ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿವಿಧ ಕಾರ್ಯಕ್ರಮದ ನಿಮಿತ್ತ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಗುವ ಮಾರ್ಗದುದ್ದಕ್ಕೂ ಅವರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಕೆಎಸ್’ಆರ್ ನಿಲ್ದಾಣದಲ್ಲಿ ವಂದೇ ಭಾರತ್ ಹಾಗೂ ಭಾರತ್ ಕಾಶಿ ದರ್ಶನ್ ರೈಲಿಗೆ ಚಾಲನೆ ನೀಡಿದ ನಂತರ ಪ್ರಧಾನಿಯವರು ಆನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದರು. ಇದಕ್ಕಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ ತೆರಳಲು ಮೇಕ್ರಿ ವೃತ್ತದ ಬಳಿಯಿರುವ ಏರ್ ಫೋರ್ಸ್ ಕಮಾಂಡ್ ಸೆಂಟರ್’ಗೆ ರಸ್ತೆ ಮಾರ್ಗದಲ್ಲಿ ತೆರಳಿದರು.
ಹೀಗೆ ಸಾಗುವ ಮಾರ್ಗದ ಉದ್ದಕ್ಕೂ ಪ್ರಧಾನಿಯವರನ್ನು ನೋಡಲು ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಸಾಗುವ ಮಾರ್ಗದಲ್ಲಿ ಪ್ರಧಾನಿಯವರು ಶಿಷ್ಟಾಚಾರವನ್ನು ಮೀರಿ ಏಕಾಏಕಿ ಕಾರಿನಿಂದ ಇಳಿದು ಜನರ ಬಳಿ ತೆರಳಿದರು. ಮೋದಿಯವರನ್ನು ಒಂದು ಬಾರಿ ಕಣ್ತುಂಬಿಕೊಳ್ಳಬೇಕು ನಿಂತಿದ್ದ ಜನರಿಗೆ ಇದರಿಂದ ಇನ್ನಿಲ್ಲದಂತೆ ಸಂತೋಷವಾಗಿದ್ದು, ಅವರುಗಳ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.


ಕಾರಿನಿಂದ ಇಳಿದು ಜನರ ಕಡೆಗೆ ಕೈ ಬೀಸುತ್ತಾ ತೆರಳಿದು ಮೋದಿಯವರು ಸುಮಾರು ದೂರ ಹೀಗೆ ಸಾಗಿದರು. ಆನಂತರ ಮೇಕ್ರಿ ವೃತ್ತದ ಬಳಿಯಿರುವ ಏರ್ ಫೋರ್ಸ್ ಕಮಾಂಡ್ ಸೆಂಟರ್’ಗೆ ತೆರಳಿ ಹೆಲಿಕಾಪ್ಟರ್ ಏರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿ ಪ್ರಧಾನಿಯವರು ನೂತನವಾಗಿ ನಿರ್ಮಾಣಗೊಂಡಿರುವ ಟರ್ಮಿನಲ್ 2 ಉದ್ಘಾಟನೆ ಹಾಗೂ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.
ಇದಕ್ಕೂ ಮುನ್ನ ನವದೆಹಲಿಯಿಂದ ಬೆಂಗಳೂರು ಎಚ್’ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಸ್ವಾಗತಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















