತೆಗೆ ನಮ್ಮ ಯೋಚನೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ.
ಮುಂದಿನ ದಿನಗಳಲ್ಲಿ ಜನತಾದಳ ಅಧಿಕಾರಕ್ಕೆ ಬರಬೇಕು. ಬಡವರ, ರೈತರ, ಜನಸಾಮಾನ್ಯರ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬೀದರ್ ನಿಂದ ಚಾಮರಾಜನಗರದವರೆಗೂ ಸಂಘಟನೆ ಬಲಿ?ಗೊಳಿಸುವ ಕೆಲಸ ಆರಂಭಿಸಿದ್ದೇವೆ. ಜನರು ಕೂಡ ನಮ್ಮ ಪಕ್ಷಕ್ಕೆ ಬೆಂಬಲಿಸುವ ಮೂಲಕ ನಮಗೆ ಶಕ್ತಿ ಕೊಡುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ್, ಪ್ರಮುಖರಾದ ಮಾರುತಿ ಬೌದ್ಧೆ, ಗಾಲಿ ಬಾಸ್ಮಿಂ, ಸುರೇಶ್ ಸಿಂಧೆ, ಸಮ್ಮದ್ ಮನ್ನಳಿ, ಶೇಖ್ ಅಜದ್, ಅಶುಧುದೀನ್, ಐಲಿಂಜನ್ ಮಠಪತಿ, ರೇಖಾ ಬಾಚಾ, ಸಂಗೀತಾ ಪಾಟೀಲ್, ಸಂಘು ಚಿದ್ರಿ, ಅರುಣ್ ಹೊಸಪೇಟೆ, ಸೌಧ್, ಬೊಮ್ಮಗೊಂಡ ಚಿಟ್ಟಾವಾಡಿ ಸೇರಿದಂತೆ ಅನೇಕರಿದ್ದರು.
ನೂತನ ಪದಾಧಿಕಾರಿಗಳಿಗೆ ಸನ್ಮಾನ, ಆದೇಶ ಪತ್ರ ವಿತರಣೆ:
ಜೆಡಿಎಸ್ ಪಕ್ಷದ ಬೀದರ್ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಜ್ಜದ್ ಸಾಹೇಬ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದೇವೆಂದ್ರ ಸೋನೆ ಚಿದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ವಿಶ್ವನಾಥ ಕರಂಜೆ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ನಗರ ಘಟಕದ ಅಧ್ಯಕ್ಷ ಸುದರ್ಶನ್ ಸುಂದರರಾಜ್, ಬೀದರ್ ಉತ್ತರ ಕ್ಷೇತ್ರದ ಅಧ್ಯಕ್ಷ ಬಸವರಾಜ ಪಾಟೀಲ್ ಹಾರೋಗೆರೆ ಸೇರಿದಂತೆ ಅನೇಕರನ್ನು ಶಾಸಕ ಬಂಡೆಪ್ಪ ಖಾಶೆಂಪುರ್, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪೂರ್ ರವರು ಸನ್ಮಾನಿಸಿ, ಆದೇಶ ಪತ್ರ ವಿತರಿಸಿದರು.
ಜಿಲ್ಲಾ ಘಟಕದಿಂದ ಶಾಸಕರಿಗೆ, ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ:
ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮೊದಲ ಬಾರಿಗೆ ಜೆಡಿಎಸ್ ಜಿಲ್ಲಾ ಕಛೇರಿಗೆ ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ವಿವಿಧ ಗ್ರಾಮ ಪಂಚಾಯತಿ ಸದಸ್ಯರನ್ನು ಜೆಡಿಎಸ್ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post