ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿವಿಯಲ್ಲಿ ಇದೇ 9-10 ರಂದು ಎರಡು ದಿನಗಳ ಕಾಲ 14ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಸಮಾಜಶಾಸ್ತ್ರ ಸಂಘ, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘಗಳು ಒಟ್ಟಾಗಿ ವಿವಿಯ ಬಸವ ಸಭಾ ಭವನದಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಕೋವಿಡ್-19 ನಂತರದ ಭಾರತೀಯ ಸಮಾಜದ ಪುನರ್‌ರಚನೆ: ಸಮಾಜಶಾಸ್ತ್ರಕ್ಕಿರುವ ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಆಯೋಜಿಸಲಾಗಿದೆ.
ಬುಧವಾರ ಬೆಳಿಗ್ಗೆ 10 ಗಂಟೆಗೆ ಸಮ್ಮೇಳನವನ್ನು ಅಮೇರಿಕಾದ ಹೂಸ್ಟನ್ ವಿವಿಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ವಿಘ್ನೇಶ್ ಎನ್. ಭಟ್ ಉದ್ಘಾಟಿಸಲಿದ್ದಾರೆ. ಪಾಂಡಿಚೆರಿ ವಿವಿಯ ಪ್ರಾಧ್ಯಾಪಕ ಡಾ. ಮೊಹಾಂತಿ ಆಶಯ ನುಡಿಗಳನ್ನು ಆಡಲಿದ್ದು, ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಇಂದಿರಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿವಿಯ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಗುರುಲಿಂಗಯ್ಯ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಈ. ಚಂದ್ರಶೇಖರ್ ಸೇರಿದಂತೆ ವಿಭಾಗ ಮತ್ತು ವಿವಿಯ ಹಲವು ಪ್ರಾಧ್ಯಾಪಕರುಗಳು ಹಾಜರಿರಲಿದ್ದಾರೆ.
ಎರಡು ದಿನಗಳ ಸಮ್ಮೇಳನದಲ್ಲಿ ಹಲವು ದತ್ತಿ ಮತ್ತು ವಿಶೇಷ ಉಪನ್ಯಾಸಗಳನ್ನು ನೀಡಲು ದೇಶದ ಹಲವು ವಿವಿ ಮತ್ತು ಸಂಶೋಧನಾ ಸಂಸ್ಥೆಗಳಿಂದ ಸಮಾಜಶಾಸ್ತ್ರಜ್ಞರನ್ನು ಆಹ್ವಾನಿಸಲಾಗಿದೆ. ಸಮ್ಮೇಳನದಲ್ಲಿ 15 ಉಪವಿಷಯಗಳನ್ನು ರಚಿಸಿದ್ದು, ವಿವಿಧ ವಿವಿಗಳಿಂದ ಆಗಮಿಸಲಿರುವ 400ಕ್ಕೂ ಅಧಿಕ ಅಧ್ಯಾಪಕರು, ಸಂಶೋಧಕರು ತಮ್ಮ ಲೇಖನಗಳನ್ನು ಮಂಡಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















